ಪಾಕಿಸ್ತಾನ್ ಜಿಂದಾಬಾದ್ ಘೋಷಣೆಯ ಆರೋಪ: 17 ಮಂದಿಯ ಬಂಧನದ 6 ವರ್ಷಗಳ ಬಳಿಕ ಪ್ರಕರಣವೇ ಸುಳ್ಳು ಎಂದು ಕೋರ್ಟ್ ತೀರ್ಪು
►ಸುಳ್ಳು ಹೇಳಿಕೆಗಳನ್ನು ನೀಡುವಂತೆ ಪೊಲೀಸರು ಬಲವಂತಪಡಿಸಿದ್ದರು ಎಂದ ದೂರುದಾರ ►ಸುಳ್ಳು ಪ್ರಕರಣದಲ್ಲಿ ಸಿಲುಕಿ ಮನನೊಂದ ಓರ್ವ ಆರೋಪಿ ಆತ್ಮಹತ್ಯೆ
Photo: article-14.com
ಭೋಪಾಲ: ಆರು ವರ್ಷಗಳ ಹಿಂದೆ ಕ್ರಿಕೆಟ್ ಪಂದ್ಯವೊಂದರಲ್ಲಿ ಪಾಕಿಸ್ತಾನದ ಗೆಲುವಿಗಾಗಿ ವಿಜಯೋತ್ಸವ ಆಚರಿಸಿದ್ದ ಆರೋಪದಲ್ಲಿ ಜೈಲಿಗೆ ತಳ್ಳಲ್ಪಟ್ಟು ನರಕಯಾತನೆಯನ್ನು ಅನುಭವಿಸಿದ್ದ 17 ಮುಸ್ಲಿಮ್ ಪುರುಷರು ಕೊನೆಗೂ ಆರೋಪ ಮುಕ್ತಗೊಂಡು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ. ಹಿಂದೂ ದೂರುದಾರ ಮತ್ತು ಸರಕಾರಿ ಸಾಕ್ಷಿಗಳು ಸುಳ್ಳು ಹೇಳಿಕೆಗಳನ್ನು ನೀಡುವಂತೆ ತಮ್ಮನ್ನು ಪೋಲಿಸರು ಬಲವಂತಗೊಳಿಸಿದ್ದರು ಎಂದು ಒಪ್ಪಿಕೊಂಡ ಬಳಿಕ ಮಧ್ಯಪ್ರದೇಶದ ನ್ಯಾಯಾಲಯವು ಇಡೀ ಪ್ರಕರಣ ಕಟ್ಟುಕಥೆಯಾಗಿದೆ ಎಂಬ ತೀರ್ಮಾನಕ್ಕೆ ಬಂದಿದೆ. 2023 ಅಕ್ಟೋಬರ್ನಲ್ಲಿ ಬಿಡುಗಡೆಗೊಂಡಿರುವ ಈ ಬಡಪಾಯಿಗಳು ತಮ್ಮ ಬದುಕುಗಳನ್ನೇ ಬುಡಮೇಲುಗೊಳಿಸಿದ್ದ ಸುಳ್ಳುಗಳ ಜೊತೆಗೆ ತಮ್ಮನ್ನು ಪೋಲಿಸ್ ಕಸ್ಟಡಿಯಲ್ಲಿ ಥಳಿಸಲಾಗಿತ್ತು ಮತ್ತು ಅವಾಚ್ಯವಾಗಿ ನಿಂದಿಸಲಾಗಿತ್ತು ಎಂದು ಆರೋಪಿಸಿದ್ದಾರೆ. ಆರೋಪಿಗಳ ಪೈಕಿ ಸಂಕಷ್ಟಗಳ ಸುಳಿಯಲ್ಲಿ ಸಿಲುಕಿ ಮನನೊಂದಿದ್ದ, ಇಬ್ಬರು ಮಕ್ಕಳ ತಂದೆಯಾಗಿದ್ದ 40ರ ಹರೆಯದ ವ್ಯಕ್ತಿ 2019ರಲ್ಲಿ ಆತ್ಮಹತ್ಯೆಗೆ ಶರಣಾಗಿದ್ದರು.
