ವೈದ್ಯನಾಗಲು ಸಜ್ಜಾಗಿರುವ ಸಮೋಸಾ ಮಾರಾಟದ ಬಾಲಕ
PC: x.com/ndtvfeed
ಹೊಸದಿಲ್ಲಿ: ಹೊಟ್ಟೆಪಾಡಿಗಾಗಿ ಹಗಲು ಸಮೋಸಾ ಮಾರಾಟ ಮಾಡುವ ಬಾಲಕನಿಗೆ ವೈದ್ಯನಾಗುವ ಕನಸು. ರಾತ್ರಿಯಾಗುತ್ತಿದ್ದಂತೆ ನೀಟ್ ಸಿದ್ಧತೆ ಮಾಡುತ್ತಿದ್ದ ವಿದ್ಯಾರ್ಥಿ ಸನ್ನಿ ಕುಮಾರ್ (18) ಇದೀಗ ಲಕ್ಷಾಂತರ ಬಡಮಕ್ಕಳ ಪಾಲಿಗೆ ಆಶಾಕಿರಣ ಮತ್ತು ಸ್ಫೂರ್ತಿಯ ಸೆಲೆಯಾಗಿದ್ದಾನೆ. ಸನ್ನಿ ಕುಮಾರ್ ವೈದ್ಯಕೀಯ ಪ್ರವೇಶ ಪರೀಕ್ಷೆ (ನೀಟ್-ಯುಜಿ)ಯಲ್ಲಿ 720ಕ್ಕೆ 644 ಅಂಕಗಳನ್ನು ಗಳಿಸಿದ್ದಾನೆ.
ಬೆಳಿಗ್ಗೆ ತರಗತಿಗೆ ತೆರಳುತ್ತಿದ್ದ ಸನ್ನಿ ಕುಮಾರ್, ಮಧ್ಯಾಹ್ನ 2 ಗಂಟೆಯ ಬಳಿಕ ಸಮೋಸಾ ಮಾರುವ ಕಾಯಕಕ್ಕೆ ಮುಂದಾಗುತ್ತಿದ್ದ. ಒಂದು ಗಂಟೆ ಅವಧಿಯಲ್ಲಿ ನೋಯ್ಡಾ ಸೆಕ್ಟರ್ 12ರಲ್ಲಿ ರಸ್ತೆಬದಿಯ ಸಮೋಸಾ ಅಂಗಡಿ ಸಜ್ಜುಪಡಿಸಿಕೊಂಡು ನಿರಂತರವಾಗಿ ಐದು ಗಂಟೆ ವ್ಯಾಪಾರದಲ್ಲಿ ನಿರತನಾಗುತ್ತಿದ್ದ. ಇಡೀ ದಿನದ ಕಠಿಣ ಪರಿಶ್ರಮದ ಬಳಿಕ ಮನೆಗೆ ಬಂದು, ತಡರಾತ್ರಿವರೆಗೂ ಓದುತ್ತಿದ್ದ. ನಿರಂತರ ಪರಿಶ್ರಮದಿಂದ ಸನ್ನಿ ಈ ಅದ್ಭುತ ಸಾಧನೆ ಮಾಡುವುದು ಸಾಧ್ಯವಾಗಿದೆ.
ಅಂಗಡಿ ಸಿದ್ಧಪಡಿಸುವ ನಡುವೆ ಎನ್ ಡಿ ಟಿವಿ ಈತನನ್ನು ಸಂಪರ್ಕಿಸಿದಾಗ, "ಇದುವರೆಗೆ ಯಾವ ಕಾಲೇಜಿಗೂ ಸೇರ್ಪಡೆಯಾಗಿಲ್ಲ. ಭವಿಷ್ಯದಲ್ಲಿ ಒಳ್ಳೆಯ ಕಾಲೇಜಿಗೆ ಸೇರುವ ಬಯಕೆ ಇದೆ" ಎಂದು ಹೇಳಿದ್ದಾನೆ.
ಫಿಸಿಕ್ಸ್ ವಾಲಾ ಸಂಸ್ಥಾಪಕ ಅಲಖ್ ಪಾಂಡೆ ಈ ಪ್ರತಿಭಾವಂತ ವಿದ್ಯಾರ್ಥಿಯನ್ನು ಭೇಟಿ ಮಾಡಿ, ಈತನ ಹಲವು ವಿಡಿಯೊಗಳನ್ನು ಶೇರ್ ಮಾಡಿದ ಬಳಿಕ ಈತನ ಸಾಧನೆ ಬೆಳಕಿಗೆ ಬಂದಿದೆ. ಒಂದು ವಿಡಿಯೊದಲ್ಲಿ ಪಾಂಡೆ, ಸನ್ನಿಯ ಬಾಡಿಗೆ ಕೊಠಡಿಗೆ ಭೇಟಿ ನೀಡಿದ್ದು, ಗೋಡೆಗೆ ತಗಲುಹಾಕಿದ್ದ ಅಧ್ಯಯನ ಟಿಪ್ಪಣಿಗಳನ್ನು ನೋಡಿ ಕಂಗಾಲಾಗಿದ್ದಾರೆ. ಆನ್ಲೈನ್ ತರಗತಿ ಮೂಲಕ ಪರೀಕ್ಷೆಗೆ ಸಜ್ಜಾಗಿದ್ದ ಸನ್ನಿ, ಮೊದಲ ಪ್ರಯತ್ನದಲ್ಲೇ ಈ ಸಾಧನೆ ಮಾಡಿದ್ದ.
ತಂದೆಯಿಂದ ವಿದ್ಯೆಗೆ ನೆರವು ಸಿಗದ ಹಿನ್ನೆಲೆಯಲ್ಲಿ ತನ್ನ ಶಿಕ್ಷಣಕ್ಕಾಗಿ ಸಮೋಸಾ ಮಾರಿ ಆದಾಯ ಗಳಿಸುತ್ತಿದ್ದ ಎನ್ನುವುದನ್ನು ಇನ್ನೊಂದು ವಿಡಿಯೊದಲ್ಲಿ ತಿಳಿಸಿದ್ದಾರೆ. ತಾಯಿ ಈತನ ಕನಸನ್ನು ಪೋಷಿಸುತ್ತಾ ಬಂದಿದ್ದಾರೆ. ಸನ್ನಿ ಹಾಗೂ ಆತನ ಕುಟುಂಬಕ್ಕೆ ಪಾಂಡೆ ಹಣಕಾಸು ನೆರವನ್ನೂ ನೀಡಿದ್ದು, ಕಾಲೇಜಿನ ಮೂಲಕ ಶಿಕ್ಷಣಕ್ಕೆ ನೆರವಾಗುವ ಭರವಸೆ ನೀಡಿದ್ದಾರೆ.
"ನಾನು ಕಠಿಣ ಪರಿಶ್ರಮ ಪಟ್ಟಿದ್ದೇನೆ. ಆದರೆ ಈ ರೀತಿ ವೈರಲ್ ಆಗಲು ಬಯಸಿಲ್ಲ. ತೀರಾ ದೊಡ್ಡ ಸಾಧನೆ ಮಾಡಿದ ಬಳಿಕ ಜನ ನನ್ನ ಬಗ್ಗೆ ತಿಳಿದುಕೊಳ್ಳಬೇಕು ಎನ್ನುವುದು ನನ್ನ ಆಸೆ" ಎಂದು ಸನ್ನಿ ಹೇಳಿದ್ದಾನೆ.