ʼಎಪ್ರಿಲ್ ಫೂಲ್ʼ ಮಾಡಲು ಹೋಗಿ ಪ್ರಾಣಕಳೆದುಕೊಂಡ ವಿದ್ಯಾರ್ಥಿ
ಇಂದೋರ್: ʼಎಪ್ರಿಲ್ ಫೂಲ್ ದಿನʼವಾದ ಸೋಮವಾರದಂದು ತನ್ನ ಗೆಳೆಯನಿಗೆ ʼಪ್ರಾಂಕ್ʼ ಮಾಡಲು ಹೋದ 11ನೇ ತರಗತಿಯ ವಿದ್ಯಾರ್ಥಿಯೊಬ್ಬ ಮೃತಪಟ್ಟಿರುವ ಘಟನೆ ಮಧ್ಯಪ್ರದೇಶದ ಇಂದೋರ್ ನಲ್ಲಿ ನಡೆದಿದೆ. ಸೋಮವಾರದಂದು ತನ್ನ ಗೆಳೆಯನೊಂದಿಗೆ ವಿಡಿಯೊ ಸಂವಾದ ಮಾಡುತ್ತಿದ್ದ ವಿದ್ಯಾರ್ಥಿಯೊಬ್ಬ, ಸ್ಟೂಲ್ ಮೇಲೆ ಹತ್ತಿ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವಂತೆ ನಟಿಸಿದ್ದಾನೆ ಎಂದು ಹೇಳಲಾಗಿದೆ.
ತನ್ನ ಕತ್ತಿನ ಸುತ್ತ ಹಗ್ಗ ಬಿಗಿದುಕೊಂಡು, ಸ್ಟೂಲ್ ಮೇಲೆ ನಿಂತುಕೊಂಡಿದ್ದ ಆ ವಿದ್ಯಾರ್ಥಿಯು ತನ್ನ ಗೆಳೆಯನನ್ನು ವಂಚಿಸಲು ಆತನೊಂದಿಗೆ ನಕಲಿ ಆತ್ಮಹತ್ಯೆ ಕುರಿತು ಚರ್ಚಿಸುತ್ತಿದ್ದ ಎನ್ನಲಾಗಿದ್ದು, ಈ ಸಂದರ್ಭದಲ್ಲಿ ಸ್ಟೂಲ್ ಜಾರಿದ್ದರಿಂದ ಕತ್ತಿಗೆ ನೇಣು ಬಿಗಿದುಕೊಂಡು ಆ ವಿದ್ಯಾರ್ಥಿ ಮೃತಪಟ್ಟಿದ್ದಾನೆ ಎಂದು ವರದಿಯಾಗಿದೆ.
ಆ ಘಟನೆಗೆ ಸಾಕ್ಷಿಯಾದ ಮೃತ ಅಭಿಷೇಕ್ ಗೆಳೆಯ, ಕೂಡಲೇ ಈ ಸಂಗತಿಯನ್ನು ಆತನ ಕುಟುಂಬದವರಿಗೆ ತಿಳಿಸಿದ್ದಾನೆ. ನಂತರ ಆತನನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ, ಅಲ್ಲಿ ಅಭಿಷೇಕ್ ಮೃತಪಟ್ಟಿದ್ದಾನೆ ಎಂದು ವೈದ್ಯರು ಘೋಷಿಸಿದ್ದಾರೆ.
ಘಟನೆಯ ಕುರಿತು ಪ್ರಕರಣವನ್ನು ದಾಖಲಿಸಿಕೊಳ್ಳಲಾಗಿದ್ದು, ಇಂದೋರ್ ನ 11ನೇ ತರಗತಿ ವಿದ್ಯಾರ್ಥಿಯ ಸಾವಿನ ಬಗ್ಗೆ ತನಿಖೆ ಕೈಗೆತ್ತಿಕೊಳ್ಳಲಾಗಿದೆ ಎಂದು ಇಂದೋರ್ ನ ಹೆಚ್ಚುವರಿ ಉಪ ಪೊಲೀಸ್ ಆಯುಕ್ತ ರಾಜೇಶ್ ದಾಂಡೋತಿಯ ತಿಳಿಸಿದ್ದಾರೆ.