ಮಧ್ಯಪ್ರದೇಶದ ರಾಜಧಾನಿ ಭೋಪಾಲನಿಂದ 30 ಕಿ.ಮೀ.ಅಂತರದಲ್ಲಿರುವ ಬುರ್ಹಾನ್ಪುರ ಜಿಲ್ಲೆಯ ಮೋಹದ್ ಗ್ರಾಮದ ಜನರು ಹೆದರಿಕೊಂಡು ಭಾರತ ಮತ್ತು ಪಾಕಿಸ್ತಾನ ನಡುವಿನ ಕ್ರಿಕೆಟ್ ಪಂದ್ಯಗಳನ್ನು ವೀಕ್ಷಿಸುವುದನ್ನೇ ನಿಲ್ಲಿಸಿಬಿಟ್ಟಿದ್ದಾರೆ, ಕ್ರಿಕೆಟ್ ಅನ್ನೂ ಆಡುವುದಿಲ್ಲ. ಪಾಕಿಸ್ತಾನದ ಗೆಲುವನ್ನು ಸಂಭ್ರಮಿಸಿದ್ದ ಆರೋಪದಲ್ಲಿ ತಮ್ಮ ಗ್ರಾಮದ 17 ಮುಸ್ಲಿಂ ವ್ಯಕ್ತಿಗಳು ಮತ್ತು ಇಬ್ಬರು ಅಪ್ರಾಪ್ತ ವಯಸ್ಕರ ಬಂಧನ ಮತ್ತು ವಿಚಾರಣೆಯಿಂದ ಉಂಟಾದ ಆಘಾತದಿಂದ ಅವರಿನ್ನೂ ಹೊರಕ್ಕೆ ಬಂದಿಲ್ಲ.
2017,ಜೂ.18ರಂದು ಲಂಡನ್ ನ ಓವಲ್ ಸ್ಟೇಡಿಯಮ್ ನಲ್ಲಿ ನಡೆದಿದ್ದ ಚಾಂಪಿಯನ್ ಟ್ರೋಫಿ ಅಂತಿಮ ಪಂದ್ಯದಲ್ಲಿ ಪಾಕಿಸ್ತಾನದ ತಂಡದೆದುರು ಭಾರತವು ಸೋಲನ್ನಪ್ಪಿದ ಬಳಿಕ ಗ್ರಾಮಸ್ಥರು ಪಾಕ್ ಅನ್ನು ಬೆಂಬಲಿಸಿ ಘೋಷಣೆಗಳನ್ನು ಕೂಗಿದ್ದರು, ಸಿಹಿಗಳನ್ನು ಹಂಚಿದ್ದರು ಮತ್ತು ಪಟಾಕಿಗಳನ್ನು ಸಿಡಿಸಿ ವಿಜಯೋತ್ಸವವನ್ನು ಆಚರಿಸಿದ್ದರು ಎಂಬ ವದಂತಿಗಳು ಹಬ್ಬಿದ್ದವು. ಆರೋಪಿಗಳ ವಿರುದ್ಧ ದೇಶದ್ರೋಹ ಮತ್ತು ಕ್ರಿಮಿನಲ್ ಪಿತೂರಿ ಆರೋಪಗಳಡಿ ಪ್ರಕರಣವನ್ನು ದಾಖಲಿಸಲಾಗಿತ್ತು. ದೇಶದ್ರೋಹದ ಆರೋಪವನ್ನು ಸಮರ್ಥಿಸುವುದು ಅಸಾಧ್ಯ ಎನ್ನುವುದು ಪೋಲಿಸರಿಗೆ ಅರಿವಾದಾಗ ಅದನ್ನು ಕೈಬಿಟ್ಟು ವಿವಿಧ ಗುಂಪುಗಳ ನಡುವೆ ದ್ವೇಷವನ್ನು ಉತ್ತೇಜಿಸಿದ್ದ ಆರೋಪವನ್ನು ಸೇರಿಸಿದ್ದರು. ತನ್ನ ಗ್ರಾಮದ ಮುಸ್ಲಿಮ್ ವ್ಯಕ್ತಿಗಳ ವಿರುದ್ಧ ಇಂತಹ ಯಾವುದೇ ಆರೋಪಗಳನ್ನು ತಾನು ಮಾಡಿಲ್ಲ ಎಂದು ಹಿಂದೂ ದೂರುದಾರ ಬಹಿರಂಗವಾಗಿ ಹೇಳುತ್ತಿದ್ದರೂ ಪೋಲಿಸರು ಪ್ರಕರಣವನ್ನು ಮುಂದುವರಿಸಿದ್ದರು.
