ಉತ್ತರ ಪ್ರದೇಶ: ಹೆದ್ದಾರಿ ಬದಿಯಲ್ಲಿದ್ದ ಪೆಟ್ಟಿಗೆಯಲ್ಲಿ ಮಹಿಳೆಯ ಶವ ಪತ್ತೆ
ಭದೋಹಿ ಜಿಲ್ಲಾ ಪೊಲೀಸ್ ಅಧೀಕ್ಷಕಿ ಮೀನಾಕ್ಷಿ ಕಾತ್ಯಾಯನ್ Photo: twitter.com/bhadohipolice
ಲಕ್ನೋ: ಹೆದ್ದಾರಿ ಬದಿ ಬಿದ್ದಿದ್ದ ಪೆಟ್ಟಿಗೆಯೊಂದರಲ್ಲಿ ಶನಿವಾರ ಸಂಜೆ ಮಹಿಳೆಯೊಬ್ಬರ ಅರೆಬೆಂದ ಶವ ಪತ್ತೆಯಾಗಿದೆ. ಈ ಹತ್ಯೆಗೆ ಮುನ್ನ ಮಹಿಳೆಯ ಮೇಲೆ ಅತ್ಯಾಚಾರ ನಡೆದಿರುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ ಎಂದು ಪೊಲೀಸರು ಹೇಳಿದ್ದಾರೆ.
ರಾಷ್ಟ್ರೀಯ ಹೆದ್ದಾರಿ-19ರ ಲಾಲಾನಗರ ಟೋಲ್ ಪ್ಲಾಜಾ ಬಳಿ ಅನಾಥವಾಗಿ ಬಿದ್ದಿರುವ ಪೆಟ್ಟಿಗೆಯೊಂದರಿಂದ ಸುಟ್ಟ ವಾಸನೆ ಬರುತ್ತಿದೆ ಎಂಬ ಮಾಹಿತಿ ಲಭ್ಯವಾದ ತಕ್ಷಣ ಸ್ಥಳಕ್ಕೆ ಧಾವಿಸಿ ಪೆಟ್ಟಿಗೆ ತೆರೆದು ನೋಡಿದಾಗ ಮಹಿಳೆಯ ಅರೆಬೆಂದ ಶವ ಕಂಡುಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಮಹಿಳೆಯ ವಯಸ್ಸು ಸುಮಾರು 20 ವರ್ಷ ಆಗಿದ್ದು, ಆಕೆ ಬಿಳಿ ಸೂಟ್ ಧರಿಸಿದ್ದರು ಎಂದು ಸ್ಥಳಕ್ಕೆ ಭೇಟಿ ನೀಡಿರುವ ಭದೋಹಿ ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಮೀನಾಕ್ಷಿ ಕಾತ್ಯಾಯನ್ ಹೇಳಿದ್ದಾರೆ. ಈ ಹತ್ಯೆಗೆ ಮುನ್ನ ಕೆಲ ಅನಪೇಕ್ಷಿತ ಘಟನೆ ನಡೆದಿರುವ ಸಾಧ್ಯತೆ ಇದ್ದು, ಮಹಿಳೆಯ ಗುರುತು ಪತ್ತೆಯಾಗದಂತೆ ಮಹಿಳೆಯ ಮುಖಕ್ಕೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಲಾಗಿದೆ ಎಂದು ಅವರು ವಿವರಿಸಿದ್ದಾರೆ.
ಮಹಿಳೆಯ ಕಾಲನ್ನು ಹಗ್ಗದಿಂದ ಬಿಗಿಯಾಗಿ ಕಟ್ಟಲಾಗಿದೆ. ವಿಧಿವಿಜ್ಞಾನ ತಂಡ ಮತ್ತು ಶ್ವಾನದಳ ಸ್ಥಳಕ್ಕೆ ಧಾವಿಸಿ ಪುರಾವೆಗಳನ್ನು ಸಂಗ್ರಹಿಸುತ್ತಿದೆ. ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಮಹಿಳೆಯ ಗುರುತು ಪತ್ತೆಗೂ ಪ್ರಯತ್ನ ನಡೆದಿದೆ ಎಂದು ಅವರು ಹೇಳಿದ್ದಾರೆ. ಹತ್ಯೆಗೆ ಮುನ್ನ ಅತ್ಯಾಚಾರ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ. ಎಲ್ಲ ಸಂಭಾವ್ಯ ಆಯಾಮಗಳ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ತಿಳಿಸಿದ್ದಾರೆ