ಸಹಪಾಠಿಗೆ ಥಳಿಸುವಂತೆ ಮುಸ್ಲಿಂ ವಿದ್ಯಾರ್ಥಿಗೆ ಸೂಚಿಸಿದ ಆರೋಪ; ಶಾಲಾ ಶಿಕ್ಷಕಿಯ ಬಂಧನ
ಉತ್ತರ ಪ್ರದೇಶದಲ್ಲಿ ಮತ್ತೊಂದು ಪ್ರಕರಣ
ಸಂಭಾಲ್ (ಉತ್ತರ ಪ್ರದೇಶ): ಮುಝಾಫ್ಫರ್ ನಗರದಲ್ಲಿ ಶಿಕ್ಷಕಿಯೊಬ್ಬರು ಮುಸ್ಲಿಂ ವಿದ್ಯಾರ್ಥಿಗೆ ಹಿಂದೂ ಸಹಪಾಠಿಗಳಿಂದ ಕೆನ್ನೆಗೆ ಹೊಡೆಸಿದ ಘಟನೆ ನಡೆದು ತಿಂಗಳು ಕಳೆಯುವ ಮುನ್ನವೇ ಅಂತಹುದೇ ಘಟನೆಯೊಂದು ಸಂಭಾಲ್ ನಲ್ಲಿ ನಡೆದಿದ್ದು, ಗುರುವಾರ ಶಾಲಾ ಶಿಕ್ಷಕಿಯೊಬ್ಬರು ಹಿಂದೂ ವಿದ್ಯಾರ್ಥಿಯು ಪ್ರಶ್ನೆಗೆ ಉತ್ತರಿಸಲಿಲ್ಲವೆಂದು ಮುಸ್ಲಿಂ ಸಹಪಾಠಿಯಿಂದ ಕೆನ್ನೆಗೆ ಹೊಡೆಸಿದ ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಘಟನೆಯು ಸಂಭಾಲ್ ಜಿಲ್ಲೆಯ ಅಸ್ಮೋಲಿ ಪೊಲೀಸ್ ಠಾಣೆ ವ್ಯಾಪ್ತಿಯ ದುಗಾವರ್ ಗ್ರಾಮದಲ್ಲಿನ ಖಾಸಗಿ ಶಾಲೆಯಲ್ಲಿ ಮಂಗಳವಾರ ನಡೆದಿದೆ ಎಂದು ಅವರು ಹೇಳಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿರುವ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಶ್ರೀಶ್ ಚಂದ್ರ, “ಹಿಂದೂ ಬಾಲಕನ ತಂದೆಯ ದೂರನ್ನು ಆಧರಿಸಿ ಶಿಕ್ಷಕಿ ಶೈಸ್ಟ ವಿರುದ್ಧ ಐಪಿಸಿ ಸೆಕ್ಷನ್ ಗಳಾದ 153ಎ (ಧರ್ಮ, ಜನಾಂಗ ಇತ್ಯಾದಿಗಳ ನೆಲೆಯಲ್ಲಿ ಎರಡು ವಿಭಿನ್ನ ಗುಂಪುಗಳ ನಡುವೆ ದ್ವೇಷವನ್ನು ಪ್ರಚೋದಿಸುವುದು) ಹಾಗೂ 323 (ಸ್ವಯಂಪ್ರೇರಿತವಾಗಿ ನೋವುಂಟು ಮಾಡುವುದು) ಅಡಿ ಪ್ರರಕಣ ದಾಖಲಿಸಿಕೊಳ್ಳಲಾಗಿದೆ” ಎಂದು ತಿಳಿಸಿದ್ದಾರೆ.
ನನ್ನ ಪುತ್ರನು ಶಾಲೆಯಲ್ಲಿ ಐದನೆಯ ತರಗತಿ ವಿದ್ಯಾರ್ಥಿಯಾಗಿದ್ದು, ತಾನು ಕೇಳಿದ ಪ್ರಶ್ನೆಗೆ ನನ್ನ ಪುತ್ರ ಉತ್ತರಿಸಲಿಲ್ಲವೆಂದು ಶಿಕ್ಷಕಿಯು ಮುಸ್ಲಿಂ ವಿದ್ಯಾರ್ಥಿಯಿಂದ ಆತನ ಕೆನ್ನೆಗೆ ಹೊಡೆಸಿದ್ದಾರೆ. ಇದರಿಂದ ನನ್ನ ಪುತ್ರನ ಧಾರ್ಮಿಕ ಭಾವನೆಗಳಿಗೆ ಧಕ್ಕೆಯಾಗಿದೆ ಎಂದು ಆರೋಪಿಸಿದ್ದಾರೆ.
ಇದಕ್ಕೂ ಮುನ್ನ, ಉತ್ತರ ಪ್ರದೇಶದ ಮುಝಾಫ್ಫರ್ ನಗರದ ಶಿಕ್ಷಕಿಯೊಬ್ಬರ ವಿರುದ್ಧ ಖುಬ್ಬಾಪುರ್ ಗ್ರಾಮದಲ್ಲಿ ಎರಡನೆ ತರಗತಿಯ ಮುಸ್ಲಿಂ ವಿದ್ಯಾರ್ಥಿಯೊಬ್ಬನ ಕೆನ್ನೆಗೆ ಹೊಡೆಯುವಂತೆ ಇತರ ವಿದ್ಯಾರ್ಥಿಗಳಿಗೆ ಸೂಚಿಸಿ, ಧಾರ್ಮಿಕ ನಿಂದನೆಯನ್ನೂ ಮಾಡಿದ ಆರೋಪದಡಿ ಪ್ರಕರಣ ದಾಖಲಾಗಿತ್ತು.