ಆ ಸಮಯದಲ್ಲಿ ಕೇಂದ್ರದಲ್ಲಿ ಬಿಜೆಪಿ ಮೂರು ವರ್ಷಗಳಿಂದ ಅಧಿಕಾರದಲ್ಲಿತ್ತು. ಹಿಂದೂ ರಾಷ್ಟ್ರವಾದವು ಹೆಚ್ಚುತ್ತಿತ್ತು ಮತ್ತು ಟೀಕಾಕಾರರ, ವಿಶೇಷವಾಗಿ ಮುಸ್ಲಿಮರ ವಿರುದ್ಧ ‘ದೇಶ ವಿರೋಧಿ’ ಶಬ್ದವು ಮುಕ್ತವಾಗಿ ಬಳಕೆಯಾಗುತ್ತಿತ್ತು. ಮುಖ್ಯವಾಹಿನಿ ಮಾಧ್ಯಮಗಳು ಸರಕಾರದ ನಿರೂಪಣೆಯನ್ನು ಇನ್ನಷ್ಟು ಬಲಗೊಳಿಸುತ್ತಿದ್ದವು ಮತ್ತು ಇಸ್ಲಾಮೋಫೋಬಿಯಾವನ್ನು ಹರಡುತ್ತಿದ್ದವು.
ಈ ಪ್ರಕರಣದಲ್ಲಿ ಸುದ್ದಿವಾಹಿನಿಗಳು ಆರೋಪಿಗಳನ್ನು ‘ದೇಶದ್ರೋಹಿಗಳು’ ಎಂದು ಬಣ್ಣಿಸಿದ್ದವು.
ಬಂಧನದ ಆರು ವರ್ಷಗಳ ಬಳಿಕ ಪ್ರಥಮ ದರ್ಜೆ ನ್ಯಾಯಾಧೀಶ ದೇವೇಂದರ್ ಶರ್ಮಾ ಅವರು ಆರೋಪಿಗಳನ್ನು ಖುಲಾಸೆಗೊಳಿಸಿದ್ದಾರೆ. ನ್ಯಾಯಾಲಯದಲ್ಲಿ ಕಾನೂನು ಸಮರ ನಡೆಸಲು ವೆಚ್ಚಕ್ಕಾಗಿ ಮಾಡಿದ್ದ ಸಾಲದ ಹೊರೆ ಈಗ ಅವರ ಬೆನ್ನೇರಿದೆ.
ಎಲ್ಲ ಸಾಕ್ಷ್ಯಗಳು, ವಾದಗಳು ಮತ್ತು ಪ್ರತ್ಯಕ್ಷದರ್ಶಿಗಳ ಹೇಳಿಕೆಗಳನ್ನು ಪರಿಶೀಲಿಸಿದ ಬಳಿಕ ಆರೋಪಿಗಳು ಘೋಷಣೆಗಳನ್ನು ಕೂಗಿದ್ದರು ಮತ್ತು ಪಟಾಕಿಗಳನ್ನು ಸಿಡಿಸಿದ್ದರು ಎನ್ನುವುದಕ್ಕೆ ಯಾವುದೇ ಪುರಾವೆಯಿಲ್ಲ ಎಂದು ನ್ಯಾ.ಶರ್ಮಾ ತನ್ನ 2023,ಅ.9ರ ತೀರ್ಪಿನಲ್ಲಿ ಹೇಳಿದ್ದಾರೆ.
ಅಲ್ಲದೆ ಐಪಿಸಿಯ ಕಲಂ 153-ಎ (ವಿವಿಧ ಗುಂಪುಗಳ ನಡುವೆ ದ್ವೇಷವನ್ನು ಉತ್ತೇಜಿಸುವುದು) ಅಡಿ ಆರೋಪಿಗಳನ್ನು ವಿಚಾರಣೆಗೊಳಪಡಿಸಲು ಪುರಾವೆಗಳನ್ನು ಒದಗಿಸುವಲ್ಲಿ ಪೋಲಿಸರು ವಿಫಲರಾಗಿದ್ದಾರೆ. ಹೀಗಾಗಿ ಎಲ್ಲ ಆರೋಪಿಗಳನ್ನು ದೋಷಮುಕ್ತಗೊಳಿಸಲಾಗಿದೆ ಎಂದು ಅವರು ತೀರ್ಪಿನಲ್ಲಿ ಬರೆದಿದ್ದಾರೆ. ಆದರೆ, ನ್ಯಾಯಾಲಯದ ತೀರ್ಪು ಸುಳ್ಳು ಪ್ರಕರಣ ದಾಖಲಿಸಿ ಆರೋಪಿಗಳನ್ನು ವಿಚಾರಣೆಗೆ ಒಳಪಡಿಸಿದ್ದಕ್ಕಾಗಿ ಮಧ್ಯಪ್ರದೇಶ ಪೋಲಿಸರನ್ನು ಉತ್ತರದಾಯಿಯಾಗಿಸಿಲ್ಲ.
