ದಿಲ್ಲಿಯ ಆಪ್ ಸರಕಾರದಲ್ಲಿ ನಂ. 2 ಸಚಿವೆಯಾದ ಅತಿಶಿ: 10 ಸಚಿವಾಲಯಗಳ ಹೊಣೆ
ಅತಿಶಿ (ಫೋಟೋ- PTI)
ಹೊಸ ದಿಲ್ಲಿ: ದಿಲ್ಲಿಯ ಆಮ್ ಆದ್ಮಿ ಪಕ್ಷದ ಸರಕಾರದ ಸಚಿವ ಸಂಪುಟದಲ್ಲಿ ಸಚಿವೆ ಅತಿಶಿಯವರಿಗೆ ಹಣಕಾಸು, ಯೋಜನೆ ಹಾಗೂ ಕಂದಾಯ ಖಾತೆಗಳ ಹೆಚ್ಚುವರಿ ಹೊಣೆಯನ್ನು ನೀಡಲಾಗಿದೆ. ಈ ಮೂರು ಖಾತೆಗಳು ಈ ಮುನ್ನ ಕೈಲಾಶ್ ಗೆಹ್ಲೋಟ್ ಬಳಿ ಇತ್ತು ಎಂದು ndtv.com ವರದಿ ಮಾಡಿದೆ.
ಮನೀಶ್ ಸಿಸೋಡಿಯಾ ಹಾಗೂ ಸತ್ಯೇಂದರ್ ಜೈನ್ ತಮ್ಮ ಸಚಿವ ಹುದ್ದೆಗಳಿಗೆ ರಾಜೀನಾಮೆ ನೀಡಿದ ಹಿನ್ನೆಲೆಯಲ್ಲಿ ಸೌರಭ್ ಭಾರದ್ವಾಜ್ ಅವರೊಂದಿಗೆ ಅತಿಶಿಯವರನ್ನು ಮಾರ್ಚ್ ತಿಂಗಳಲ್ಲಿ ಸಚಿವ ಸಂಪುಟಕ್ಕೆ ಸೇರ್ಪಡೆ ಮಾಡಿಕೊಳ್ಳಲಾಗಿತ್ತು. ಇದಕ್ಕೂ ಮುನ್ನ ಅಬಕಾರಿ ನೀತಿ ಪ್ರಕರಣದಲ್ಲಿ ಮನೀಶ್ ಸಿಸೋಡಿಯಾ ಬಂಧನಕ್ಕೊಳಗಾದರೆ, ಕಳೆದ ವರ್ಷ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಸತ್ಯೇಂದರ್ ಜೈನ್ ಅವರನ್ನು ಬಂಧಿಸಲಾಗಿತ್ತು.
ಇದುವರೆಗೆ ಅತಿಶಿ ಅವರು ಇಂಧನ, ಶಿಕ್ಷಣ, ಕಲೆ, ಸಂಸ್ಕೃತಿ ಹಾಗೂ ಭಾಷೆ, ಪ್ರವಾಸೋದ್ಯಮ, ಉನ್ನತ ಶಿಕ್ಷಣ, ತರಬೇತಿ ಮತ್ತು ತಾಂತ್ರಿಕ ಶಿಕ್ಷಣ ಹಾಗೂ ಸಾರ್ವಜನಿಕ ಸಂಪರ್ಕ ಖಾತೆಗಳನ್ನು ಹೊಂದಿದ್ದರು. ಹೊಸದಾಗಿ ವಹಿಸಲಾಗಿರುವ ಖಾತೆಗಳಿಂದ ಅವರು ಒಟ್ಟು ನಿರ್ವಹಿಸುತ್ತಿರುವ ಖಾತೆಗಳ ಸಂಖ್ಯೆ ಹತ್ತಕ್ಕೇರಿದೆ.
ಇದಕ್ಕೂ ಮುನ್ನ ಸಚಿವ ಸಂಪುಟ ಪುನಾರಚನೆಯ ಕಡತವು ಅನುಮೋದನೆಗಾಗಿ ಕಳೆದ ನಾಲ್ಕು ದಿನಗಳಿಂದ ಲೆಫ್ಟಿನೆಂಟ್ ಗವರ್ನರ್ ಕಚೇರಿಯಲ್ಲೇ ಉಳಿದಿದೆ ಎಂದು ಗುರುವಾರ ದಿಲ್ಲಿ ಸರ್ಕಾರದ ಅಧಿಕಾರಿಗಳು ಪ್ರತಿಪಾದಿಸಿದ್ದರಿಂದಾಗಿ ಈ ವಿಷಯವು ವಿವಾದದ ಸ್ವರೂಪ ಪಡೆದಿತ್ತು. ಆದರೆ, ಈ ಪ್ರತಿಪಾದನೆಯನ್ನು ಲೆಫ್ಟಿನೆಂಟ್ ಗವರ್ನರ್ ಕಚೇರಿ ಅಲ್ಲಗಳೆದಿದೆ.