ಅದಾನಿ ಗ್ರೀನ್ ಸೌರ ಯೋಜನೆ | ಪ್ರಸರಣ ವೆಚ್ಚ ಮನ್ನಾಗೊಳಿಸಿ ಒಪ್ಪಂದವನ್ನು ಲಾಭದಾಯಕವಾಗಿಸಿದ ಸರಕಾರ
PC : PTI
ಹೊಸದಿಲ್ಲಿ : ಕೇಂದ್ರ ಸರಕಾರವು 2021ರಲ್ಲಿ ಅದಾನಿ ಗ್ರೀನ್ ಮತ್ತು ಅಝುರೆ ಪವರ್ನಿಂದ ವಿದ್ಯುತ್ತನ್ನು ಖರೀದಿಸುವ ರಾಜ್ಯಗಳಿಗೆ ಪ್ರಸರಣ ಶುಲ್ಕವನ್ನು ಮನ್ನಾ ಮಾಡಿದ 24 ಗಂಟೆಗಳಲ್ಲಿ ವೈಎಸ್ಆರ್ಸಿಪಿ ನೇತೃತ್ವದ ಆಂಧ್ರಪ್ರದೇಶ ಸರಕಾರವು ಸಾರ್ವಜನಿಕ ವಲಯದ ಸೋಲಾರ್ ಎನರ್ಜಿ ಕಾರ್ಪೊರೇಷನ್ ಆಫ್ ಇಂಡಿಯಾ(ಎಸ್ಇಸಿಐ)ದೊಂದಿಗೆ ಖರೀದಿ ಒಪ್ಪಂದಕ್ಕೆ ಸಹಿ ಹಾಕಿತ್ತು. ಎಸ್ಇಸಿಐ ಒಟ್ಟು 12 ಗಿಗಾವ್ಯಾಟ್ ಯೋಜನೆಗಳ ಗುತ್ತಿಗೆಯನ್ನು ಇವೆರಡು ಕಂಪನಿಗಳಿಗೆ ನೀಡಿತ್ತು.
ಅಂತರರಾಜ್ಯ ಪ್ರಸರಣ ವ್ಯವಸ್ಥೆ ಅಥವಾ ಐಎಸ್ಟಿಎಸ್ ಶುಲ್ಕಗಳನ್ನು ಮನ್ನಾ ಮಾಡಿದ್ದರಿಂದ ಪ್ರತಿ ಯೂನಿಟ್ ವಿದ್ಯುತ್ ಖರೀದಿಯಲ್ಲಿ 80 ಪೈಸೆ(ವಾರ್ಷಿಕ 1,360 ಕೋಟಿ ರೂ.)ಗಳಷ್ಟು ಉಳಿತಾಯವನ್ನು ಅಂದಾಜಿಸಲಾಗಿದ್ದು, ತನ್ಮೂಲಕ ಕೇಂದ್ರವು ಇವೆರಡು ಯೋಜನೆಗಳಿಂದ ವಿದ್ಯುತ್ತನ್ನು ಖರೀದಿಸಲು ರಾಜ್ಯಗಳನ್ನು ಪ್ರೋತ್ಸಾಹಿಸಿತ್ತು.
ರಾಷ್ಟ್ರೀಯ ಗ್ರಿಡ್ನ್ನು ಬಳಸಿ ವಿದ್ಯುತ್ತನ್ನು ಒಂದು ರಾಜ್ಯದಿಂದ ಇನ್ನೊಂದು ರಾಜ್ಯಕ್ಕೆ ಸಾಗಿಸುವಾಗ ಐಎಸ್ಟಿಎಸ್ ಶುಲ್ಕಗಳನ್ನು ವಿಧಿಸಲಾಗುತ್ತದೆ.