2017ರಲ್ಲಿ ನಡೆದಿದ್ದ ಘಟನೆಯನ್ನು ಮಾಧ್ಯಮಗಳು ವ್ಯಾಪಕವಾಗಿ ವರದಿ ಮಾಡಿದ್ದವು, ಆದರೆ ಅಕ್ಟೋಬರ್ ನ ತೀರ್ಪು ವರದಿಯಾಗಲೇ ಇಲ್ಲ.
‘ನ್ಯಾಯಾಲಯದಲ್ಲಿ ನಾವು ನಮ್ಮ ವಾದವನ್ನಷ್ಟೇ ಮಂಡಿಸಿದ್ದೆವು, ಉಳಿದ ಕೆಲಸವನ್ನು ದೂರುದಾರ ಮತ್ತು ಪ್ರತ್ಯಕ್ಷದರ್ಶಿ ಹೇಳಿಕೆಗಳು ಮಾಡಿದವು. ಆರೋಪಿಗಳ ವಿರುದ್ಧ ಹೇಳಿಕೆಗಳನ್ನು ನೀಡುವಂತೆ ಅವರ ಮೇಲೆ ಒತ್ತಡ ಹೇರಲಾಗಿತ್ತಾದರೂ ಅವರು ಸತ್ಯದ ಪರವಾಗಿ ದೃಢವಾಗಿ ನಿಂತಿದ್ದರು ’ಎಂದು ಆರೋಪಿಗಳ ಪರ ವಕೀಲ ಶೋಯೆಬ್ ಅಹ್ಮದ್ ತಿಳಿಸಿದರು.
ಬಂಧನದ ಸಮಯದಲ್ಲಿ 16 ವರ್ಷ ವಯಸ್ಸಾಗಿದ್ದ ಮುಬಾರಿಕ್ ತಡ್ವಿ ಮತ್ತು ಝುಬೈರ್ ತಡ್ವಿ ಅವರನ್ನು ಬಾಲಾಪರಾಧಿಗಳ ನ್ಯಾಯಾಲಯವು 2022, ಜೂನ್ ನಲ್ಲಿ ಬಿಡುಗಡೆಗೊಳಿಸಿತ್ತು. ಆ ಬಳಿಕ ಅವರಿಬ್ಬರೂ ಶಾಲೆಗೆ ವಾಪಸಾಗಿಲ್ಲ.
‘ನಾನು ಪೋಲಿಸ್ ಇನ್ಸ್ಪೆಕ್ಟರ್ ಆಗಬೇಕೆಂದು ಕನಸು ಕಂಡಿದ್ದೆ, ಆದರೆ ಈಗ ಶಿಕ್ಷಣವನ್ನು ತೊರೆದಿದ್ದೇನೆ’ ಎಂದು ಈಗ ಇಂದೋರಿನಲ್ಲಿ ಆರಾಧನಾ ತಾಣವೊಂದರ ಉಸ್ತುವಾರಿ ನೋಡಿಕೊಳ್ಳುತ್ತಿರುವ ಝುಬೈರ್ ಹೇಳಿದರು
ಎರಡು ಜೀವಗಳು ಬಲಿ
ಆರೋಪಿಗಳು ಅಕ್ಟೋಬರ್ ನಲ್ಲಿ ಖುಲಾಸೆಗೊಳ್ಳುವ ಮುನ್ನ ಪ್ರಕರಣವು ಎರಡು ಜೀವಗಳನ್ನು ಬಲಿ ತೆಗೆದುಕೊಂಡಿತ್ತು. ತನ್ನನ್ನು ‘ದೇಶದ್ರೋಹಿ’ ಎಂದು ಬ್ರ್ಯಾಂಡ್ ಮಾಡಿದ್ದ ಅವಮಾನವನ್ನು ಸಹಿಸಲಾಗದೆ ರುಬಾಬ್ ನವಾಬ್ (40) ಫೆಬ್ರವರಿ 2019ರಲ್ಲಿ ಆತ್ಮಹತ್ಯೆಗೆ ಶರಣಾಗಿದ್ದರೆ, ಮುಕದ್ದರ್ ತಡ್ವಿ (60) ತನ್ನ ಪುತ್ರ ಸಿಕಂದರ್ ತಡ್ವಿಯ ಬಂಧನದಿಂದ ಉಂಟಾಗಿದ್ದ ಆಘಾತದಿಂದ ಚೇತರಿಸಿಕೊಳ್ಳಲು ಸಾಧ್ಯವಾಗದೆ 2021 ನವಂಬರ್ ನಲ್ಲಿ ನಿಧನರಾಗಿದ್ದರು.
