ಪ್ರೀತಿಸಲು ನಿರಾಕರಿಸಿದ ಬಾಲಕಿಯ ಮನೆಗೆ ನುಗ್ಗಿ ಜೀವಂತ ಸುಟ್ಟ ದುಷ್ಕರ್ಮಿ
ಸಾಂದರ್ಭಿಕ ಚಿತ್ರ | PC : X
ಹೈದರಾಬಾದ್ : ಆಂಧ್ರಪ್ರದೇಶದ ನಂದಿಕೊಟ್ಕೂರ್ ಪಟ್ಟಣದಲ್ಲಿ 21 ವರ್ಷದ ವ್ಯಕ್ತಿಯೊಬ್ಬ ತನ್ನ ಲೈಂಗಿಕ ಚೇಷ್ಟೆಯನ್ನು ತಿರಸ್ಕರಿಸಿದ 17 ವರ್ಷದ ಬಾಲಕಿಯನ್ನು ಜೀವಂತ ಸುಟ್ಟು ಹಾಕಿದ್ದಾನೆ ಎಂದು ನಂದ್ಯಾಲ್ ಜಿಲ್ಲಾ ಪೊಲೀಸರು ತಿಳಿಸಿದ್ದಾರೆ.
ಘಟನಾ ಸ್ಥಳದಿಂದ ತಪ್ಪಿಸಿಕೊಳ್ಳಲು ಯತ್ನಿಸಿದ ಆರೋಪಿಯನ್ನು ಬಾಲಕಿಯ ಮನೆಯವರು ಮತ್ತು ನೆರೆಕರೆಯವರು ಹಿಡಿದು ಪೊಲೀಸರಿಗೆ ಒಪ್ಪಿಸಿದರು.
‘‘ಬಾಲಕಿಯ ಮನೆಗೆ ಹೋದ ಆರೋಪಿಯು ಬಾಲಕಿಯ ಕೋಣೆಯ ಬಾಗಿಲು ತಟ್ಟಿದನು. ಬಾಲಕಿ ಬಾಗಿಲು ತೆಗೆದಾಗ ಕೋಣೆಯೊಳಗೆ ಹೊಕ್ಕ ದುಷ್ಕರ್ಮಿಯು ಒಳಗಿನಿಂದ ಚಿಲಕ ಹಾಕಿದನು. ಅವನು ಬಳಿಕ ತನ್ನೊಂದಿಗೆ ತಂದಿದ್ದ ಪೆಟ್ರೋಲ್ ತುಂಬಿದ ಬಾಟಲಿಯನ್ನು ಹೊರತೆಗೆದು ಆಕೆಯ ಮೇಲೆ ಸುರಿದು ಬೆಂಕಿ ಕೊಟ್ಟನು’’ ಎಂದು ನಂದಿಕೊಟ್ಕೂರು ಪೊಲೀಸ್ ಠಾಣೆಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದರು.
ಆರೋಪಿಯ ಕಿರುಕುಳದಿಂದ ಬೇಸತ್ತು 12ನೇ ತರಗತಿ ವಿದ್ಯಾರ್ಥಿನಿಯು ಆರು ತಿಂಗಳ ಹಿಂದೆ ಬೈರೆಡ್ಡಿ ನಗರ ಕಾಲನಿಯಲ್ಲಿರುವ ತನ್ನ ಅಜ್ಜಿಯ ಮನೆಗೆ ಹೋಗಿದ್ದಳು.
‘‘ಬಾಲಕಿಯನ್ನು ಪ್ರೀತಿಸುತ್ತೇನೆ ಎಂಬುದಾಗಿ ಆರೋಪಿಯು ಹೇಳುತ್ತಿದ್ದ. ಆದರೆ, ಬಾಲಕಿಯು ಅವನ ಚೇಷ್ಟೆಯನ್ನು ತಿರಸ್ಕರಿಸಿದ್ದಳು. ಯಾವುದೇ ಕಾರಣಕ್ಕೂ ಅವನನ್ನು ಉತ್ತೇಜಿಸಬೇಡ ಎಂಬುದಾಗಿ ಬಾಲಕಿಗೆ ಹೆತ್ತವರೂ ಸೂಚಿಸಿದ್ದರು. ಅವನ ಕಿರುಕುಳವನ್ನು ತಾಳಲಾರದೆ, ತನ್ನ ಓದಿನ ಕಡೆ ಗಮನ ಹರಿಸಲು ಬಾಲಕಿಯು ತನ್ನ ಅಜ್ಜಿ ಮನೆಗೆ ಹೋಗಿದ್ದಳು. ಆದರೆ, ದುಷ್ಕರ್ಮಿಯು ಅಲ್ಲಿಯೂ ಅವಳ ಬೆನ್ನು ಬಿದ್ದಿದ್ದ’’ ಎಂದು ಪೊಲೀಸರು ಹೇಳಿದ್ದಾರೆ.
ಸೋಮವಾರ ಮುಂಜಾನೆ ಒಂದು ಗಂಟೆಯ ಸುಮಾರಿಗೆ ಬಾಲಕಿಯ ಬೊಬ್ಬೆ ಕೇಳಿ ಅಜ್ಜಿ ಎದ್ದರು. ಬಾಲಕಿಯ ಕೋಣೆಯ ಬಾಗಿಲನ್ನು ಬಡಿಯುತ್ತಾ, ಬಾಗಿಲು ತೆರೆಯುವಂತೆ ಆರೋಪಿಯನ್ನು ಅಂಗಲಾಚಿದರು. ಆದರೆ, ಬಾಲಕಿ ಸಂಪೂರ್ಣವಾಗಿ ಸುಟ್ಟ ಬಳಿಕವಷ್ಟೇ ಅವನು ಬಾಗಿಲು ತೆರೆದನು.
ತಪ್ಪಿಸಲು ಯತ್ನಿಸಿದ ದುಷ್ಕರ್ಮಿಯನ್ನು ನೆರೆಕರೆಯವರು ಹಿಡಿದು ಪೊಲೀಸರಿಗೆ ಒಪ್ಪಿಸಿದರು.