ಕೇಂದ್ರ ವಿದ್ಯುತ್ ಸಚಿವಾಲಯವು 2021, ನ.30ರಂದು ಹೊರಡಿಸಿದ್ದ ಆದೇಶದಲ್ಲಿ ವಾರದ ಹಿಂದಷ್ಟೇ, ನ.23ರಂದು ವಿಧಿಸಿದ್ದ ಷರತ್ತುಗಳಲ್ಲಿ ಎರಡನ್ನು ಸಡಿಲಿಸಲಾಗಿತ್ತು. ಯೋಜನೆಯು 2025, ಜೂ.30ಕ್ಕೆ ಮುನ್ನ ಕಾರ್ಯಾರಂಭಗೊಳ್ಳಬೇಕು ಮತ್ತು ಯೋಜನೆಯಿಂದ ಪೂರೈಸಲಾಗುವ ವಿದ್ಯುತ್ ರಾಜ್ಯದ ನವೀಕರಿಸಬಹುದಾದ ವಿದ್ಯುತ್ ಬಾಧ್ಯತೆ(ಆರ್ಪಿಒ)ಯೊಳಗಿರಬೇಕು; ಇವು ಈ ಎರಡು ಷರತ್ತುಗಳಾಗಿದ್ದವು. ರಾಜ್ಯಗಳು ತಮ್ಮ ಒಟ್ಟು ವಿದ್ಯುತ್ತಿನ ನಿರ್ದಿಷ್ಟ ಶೇಕಡಾವಾರು ಪ್ರಮಾಣವನ್ನು ನವೀಕರಿಸಬಹುದಾದ ಮೂಲಗಳಿಂದ ಖರೀದಿಸುವುದನ್ನು ಆರ್ಪಿಒ ಅಗತ್ಯವಾಗಿಸಿದೆ.
ಆಂಧ್ರಪ್ರದೇಶ ಸರಕಾರದ ಮೂಲಗಳ ಪ್ರಕಾರ ಅದಾನಿ ಗ್ರೀನ್ ಪವರ್ನ ಮೊದಲ 1,000 ಮೆಗಾವ್ಯಾಟ್ ಯೋಜನೆಯು ಎಪ್ರಿಲ್ 2025ರಲ್ಲಷ್ಟೇ ಕಾರ್ಯಾರಂಭಗೊಳ್ಳಲಿದೆ ಮತ್ತು ಉಳಿದ ವಿದ್ಯುತ್ ಜೂನ್ 2025ರ ನಂತರ ಪೂರೈಕೆಯಾಗುವ ನಿರೀಕ್ಷೆಯಿದೆ.
ಸುದ್ದಿಸಂಸ್ಥೆಯು ಅದಾನಿ ಗ್ರೀನ್ನ ವಕ್ತಾರರನ್ನು ಸಂಪರ್ಕಿಸಿದ್ದು, ಐಎಸ್ಟಿಎಸ್ ಶುಲ್ಕ ಮನ್ನಾದ ಲಾಭವನ್ನು ರಾಜ್ಯಗಳ ವಿದ್ಯುತ್ ವಿತರಣೆ ಸಂಸ್ಥೆಗಳು(ಡಿಸ್ಕಾಮ್ಗಳು) ಪಡೆಯುತ್ತವೆಯೇ ಹೊರತು ವಿದ್ಯುತ್ ಪೂರೈಕೆ ಕಂಪನಿಯಲ್ಲ. ಅದು ನಿಗದಿತ ದರವನ್ನು ಮಾತ್ರ ಸ್ವೀಕರಿಸುತ್ತದೆ ಎಂದು ತಿಳಿಸಿದರು. ಯೋಜನೆಯ ಕಾರ್ಯಾರಂಭಕ್ಕೆ ವಿಳಂಬದ ಕಾರಣಗಳು ಪೂರೈಕೆ ಕಂಪನಿಗಳ ವ್ಯಾಪ್ತಿಯನ್ನು ಮೀರಿವೆ ಎಂದೂ ಅವರು ಹೇಳಿದರು.
ರಾಜ್ಯದಿಂದ ಲಾಭದಾಯಕ ವಿದ್ಯುತ್ ಖರೀದಿ ಒಪ್ಪಂದಗಳನ್ನು ಮಾಡಿಕೊಳ್ಳಲು 250 ಮಿಲಿಯನ್ ಡಾಲರ್ ಗಳ ಲಂಚವನ್ನು ಪಾವತಿಸಿದ್ದಕ್ಕಾಗಿ ಅಥವಾ ಪಾವತಿಸುವ ಭರವಸೆ ನೀಡಿದ್ದಕ್ಕಾಗಿ ಅಮೆರಿಕದ ಕಾನೂನು ಇಲಾಖೆಯು ಅದಾನಿ ಗ್ರೂಪ್ ಅಧ್ಯಕ್ಷ ಗೌತಮ್ ಅದಾನಿ, ಅವರ ಸೋದರಪುತ್ರ ಸಾಗರ್ ಅದಾನಿ ಮತ್ತು ಇತರ ಆರು ಜನರ ವಿರುದ್ಧ ದೋಷಾರೋಪವನ್ನು ಹೊರಿಸಿದೆ.