"ನಮ್ಮನ್ನು ಹಿಂಸಿಸಲಾಗಿತ್ತು ಎನ್ನುವುದು ಬಹಿರಂಗ ರಹಸ್ಯ"
2017 ಜೂನ್ ನಲ್ಲಿ ಆರೋಪಿಗಳು ಎರಡು ದಿನಗಳ ಕಾಲ ಶಾಪುರ ಪೋಲಿಸ್ ಠಾಣೆಯ ಲಾಕಪ್ ನಲ್ಲಿದ್ದಾಗ ಅವರನ್ನು ಒದೆಯಲಾಗಿತ್ತು, ಥಳಿಸಲಾಗಿತ್ತು ಮತ್ತು ಅವಾಚ್ಯವಾಗಿ ನಿಂದಿಸಲಾಗಿತ್ತು. ಪೋಲಿಸರು ತಮ್ಮ ಗಡ್ಡವನ್ನು ಹಿಡಿದೆಳೆದಿದ್ದರು, ಪ್ರತಿಭಟಿಸಿದರೆ ಸಜೀವ ದಹನಗೊಳಿಸುವುದಾಗಿ ಬೆದರಿಕೆಯೊಡ್ಡಿದ್ದರು ಮತ್ತು ಎರಡು ದಿನಗಳ ಕಾಲ ಅನ್ನಾಹಾರವಿಲ್ಲದೆ ಲಾಕಪ್ ನಲ್ಲಿ ಕೂಡಿ ಹಾಕಿದ್ದರು. ಆರೋಪಿಗಳಿಗೆ ಚಹಾ ನೀಡಲು ಠಾಣೆಗೆ ಬರುತ್ತಿದ್ದ ವ್ಯಕ್ತಿಯೂ ಅವರನ್ನು ಒದೆಯುತ್ತಿದ್ದ, ಅವರನ್ನು ‘ದೇಶದ್ರೋಹಿಗಳು’ ಎಂದು ಕರೆಯುತ್ತಿದ್ದ. ಇದು ವರದಿಗಾರರ ತಂಡ 2024, ಫೆಬ್ರವರಿಯಲ್ಲಿ ಮೋಹದ್ ಗ್ರಾಮಕ್ಕೆ ಭೇಟಿ ನೀಡಿದಾಗ ಈ ಆರೋಪಿಗಳು ತೋಡಿಕೊಂಡಿದ್ದ ಅಳಲು. ಇವರೆಲ್ಲ 25ರಿಂದ 60 ವರ್ಷ ವಯೋಮಾನದವರಾಗಿದ್ದಾರೆ.
‘ನಮಗೆ ಚಿತ್ರಹಿಂಸೆ ನೀಡಲಾಗಿತ್ತು ಎನ್ನುವುದು ಬಹಿರಂಗ ರಹಸ್ಯವಾಗಿದೆ. ನಮ್ಮನ್ನು ಪೋಲಿಸ್ ಠಾಣೆಗೆ ಎಳೆದೊಯ್ಯುವ ಮುನ್ನ ನಮ್ಮನ್ನು ಥಳಿಸಿದ್ದಕ್ಕೆ ಇಡೀ ಗ್ರಾಮವೇ ಸಾಕ್ಷಿಯಾಗಿತು. ನಮಗೆ ದಿಕ್ಕೇ ತೋಚದಂತಾಗಿತ್ತು, ಮ್ಯಾಜಿಸ್ಟ್ರೇಟ್ ಮುಂದೆ ಮಾತನಾಡಲೂ ನಮಗೆ ಸಾಧ್ಯವಾಗಿರಲಿಲ್ಲ’ಎಂದು ದಿನಗೂಲಿ ಕಾರ್ಮಿಕ ಸರ್ಫರಾಝ್ ತಡ್ವಿ (35 ) ಹೇಳಿದರು. ಮೋಹದ್ ಗ್ರಾಮದಿಂದ 90 ಕಿ.ಮೀ.ದೂರದ ಖಂಡ್ವಾ ಜೈಲಿಗೆ ಸಾಗಿಸುವ ಮುನ್ನ ತಮ್ಮನ್ನು ಕಡ್ಡಾಯ ವೈದ್ಯಕೀಯ ತಪಾಸಣೆಗೂ ಒಳಪಡಿಸಿರಲಿಲ್ಲ ಎಂದರು.
