ʼಪತಿನಿಷ್ಠೆʼ ಪ್ರದರ್ಶಿಸಲು, ಕುದಿಯುವ ಎಣ್ಣೆಯಲ್ಲಿ ಕೈ ಮುಳುಗಿಸುವಂತೆ ಮಹಿಳೆಗೆ ಬಲವಂತ!
ಪುತಲಪಟ್ಟು (ಆಂಧ್ರಪ್ರದೇಶ): ʼಪತಿನಿಷ್ಠೆʼಯನ್ನು ಸಾಬೀತುಪಡಿಸುವ ಸಲುವಾಗಿ ಕುದಿಯುವ ಎಣ್ಣೆಯಲ್ಲಿ ಮಹಿಳೆಯ ಕೈ ಮುಳುಗಿಸುವಂತೆ ಬಲವಂತಪಡಿಸಿದ ಘಟನೆ ವರದಿಯಾಗಿದೆ.
ಈ ಸುಳಿವು ದೊರಕಿದ ಹಿನ್ನೆಲೆಯಲ್ಲಿ ಸರ್ಕಾರಿ ಅಧಿಕಾರಿಗಳು ಸಕಾಲಿಕವಾಗಿ ಮಧ್ಯಪ್ರವೇಶಿಸಿದ್ದರಿಂದ ಮಹಿಳೆಯನ್ನು ಪಾರು ಮಾಡಲಾಗಿದೆ.
ನಾಳ್ಕು ಮಕ್ಕಳ ತಾಯಿಯಾದ 50 ವರ್ಷದ ಮಹಿಳೆಗೆ ʼಪತಿನಿಷ್ಠೆʼಯನ್ನು ಸಾಬೀತುಪಡಿಸಲು ಕುದಿಯುವ ಎಣ್ಣೆಯಲ್ಲಿ ಕೈ ಮುಳಗಿಸುವಂತೆ ಬಲವಂತಪಡಿಸಲಾಗಿತ್ತು. ಚಿತ್ತೂರು ಜಿಲ್ಲೆಯ ಪುತಲಪಟ್ಟು ತಾಲೂಕು ತಟ್ಟಿಹೋಪು ಎಂಬ ಗ್ರಾಮದಲ್ಲಿ ಈ ಘಟನೆ ನಡೆದಿದೆ.
"ಬೆಳಿಗ್ಗೆ 10.30ರ ಸುಮಾರಿಗೆ ಕುದಿಯುವ ಎಣ್ಣೆ ಪರೀಕ್ಷೆಗೆ ಮಹಿಳೆಯನ್ನು ಒಳಪಡಿಸಲು ಸಿದ್ಧತೆ ನಡೆದಿತ್ತು. ಕೊನೆಕ್ಷಣದಲ್ಲಿ ಮಧ್ಯಪ್ರವೇಶಿಸಿ ಮಹಿಳೆಯನ್ನು ರಕ್ಷಿಸಲಾಗಿದೆ" ಎಂದು ಪಂಚಾಯತ್ರಾಜ್ ಅಧಿಕಾರಿಗಳು ಹೇಳಿದ್ದಾರೆ.
ಈ ಬುಡಕಟ್ಟು ಸಂಪ್ರದಾಯದಂತೆ, ಐದು ಲೀಟರ್ ಎಣ್ಣೆ ಕುದಿಸಿ, ಹೂವಿನಿಂದ ಅಲಂಕರಿಸಿದ ಮಣ್ಣಿನ ಮಡಿಕೆಗೆ ಸುರಿಯಲಾಗುತ್ತದೆ. ಬಳಿಕ ಊರಿನ ಎಲ್ಲ ಹಿರಿಯ ಗ್ರಾಮಸ್ಥರ ಸಮ್ಮುಖದಲ್ಲಿ ನಿಷ್ಠೆ ಪರೀಕ್ಷೆಗೆ ಒಳಗಾಗಬೇಕಾಗುತ್ತದೆ. ಧೀರ್ಘಕಾಲದಿಂದ 57 ವರ್ಷದ ಪತಿಗೆ ಪತ್ನಿಯ ನಿಷ್ಠೆ ಬಗ್ಗೆ ಅನುಮಾನ ಇತ್ತು. ಅಂತಿಮವಾಗಿ ಪತ್ನಿಯ ಚಾರಿತ್ರ್ಯದ ಬಗ್ಗೆ ಪರೀಕ್ಷೆ ನಡೆಸಲು ಬುಡಕಟ್ಟು ಸಮುದಾಯದ ಮುಖಂಡರ ಮೊರೆ ಹೋಗಿದ್ದರು. ಹಲವು ಬಾರಿ ಮಹಿಳೆಯನ್ನು ಪತಿ ಹೊಡೆದಿದ್ದ ಎಂದು ಅಧಿಕಾರಿಗಳು ವಿವರಿಸಿದ್ದಾರೆ.
ಯೆರುಕುಲ ಬುಡಕಟ್ಟು ಸಮುದಾಯದ ಸಂಪ್ರದಾಯದಂತೆ ಮಹಿಳೆಯ ʼಪತಿನಿಷ್ಠೆʼಯ ಬಗ್ಗೆ ಶಂಕೆ ಇದ್ದಲ್ಲಿ, ಮಹಿಳೆಯ ಕೈಯನ್ನು ಕುದಿಯುವ ಎಣ್ಣೆಯಲ್ಲಿ ಎಲ್ಲ ಹಿರಿಯರ ಸಮ್ಮುಖದಲ್ಲಿ ಕೈ ಮುಳುಗಿಸಬೇಕಾಗುತ್ತದೆ. ಬಳಿಕ ಮಹಿಳೆಯ ಕೈ ಸುಟ್ಟಿದೆಯೇ ಎಂಬ ಬಗ್ಗೆ ಪರಿಶೀಲಿಸಲಾಗುತ್ತದೆ.