ದೆಹಲಿಗೆ ಆಗಮಿಸಿದ ವಿಶ್ವಕಪ್ ವಿಜೇತ ಟಿ20 ತಂಡಕ್ಕೆ ಭವ್ಯ ಸ್ವಾಗತ
PC: screengrab/X/BCCI
ಹೊಸದಿಲ್ಲಿ: ಬಾರ್ಬಡೋಸ್ ನಲ್ಲಿ ಟಿ20 ವಿಶ್ವಕಪ್ ಗೆದ್ದುಕೊಂಡಿರುವ ಭಾರತ ತಂಡ ಗುರುವಾರ ಮುಂಜಾನೆ ದೆಹಲಿಗೆ ಆಗಮಿಸಿದೆ. ಬಿರುಗಾಳಿಯ ಕಾರಣದಿಂದ ತಂಡದ ಪ್ರಯಾಣ ವಿಳಂಬವಾಗಿತ್ತು. ಇಂದಿರಾಗಾಂಧಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಅಪಾರ ಸಂಖ್ಯೆಯಲ್ಲಿ ಜಮಾಯಿಸಿದ್ದ ಅಭಿಮಾನಿಗಳು ತಂಡಕ್ಕೆ ಭವ್ಯ ಸ್ವಾಗತ ಕೋರಿದರು. ಏರ್ ಇಂಡಿಯಾ ವಿಶೇಷ ವಿಮಾನದಲ್ಲಿ ತಂಡವನ್ನು ಕರೆ ತರಲಾಗಿದೆ.
ರೋಹಿತ್ ಶರ್ಮಾ ನೇತೃತ್ವದ ಭಾರತ ಕ್ರಿಕೆಟ್ ತಂಡ ಎರಡನೇ ಬಾರಿಗೆ ಟಿ20 ವಿಶ್ವಕಪ್ ಗೆದ್ದಿದ್ದು, 11 ವರ್ಷಗಳ ಐಸಿಸಿ ಟ್ರೋಫಿ ಬರವನ್ನು ನೀಗಿಸಿಕೊಂಡಿದೆ. ಶನಿವಾರ ನಡೆದ ರೋಚಕ ಫೈನಲ್ನಲ್ಲಿ ಬಲಿಷ್ಠ ದಕ್ಷಿಣ ಆಫ್ರಿಕಾ ವಿರುದ್ಧ ಏಳು ರನ್ಗಳ ಜಯ ಸಾಧಿಸಿ ದೇಶಕ್ಕೆ ಪ್ರತಿಷ್ಠಿತ ವಿಶ್ವಕಪ್ ಗೆದ್ದುಕೊಟ್ಟಿತ್ತು.
ಸ್ಥಳೀಯ ಕಾಲಮಾನದ ಪ್ರಕಾರ ಬುಧವಾರ ಮುಂಜಾನೆ 4.50ಕ್ಕೆ ಬಾರ್ಬಡೋಸ್ನ ಬ್ರಿಡ್ಜ್ಟೌನ್ ಪಟ್ಟಣದಿಂದ 'ಏರ್ ಇಂಡಿಯಾ ಜಾಂಪಿಯನ್ಸ್ 2024 ವಿಶ್ವಕಪ್' ಹೆಸರಿನ ವಿಶೇಷ ಎಐಸಿ24ಡಬ್ಲ್ಯುಸಿ ವಿಮಾನ ಹೊರಟಿತ್ತು. 16 ಗಂಟೆಗಳ ತಡೆರಹಿತ ಪ್ರಯಾಣದ ಬಳಿಕ ಗುರುವಾರ ಬೆಳಿಗ್ಗೆ 6 ಗಂಟೆಗೆ ದೆಹಲಿ ತಲುಪಿತು.
ಈ ವಿಶೇಷ ವಿಮಾನಲ್ಲಿ ಭಾರತ ಕ್ರಿಕೆಟ್ ತಂಡ, ಅದರ ಬೆಂಬಲ ಸಿಬ್ಬಂದಿ, ಆಟಗಾರರ ಕುಟುಂಬದವರು, ಹಲವು ಮಂದಿ ಬಿಸಿಸಿಐ ಅಧಿಕಾರಿಗಳು ಮತ್ತು ತಂಡದ ಜತೆ ತೆರಳಿದ್ದ ಮಾಧ್ಯಮ ಪ್ರತಿನಿಧಿಗಳು ಆಗಮಿಸಿದರು. ಬೆರೇಲ್ ಚಂಡಮಾರುತದ ಕಾರಣದಿಂದಾಗಿ ವಿಶ್ವಕಪ್ ಗೆದ್ದ ಮರುದಿನವೇ ತಂಡದ ಪ್ರಯಾಣ ಸಾಧ್ಯವಾಗಿರಲಿಲ್ಲ. ದೆಹಲಿಗೆ ಆಗಮಿಸಿರುವ ಭಾರತ ತಂಡ ಬೆಳಿಗ್ಗೆ 9 ಗಂಟೆಗೆ ಪ್ರಧಾನಿ ನರೇಂದ್ರ ಮೋದಿಯವರನ್ನು ಅವರ ನಿವಾಸದಲ್ಲಿ ಭೇಟಿ ಮಾಡಲಿದೆ. ಬಳಿಕ ಮುಂಬೈಗೆ ತೆರಳಲಿದೆ. ಅಲ್ಲಿ ತೆರೆದ ಬಸ್ ನಲ್ಲಿ ಗೆಲುವಿನ ಪೆರೇಡ್ ನಡೆಯಲಿದ್ದು, ವಾಂಖೆಡೆ ಸ್ಟೇಡಿಯಂನಲ್ಲಿ ಆಯೋಜಿಸಿದ ಸಮಾರಂಭದಲ್ಲಿ ಎಲ್ಲ ಆಟಗಾರರನ್ನು ಸನ್ಮಾನಿಸಲಾಗುತ್ತದೆ.