2021,ನ.30ರಂದು ವಿದ್ಯುತ್ ಸಚಿವಾಲಯವು ಆದೇಶ ಹೊರಡಿಸಿದ ಮರುದಿನವೇ ಆಂಧ್ರ ಪ್ರದೇಶ ಸರಕಾರವು ಎಸ್ಇಸಿಐ ಜೊತೆ ಒಪ್ಪಂದಕ್ಕೆ ಸಹಿ ಹಾಕಿತ್ತು.
ಪ್ರಸರಣ ಶುಲ್ಕಗಳನ್ನು ಮನ್ನಾ ಮಾಡಿರದಿದ್ದರೆ ರಾಜ್ಯವು 2.49 ರೂ.ಪ್ರತಿ ಯೂನಿಟ್ ಖರೀದಿ ದರದ ಜೊತೆಗೆ 80 ಪೈಸೆಗಳ ಹೆಚ್ಚುವರಿ ವೆಚ್ಚವನ್ನು ಭರಿಸಬೇಕಾಗುತ್ತಿತ್ತು. ಎಸ್ಇಸಿಐನಿಂದ ವಿದ್ಯುತ್ ಖರೀದಿಗೆ ಪ್ರಸರಣ ಶುಲ್ಕಗಳನ್ನು ವಿಧಿಸಬಾರದು ಎನ್ನುವುದು ಆಂಧ್ರಪ್ರದೇಶವು ಮಂಡಿಸಿದ್ದ ಷರತ್ತುಗಳಲ್ಲಿ ಒಂದಾಗಿತ್ತು ಎಂದು ವಿಷಯವನ್ನು ಬಲ್ಲ ಆಂಧ್ರಪ್ರದೇಶ ಸರಕಾರದ ಅಧಿಕಾರಿಯೋರ್ವರು ತಿಳಿಸಿದರು.
ರಾಜ್ಯವು ಎಸ್ಇಸಿಐನಿಂದ 1,700 ಕೋಟಿ ಯೂನಿಟ್ ವಿದ್ಯುತ್ ಖರೀದಿಗೆ ಒಪ್ಪಿಕೊಂಡಿದ್ದರಿಂದ ವಿದ್ಯುತ್ ಸಚಿವಾಲಯದ ಮಧ್ಯಪ್ರವೇಶದಿಂದ ಸರಕಾರಕ್ಕೆ ವಾರ್ಷಿಕ 1,360 ಕೋಟಿ ರೂ.ಗಳ ಶುಲ್ಕ ಮನ್ನಾ ಆಗಿತ್ತು. ಒಪ್ಪಂದವನ್ನು 25 ವರ್ಷಗಳ ಅವಧಿಗೆ ಮಾಡಿಕೊಂಡಿದ್ದರಿಂದ ಒಟ್ಟು ಮನ್ನಾ ಮೊತ್ತ 34,000 ಕೋಟಿ ರೂ.ಗಳಾಗುತ್ತಿದ್ದವು.
ಅಮೆರಿಕ ನ್ಯಾಯಾಲಯದಲ್ಲಿ ಅದಾನಿ ಮತ್ತು ಇತರರ ವಿರುದ್ಧ ದೋಷಾರೋಪದ ಬಳಿಕ ಟಿಡಿಪಿಯ ಎನ್.ಚಂದ್ರಬಾಬು ನಾಯ್ಡು ನೇತೃತ್ವದ ನೂತನ ಸರಕಾರವು ವೈಎಸ್ಆರ್ ಕಾಂಗ್ರೆಸ್ ಪಾರ್ಟಿಯ ಹಿಂದಿನ ಸರಕಾರವು ಮಾಡಿಕೊಂಡಿದ್ದ ವಿದ್ಯುತ್ ಖರೀದಿ ಒಪ್ಪಂದವನ್ನು ಪುನರ್ ಪರಿಶೀಲಿಸುತ್ತಿದೆ.