ಪರಸ್ಪರ ದ್ವೇಷಿಸುವ ದಂಪತಿಗೆ ಜೊತೆಯಾಗಿ ಬಾಳಲು ಹೇಳಲಾಗದು: ಅಲಹಾಬಾದ್ ಹೈಕೋರ್ಟ್
PHOTO : PTI
ಅಲಹಾಬಾದ್: ಪತಿ-ಪತ್ನಿ ಪರಸ್ಪರರ ವಿರುದ್ಧ ಅತಿಯಾದ ದ್ವೇಷ ಹೊಂದಿರುವ ಸಂದರ್ಭದಲ್ಲೂ ಅವರಿಗೆ ಜೊತೆಯಾಗಿ ಬಾಳಲು ಒತ್ತಾಯಿಸುವುದು ಕ್ರೂರತೆಗೆ ಸಮನಾಗಿದೆ ಎಂದು ಅಲಹಾಬಾದ್ ಹೈಕೋರ್ಟ್ ಒಂದು ಪ್ರಕರಣದಲ್ಲಿ ವಿಚ್ಛೇದನಕ್ಕೆ ಅನುಮತಿಸಿ ನೀಡಿದ ಆದೇಶದಲ್ಲಿ ಹೇಳಿದೆ.
ಇಂತಹ ಸಂದರ್ಭದಲ್ಲಿ ಮದುವೆಯನ್ನು ರದ್ದುಗೊಳಿಸುವ ಬದಲು ಜೊತೆಯಾಗಿ ಬಾಳಲು ಹೇಳುವುದು ಅವರ ಹಿತಾಸಕ್ತಿಗೆ ವಿರುದ್ಧವಾಗುತ್ತದೆ ಎಂದು ನ್ಯಾಯಮೂರ್ತಿಗಳಾದ ಸೌಮಿತ್ರ ದಯಾಳ್ ಸಿಂಗ್ ಮತ್ತು ಅರುಣ್ ಕುಮಾರ್ ಸಿಂಗ್ ದೇಶ್ವಾಲ್ ಅವರ ಪೀಠ ಹೇಳಿದೆ.
ಈ ನಿರ್ದಿಷ್ಟ ಪ್ರಕರಣದಲ್ಲಿ ಎರಡೂ ಪಕ್ಷಗಳು ಪರಸ್ಪರರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಿವೆ ಹಾಗೂ ಆಸ್ತಿ ಕುರಿತಂತೆ ವಿವಾದಗಳನ್ನೂ ಹೊಂದಿವೆ. ಅಕ್ರಮ ಸಂಬಂಧ ಹೊಂದಿದ ಆರೋಪಗಳನ್ನೂ ಹೊರಿಸಲಾಗಿದೆ. ಹೀಗಿರುವಾಗ ಜೊತೆಯಾಗಿ ಬಾಳಲು ಹೇಳಲಾಗದು, ಎಂದು ನ್ಯಾಯಾಲಯ ಹೇಳಿದೆ.
ಮೂರು ತಿಂಗಳೊಳಗೆ ಪತ್ನಿಗೆ ಖಾಯಂ ಜೀವನಾಂಶವಾದ ರೂ 1 ಕೋಟಿ ಪಾವತಿಸುವಂತೆಯೂ ನ್ಯಾಯಾಲಯ ಗಂಡನಿಗೆ ಹೇಳಿದೆ. ಈ ಜೀವನಾಂಶ ಪಾವತಿಸಲು ವಿಳಂಬವಾದಲ್ಲಿ ಅದನ್ನು ಪಾವತಿಸುವ ತನಕ ವಾರ್ಷಿಕ ಶೇ5 ಬಡ್ಡ ವಿಧಿಸಲಾಗುವುದು ಎಂದು ನ್ಯಾಯಾಲಯ ಹೇಳಿದೆ.
ಈ ಪ್ರಕರಣದಲ್ಲಿ ದಂಪತಿ 2002ರಲ್ಲಿ ವಿವಾಹವಾಗಿದ್ದರು. 2016ರಲ್ಲಿ ಪತ್ನಿಯ ಆಕ್ಷೇಪಣೆ ಇಲ್ಲದ ಕಾರಣ ಗಂಡನಿಗೆ ವಿಚ್ಛೇದನ ದೊರಕಿತ್ತು. ಆದರೆ ನಂತರ ಪತ್ನಿ ಈ ಆದೇಶ ವಾಪಸ್ ಪಡೆಯಬೇಕೆಂದು ನ್ಯಾಯಾಲಯದ ಕದ ತಟ್ಟಿದ್ದಳು. ನಂತರ ಎರಡೂ ಕಡೆಗಳ ವಾದವಿವಾದಗಳನ್ನು ಆಲಿಸಿದ ನ್ಯಾಯಾಲಯ ವಿಚ್ಛೇದನ ಮಂಜೂರುಗೊಳಿಸುವುದು ಸೂಕ್ತ ಆಯ್ಕೆ ಎಂದು ಕಂಡುಕೊಂಡಿದೆ.