ಸಹೋದರಿಯ ವಿವಾಹದಲ್ಲಿ ಡ್ಯಾನ್ಸ್ ಮಾಡುತ್ತಿದ್ದಾಗಲೇ ಯುವತಿ ಹೃದಯಾಘಾತದಿಂದ ಮೃತ್ಯು

PC: x.com/Gurjarrrrr
ಭೋಪಾಲ್: ಸಹೋದರಿಯ ವಿವಾಹದಲ್ಲಿ ಡ್ಯಾನ್ಸ್ ಮಾಡುತ್ತಿದ್ದ 23 ವರ್ಷದ ಯುವತಿಯೊಬ್ಬಳು ಹೃದಯಾಘಾತದಿಂದ ಮೃತಪಟ್ಟ ಘಟನೆ ಮಧ್ಯಪ್ರದೇಶದ ವಿದಿಶಾದಲ್ಲಿ ರವಿವಾರ ನಡೆದಿದೆ.
ರೆಸಾರ್ಟ್ ನಲ್ಲಿ ನಡೆಯುತ್ತಿದ್ದ ವಿವಾಹ ಸಂಭ್ರಮಾಚರಣೆ ವೇಳೆ ಈ ಘಟನೆ ನಡೆದಿದೆ ಎಂದು ಐಎಎಎನ್ಎಸ್ ಸುದ್ದಿಸಂಸ್ಥೆ ವರದಿ ಮಾಡಿದೆ. ಘಟನೆಯ ವಿಡಿಯೊ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
ಮೃತಪಟ್ಟ ಯುವತಿಯನ್ನು ಇಂಧೋರ್ ನ ಪರಿಣಿತಾ ಜೈನ್ ಎಂದು ಗುರುತಿಸಲಾಗಿದ್ದು, ಎಂಬಿಎ ಪದವೀಧರೆಯಾಗಿದ್ದ ಈಕೆ ಪೋಷರ ಜತೆ ಇಂಧೋರ್ನ ದಕ್ಷಿಣ ತುಕೊಗಂಜ್ ಪ್ರದೇಶದಲ್ಲಿ ವಾಸವಿದ್ದಳು.
ಸಹೋದರಿಯ ವಿವಾಹಕ್ಕಾಗಿ ವಿದಿಶಾಗೆ ಆಗಮಿಸಿದ್ದ ಈಕೆ ಸುಮಾರು 200 ಅತಿಥಿಗಳ ಎದುರು 'ಹಲ್ದಿ' ಸಂಪ್ರದಾಯ ವೇಳೆ ಬಾಲಿವುಡ್ ಹಾಡೊಂದಕ್ಕೆ ಡ್ಯಾನ್ಸ್ ಮಾಡುತ್ತಿದ್ದಾಗ ಕುಸಿದು ಬಿದ್ದಳು ಎಂದು ಹೇಳಲಾಗಿದೆ.
ಆಕೆಯ ನೆರವಿಗೆ ಜನ ಧಾವಿಸುವ ಮುನ್ನವೇ ಆಕೆ ಕೊನೆಯುಸಿರೆಳೆದಿದ್ದಳು. ಕುಟುಂಬ ಸದಸ್ಯರು ಸ್ವತಃ ವೈದ್ಯರಾಗಿದ್ದು, ಸಿಪಿಆರ್ (ಕಾರ್ಡಿಯೊ ಪಲ್ಮನರಿ ರಿಸಸ್ಸಿಷನ್) ನೀಡುವ ಯತ್ನ ಮಾಡಿದರು. ಆದರೆ ಆಕೆ ಅದಕ್ಕೆ ಸ್ಪಂದಿಸಲಿಲ್ಲ. ತಕ್ಷಣವೇ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆ ವೇಳೆಗಾಗಲೇ ಆಕೆ ಮೃತಪಟ್ಟಿದ್ದನ್ನು ವೈದ್ಯರು ದೃಢಪಡಿಸಿದರು.