ನ್ಯಾಯಾಲಯ ಅವರನ್ನೇಕೆ ಖುಲಾಸೆಗೊಳಿಸಿತು?
ತಾನು ಯಾವುದೇ ದೂರು ಸಲ್ಲಿಸಿರಲಿಲ್ಲ. ಬಂಧನಗಳನ್ನು ನಡೆಸಿದ ಬಳಿಕ ಪೋಲಿಸರು ದೂರನ್ನು ಸೃಷ್ಟಿಸಿದ್ದರು ಎಂದು ದೂರುದಾರ ಸುಭಾಷ ಕೋಲಿ ಘಟನೆಯ ಕೆಲವು ದಿನಗಳ ಬಳಿಕ ಮಾಧ್ಯಮಗಳಿಗೆ ತಿಳಿಸಿದ್ದರು.
ಕೋಲಿ ಬಂಧಿತನಾಗಿದ್ದ ತನ್ನ ಮುಸ್ಲಿಮ್ ನೆರೆಯಾತ ಅನೀಸ್ ಮನ್ಸೂರಿಯನ್ನು ಬಿಡುಗಡೆಗೊಳಿಸಲು 2017 ಜೂ. 18ರಂದು ಶಾಪುರ ಪೋಲಿಸ್ ಠಾಣೆಗೆ ತೆರಳಿದ್ದರು. ಮುಸ್ಲಿಮ್ ಜೊತೆ ಗೆಳೆತನ ಹೊಂದಿದ್ದಕ್ಕಾಗಿ ಪೊಲೀಸರು ಅವರಿಗೆ ಹಲ್ಲೆ ನಡೆಸಿದ್ದರು. ಜೂ.19ರಂದು ಕೋಲಿಯನ್ನು ಠಾಣೆಗೆ ಕರೆಸಿಕೊಂಡಿದ್ದ ಪೋಲಿಸರು ಅವರಿಂದ ಬಲವಂತದಿಂದ ದೂರು ಬರೆಸಿಕೊಂಡಿದ್ದರು. ತೀರ್ಪು ಹೊರಬೀಳುವ ಮೂರು ತಿಂಗಳ ಮೊದಲು ಕೋಲಿ ಕ್ಯಾನ್ಸರ್ ನಿಂದ ಮೃತಪಟ್ಟಿದ್ದರು.
ಪಿಂಟು ಜಾಧವ ಮತ್ತು ಸುನಿಲ್ ಸೇರಿದಂತೆ 12 ಸರಕಾರಿ ಸಾಕ್ಷಿಗಳು ನ್ಯಾಯಾಲಯದಲ್ಲಿ ಪೋಲಿಸರ ವಿರುದ್ಧ ಹೇಳಿಕೆಗಳನ್ನು ನೀಡಿದ್ದರು.
ʼಇಸ್ಲಾಮೋಫೋಬಿಯಾʼ
ಪ್ರಕರಣದ ಹಿಂದಿನ ರಾಜಕೀಯ ಉದ್ದೇಶವನ್ನು ವಿವರಿಸಿದ ಆರೋಪಿಗಳ ಪರ ವಕೀಲ ಅಹ್ಮದ್, ಪ್ರತಿಸಲವೂ ರಾಜ್ಯದಲ್ಲಿ ಚುನಾವಣೆಗೆ ಮುನ್ನ ಬಿಜೆಪಿ ನೇತೃತ್ವದ ಸರಕಾರವು ಧಾರ್ಮಿಕ ನೆಲೆಯಲ್ಲಿ ಮತದಾರರನ್ನು ಧ್ರುವೀಕರಿಸಲು ಬಿಡಿ ಘಟನೆಗಳು ಮತ್ತು ವಿವಾದಾತ್ಮಕ ವಿಷಯಗಳನ್ನು ಬಳಸಿಕೊಳ್ಳುತ್ತದೆ ಮತ್ತು ಇಸ್ಲಾಮೋಫೋಬಿಯಾವನ್ನು ಹರಡುತ್ತದೆ ಎಂದು ಹೇಳಿದರು.
