‘ನೀವು ಯಾವಾಗ ವಿವಾಹವಾಗುತ್ತೀರಿ’ ಎಂಬ ಪ್ರಶ್ನೆಗೆ ಮುಗುಳ್ನಕ್ಕ ರಾಹುಲ್ ಗಾಂಧಿ ಉತ್ತರಿಸಿದ್ದು ಹೀಗೆ…
ರಾಹುಲ್ ಗಾಂಧಿ | PC : PTI
ಹೊಸದಿಲ್ಲಿ: ಸ್ವಾತಂತ್ರ್ಯ ಬಂದಾಗಿನಿಂದಲೂ ತಮ್ಮ ಕುಟುಂಬದ ಭದ್ರಕೋಟೆಯಾಗಿರುವ ರಾಯ್ ಬರೇಲಿ ಕ್ಷೇತ್ರವನ್ನು ಉಳಿಸಿಕೊಳ್ಳಲು ರಾಯ್ ಬರೇಲಿ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾದ ರಾಹುಲ್ ಗಾಂಧಿ ಇಂದು ಚುನಾವಣಾ ಪ್ರಚಾರ ನಡೆಸಿದರು.
ತಾವು ನಾಮಪತ್ರ ಸಲ್ಲಿಸಿದಾಗಿನಿಂದ ಇದೇ ಪ್ರಥಮ ಬಾರಿಗೆ ರಾಯ್ ಬರೇಲಿಯಲ್ಲಿ ಆಯೋಜಿಸಲಾಗಿದ್ದ ಬೃಹತ್ ಸಮಾವೇಶದಲ್ಲಿ ಪಾಲ್ಗೊಳ್ಳಲು ತಮ್ಮ ಸಹೋದರಿ ಪ್ರಿಯಾಂಕಾ ಗಾಂಧಿ ವಾದ್ರಾರೊಂದಿಗೆ ರಾಹುಲ್ ಗಾಂಧಿ ರಾಯ್ ಬರೇಲಿ ಕ್ಷೇತ್ರಕ್ಕೆ ಭೇಟಿ ನೀಡಿದರು. ರಾಯ್ ಬರೇಲಿಯಲ್ಲಿ ಇದು ರಾಹುಲ್ ಗಾಂಧಿ ಅವರ ಪ್ರಥಮ ಚುನಾವಣಾ ಸಮಾವೇಶವಾಗಿತ್ತು.
ತಮ್ಮ ಭಾಷಣವನ್ನು ಮುಕ್ತಾಯಗೊಳಿಸುವ ಸಂದರ್ಭದಲ್ಲಿ, ಏನಾದರೂ ಪ್ರಶ್ನೆಗಳಿವೆಯೆ ಎಂದು ಅವರು ತಮ್ಮ ಬೆಂಬಲಿಗರನ್ನು ಪ್ರಶ್ನಿಸಿದರು. ಆಗ ಜನರ ಗುಂಪಿನಿಂದ ಮೇಲೆದ್ದ ಬೆಂಬಲಿಗನೊಬ್ಬ, “ನೀವು ಯಾವಾಗ ವಿವಾಹವಾಗುತ್ತೀರಿ?” ಎಂದು ಪ್ರಶ್ನಿಸಿದ. ಆ ಪ್ರಶ್ನೆಗೆ ಕೆಲ ಕ್ಷಣ ತಡೆದು, ನಂತರ ಮುಗುಳ್ನಕ್ಕ ರಾಹುಲ್ ಗಾಂಧಿ, “ಬೇಗ ಮಾಡಿಕೊಳ್ಳಬೇಕಾಗುತ್ತದೆ” ಎಂದು ಉತ್ತರಿಸಿದರು. ವೇದಿಕೆಯಿಂದ ಕೆಳಗಿಳಿಯುವ ಮುನ್ನ ಜನರ ಗುಂಪಿನತ್ತ ರಾಹುಲ್ ಗಾಂಧಿ ಕೈಬೀಸಿದರೆ, ಅದನ್ನು ನೋಡುತ್ತಿದ್ದ ಪ್ರಿಯಾಂಕಾ ಗಾಂಧಿ ವಾದ್ರಾ ಮುಗುಳ್ನಕ್ಕು, ಚಪ್ಪಾಳೆ ತಟ್ಟಿದರು.
2004, 2009 ಹಾಗೂ 2014ರಲ್ಲಿ ಅಮೇಥಿ ಕ್ಷೇತ್ರದಿಂದ ರಾಹುಲ್ ಗಾಂಧಿ ಗೆಲುವು ಸಾಧಿಸಿದ್ದರಾದರೂ, 2019ರ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಸ್ಮತಿ ಇರಾನಿ ಎದುರು ಅವರು ಪರಾಭವಗೊಂಡಿದ್ದರಿಂದ, ಉತ್ತರ ಪ್ರದೇಶದಲ್ಲಿನ ಕಾಂಗ್ರೆಸ್ ಹೆಜ್ಜೆ ಗುರುತುಗಳು ಕುಗ್ಗಿದ್ದವು. 2019ರ ಚುನಾವಣೆಯಲ್ಲಿ ಎರಡನೆ ಕ್ಷೇತ್ರವಾದ ವಯನಾಡ್ ನಲ್ಲಿ ಸ್ಪರ್ಧಿಸಿದ್ದ ರಾಹುಲ್ ಗಾಂಧಿ, ಅಲ್ಲಿ ಗೆಲುವು ಸಾಧಿಸುವ ಮೂಲಕ ತಮ್ಮ ಸಂಸದ ಸ್ಥಾನವನ್ನು ಉಳಿಸಿಕೊಂಡಿದ್ದರು.