ಮೇಕೆ, ಪಾರಿವಾಳ ಕದ್ದ ಆರೋಪ: ತಲೆಕೆಳಗಾಗಿ ನೇತುಹಾಕಿ ನಾಲ್ವರು ದಲಿತರ ಮೇಲೆ ದೊಣ್ಣೆಯಿಂದ ಹಲ್ಲೆ
Photo: NDTV
ಮುಂಬೈ: ಮಹಾರಾಷ್ಟ್ರದ ಅಹ್ಮದ್ನಗರ ಜಿಲ್ಲೆಯ ಹಳ್ಳಿಯೊಂದರಲ್ಲಿ ಮೇಕೆ ಮತ್ತು ಕೆಲವು ಪಾರಿವಾಳಗಳನ್ನು ಕದ್ದಿದ್ದಾರೆ ಎಂಬ ಶಂಕೆಯ ಮೇಲೆ ನಾಲ್ವರು ದಲಿತರನ್ನು ಮರಕ್ಕೆ ತಲೆಕೆಳಗಾಗಿ ನೇತುಹಾಕಿ ಆರು ಮಂದಿ ದೊಣ್ಣೆಗಳಿಂದ ಥಳಿಸಲಾಗಿದೆ ಎಂದು ಪೊಲೀಸರು ರವಿವಾರ ತಿಳಿಸಿದ್ದಾರೆ.
ಶ್ರೀರಾಂಪುರ ತಾಲೂಕಿನ ಹರೇಗಾಂವ್ ಗ್ರಾಮದಲ್ಲಿ ನಡೆದ ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ್ದು, ದಾಳಿಗೆ ಸಂಬಂಧಿಸಿದಂತೆ ಪೊಲೀಸರು ಶನಿವಾರ ಓರ್ವನನ್ನು ಬಂಧಿಸಿದ್ದು, ಐವರು ತಲೆಮರೆಸಿಕೊಂಡಿದ್ದಾರೆ ಎಂದು ಅಹ್ಮದ್ನಗರ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಆಗಸ್ಟ್ 25 ರಂದು, ಗ್ರಾಮದ ಆರು ಜನರು 20 ರ ಹರೆಯದ ನಾಲ್ವರು ದಲಿತ ಯುವಕರನ್ನು ಅವರ ಮನೆಗಳಿಂದ ಕರೆದೊಯ್ದಿದ್ದಾರೆ. ಮೇಕೆ ಮತ್ತು ಕೆಲವು ಪಾರಿವಾಳಗಳನ್ನು ಕದ್ದಿದ್ದಾರೆ ಎಂಬ ಅನುಮಾನದ ಮೇಲೆ ಸಂತ್ರಸ್ತರನ್ನು ಮರಕ್ಕೆ ತಲೆಕೆಳಗಾಗಿ ನೇತುಹಾಕಿ ದೊಣ್ಣೆಗಳಿಂದ ಹಲ್ಲೆ ನಡೆಸಲಾಗಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.
ಆರೋಪಿಗಳನ್ನು ಯುವರಾಜ್ ಗಲಾಂಡೆ, ಮನೋಜ್ ಬೋಡಕೆ, ಪಪ್ಪು ಪರ್ಖೆ, ದೀಪಕ್ ಗಾಯಕವಾಡ, ದುರ್ಗೇಶ್ ವೈದ್ಯ ಮತ್ತು ರಾಜು ಬೋರಗೆ ಎಂದು ಗುರುತಿಸಲಾಗಿದೆ.
ಆರೋಪಿಗಳಲ್ಲಿ ಓರ್ವ ಘಟನೆಯ ವೀಡಿಯೊವನ್ನು ಚಿತ್ರೀಕರಿಸಿದ್ದು, ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.
ಗಾಯಾಳುಗಳನ್ನು ನಂತರ ಹತ್ತಿರದ ಆಸ್ಪತ್ರೆಗೆ ಕರೆದೊಯ್ಯಲಾಗಿದ್ದು, ಥಳಿತಕ್ಕೊಳಗಾದವರಲ್ಲಿ ಶುಭಂ ಮಗಡೆ ಎಂಬ ಯುವಕ ಪೊಲೀಸರಿಗೆ ದೂರು ನೀಡಿದ್ದಾರೆ.
ಭಾರತೀಯ ದಂಡ ಸಂಹಿತೆ ಮತ್ತು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ (ದೌರ್ಜನ್ಯ ತಡೆ) ಕಾಯ್ದೆ, ಸೆಕ್ಷನ್ 307 (ಕೊಲೆ ಯತ್ನ), 364 (ಅಪಹರಣ) ಮತ್ತು ಇತರ ಸಂಬಂಧಿತ ನಿಬಂಧನೆಗಳ ಅಡಿಯಲ್ಲಿ ಪ್ರಕರಣವನ್ನು ದಾಖಲಿಸಲಾಗಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.