2018ರ ಮಧ್ಯಪ್ರದೇಶ ವಿಧಾನಭಾ ಚುನಾವಣೆಗೆ ಮುನ್ನ ಮೋಹದ್ ಗ್ರಾಮದ ಮುಸ್ಲಿಮರು ಇದಕ್ಕೆ ಗುರಿಯಾಗಿದ್ದರು.
2023ರ ವಿಧಾನಸಭಾ ಚುನಾವಣೆಗೆ ಒಂದು ವರ್ಷ ಮುನ್ನ 2022,ಎ.10ರಂದು ರಾಮನವಮಿ ಸಂದರ್ಭದಲ್ಲಿ ನೆರೆಯ ಖರ್ಗೋನ್ ಜಿಲ್ಲೆಯಲ್ಲಿ ಕೋಮು ಗಲಭೆ ನಡೆದಿತ್ತು. ಓರ್ವ ವ್ಯಕ್ತಿ ಮೃತಪಟ್ಟು,40ಕ್ಕೂ ಅಧಿಕ ಹಿಂದುಗಳು ಮತ್ತು ಮುಸ್ಲಿಮರು ಗಾಯಗೊಂಡಿದ್ದರು. ಸರಕಾರವು ಮುಂದಿನ ಕೆಲವೇ ದಿನಗಳಲ್ಲಿ ಮುಸ್ಲಿಮರಿಗೆ ಸೇರಿದ ಸುಮಾರು 50 ಆಸ್ತಿಗಳನ್ನು ನೆಲಸಮಗೊಳಿಸಿತ್ತು.
ಪಾಕ್ ಪರ ಘೋಷಣೆಗಳನ್ನು ಕೂಗಿದ್ದರು ಎಂಬ ಆರೋಪಗಳನ್ನು ಹೊರಿಸಲಾಗಿದ್ದ ಮಹೋದ್ ಗ್ರಾಮವಿರುವ ಬುರ್ಹಾನ್ಪುರ ಜಿಲ್ಲೆಯು ಶೇ.51ರಷ್ಟು ಮುಸ್ಲಿಮರನ್ನು ಹೊಂದಿದ್ದು, ಮುಘಲರ ಕಾಲದಿಂದಲೂ ಶ್ರೀಮಂತ ಇತಿಹಾಸವನ್ನು ಹೊಂದಿದೆ. ಆದಾಗ್ಯೂ ಮುಸ್ಲಿಮ್ ಮತಗಳನ್ನು ಕೋರದ ಅಥವಾ ಮುಸ್ಲಿಮ್ ಅಭ್ಯರ್ಥಿಗಳನ್ನು ಕಣಕ್ಕಿಳಿಸದ ಬಿಜೆಪಿ 2008ರಿಂದ 2018ರವರಗೆ ಬುರ್ಹಾನ್ಪುರ ಮತ್ತು ನೇಪಾನಗರ ವಿಧಾನಸಭಾ ಕ್ಷೇತ್ರಗಳನ್ನು ಗೆದ್ದಿತ್ತು. ಆದರೆ 2023ರ ಚುನಾವಣೆಗಳಲ್ಲಿ ಬಿಜೆಪಿ ಇಲ್ಲಿ ಸೋತಿದೆ.
ಉಜ್ಜಯಿನಿ,ಶಾಜಾಪುರ,ಕಾಥಿ,ಛತ್ತರ್ಪುರ ಮತ್ತು ಮಂದಸೌರ್ನಲ್ಲಿಯೂ ಪಾಕ್ ಪರ ಘೋಷಣೆಗಳನ್ನು ಕೂಗಿದ್ದ ವದಂತಿಗಳು ಹರಡಿದ್ದವು. ಮುಸ್ಲಿಮರ ವಿರುದ್ಧ ದಾಖಲಾಗಿದ್ದ ಕನಿಷ್ಠ ಮೂರು ಪ್ರಕರಣಗಳು ಆಧಾರರಹಿತವಾಗಿದ್ದವು.
ಕೃಪೆ: article-14.com