ಮಹಾರಾಷ್ಟ್ರ | 6,600 ಮೆಗಾವ್ಯಾಟ್ ವಿದ್ಯುತ್ ಪೂರೈಕೆಯ ಬಿಡ್ ಅದಾನಿ ಸಮೂಹಕ್ಕೆ
PHOTO : PTI
ಹೊಸದಿಲ್ಲಿ : ಅದಾನಿ ಸಮೂಹವು ದೀರ್ಘಾವಧಿಗೆ ಮಹಾರಾಷ್ಟ್ರಕ್ಕೆ 6,600 ಮೆಗಾವ್ಯಾಟ್ ನವೀಕರಿಸಬಹುದಾದ ಮತ್ತು ಉಷ್ಣ ವಿದ್ಯುತ್ ಅನ್ನು ಪೂರೈಸಲು ಬಿಡ್ ಅನ್ನು ಪಡೆದುಕೊಂಡಿದೆ. ಪ್ರತಿ ಯೂನಿಟ್ಗೆ 4.08 ರೂ.ದರವನ್ನು ನಮೂದಿಸುವ ಮೂಲಕ ಅದಾನಿ ಸಮೂಹವು ಜೆಎಸ್ಡಬ್ಲ್ಯು ಮತ್ತು ಟೊರೆಂಟ್ ಪವರ್ಗಳನ್ನು ಹಿಂದಿಕ್ಕಿದೆ.
25 ವರ್ಷ ಕಾಲ ನವೀಕರಿಸಬಹುದಾದ ಮತ್ತು ಉಷ್ಣ ಇಂಧನ ಪೂರೈಕೆಗಾಗಿ ಅದಾನಿ ಪವರ್ ಉಲ್ಲೇಖಿಸಿರುವ ದರವು ಮಹಾರಾಷ್ಟ್ರದ ಪ್ರಸ್ತುತ ವಿದ್ಯುತ್ ಖರೀದಿ ವೆಚ್ಚಕ್ಕಿಂತ ಒಂದು ರೂಪಾಯಿ ಕಡಿಮೆಯಾಗಿದ್ದು, ರಾಜ್ಯದ ಭವಿಷ್ಯದ ವಿದ್ಯುತ್ ಅಗತ್ಯಗಳನ್ನು ಪೂರೈಸಲು ನೆರವಾಗಲಿದೆ ಎಂದು ಬಲ್ಲ ಮೂಲಗಳು ತಿಳಿಸಿವೆ.
ಬಿಡ್ನ ಷರತ್ತುಗಳಂತೆ,ಲೆಟರ್ ಆಫ್ ಇಂಟೆಂಟ್ ಅಥವಾ ಆಶಯ ಪತ್ರವನ್ನು ನೀಡಿದ 48 ತಿಂಗಳುಗಳಲ್ಲಿ ವಿದ್ಯುತ್ ಪೂರೈಕೆಯನ್ನು ಆರಂಭಿಸಬೇಕಿದೆ. ಅದಾನಿ ಪವರ್ ಸಂಪೂರ್ಣ ಪೂರೈಕೆ ಅವಧಿಯಲ್ಲಿ ಸೌರ್ ವಿದ್ಯುತ್ತನ್ನು ಪ್ರತಿ ಯೂನಿಟ್ಗೆ 2.70 ರೂ.ಗಳ ಸ್ಥಿರದರದಲ್ಲಿ ಪೂರೈಸಲಿದೆ ಮತ್ತು ಉಷ್ಣ ವಿದ್ಯುತ್ ದರವು ಕಲ್ಲಿದ್ದಲು ಬೆಲೆಗಳನ್ನು ಅವಲಂಬಿಸಿರುತ್ತದೆ.
ಮಹಾರಾಷ್ಟ್ರ ರಾಜ್ಯ ವಿದ್ಯುತ್ ವಿತರಣೆ ಕಂಪನಿ (ಎಂಎಸ್ಇಡಿಸಿಎಲ್) ಲೋಕಸಭಾ ಚುನಾವಣೆಗೆ ಮಾದರಿ ನೀತಿ ಸಂಹಿತೆ ಜಾರಿಯಾಗುವ ಮುನ್ನ ಕಳೆದ ಮಾರ್ಚ್ನಲ್ಲಿ 5,000 ಮೆವ್ಯಾ ಸೌರ ವಿದ್ಯುತ್ ಮತ್ತು 1,600 ಮೆವ್ಯಾ ಉಷ್ಣ ವಿದ್ಯುತ್ ಪೂರೈಕೆಗಾಗಿ ವಿಶಿಷ್ಟ ಟೆಂಡರ್ನ್ನು ಕರೆದಿತ್ತು ಮತ್ತು ರಾಜ್ಯದಲ್ಲಿ ವಿಧಾನಸಭಾ ಚುನಾವಣೆಗಳ ಪ್ರಕಟಣೆಗೆ ಮುನ್ನ ಅದನ್ನು ಅದಾನಿ ಪವರ್ಗೆ ನೀಡಿದೆ.
ಎರಡನೇ ಅತಿ ಕಡಿಮೆ ಬಿಡ್ ಸಲ್ಲಿಸಿದ್ದ ಜೆಎಸ್ಡಬ್ಯು ಎನರ್ಜಿ ಪ್ರತಿ ಯೂನಿಟ್ಗೆ 4.36 ರೂ.ಗಳನ್ನು ನಮೂದಿಸಿತ್ತು. ಒಟ್ಟು ನಾಲ್ಕು ಕಂಪನಿಗಳು ಬಿಡ್ ಪ್ರಕ್ರಿಯೆಯಲ್ಲಿ ಭಾಗವಹಿಸಿದ್ದವು.
ಭಾರತದ ಖಾಸಗಿ ವಲಯದಲ್ಲಿ ಅತಿ ದೊಡ್ಡ ಉಷ್ಣ ವಿದ್ಯುತ್ ಕಂಪನಿಯಾಗಿರುವ ಅದಾನಿ ಪವರ್ 27 ಗಿಗಾವ್ಯಾಟ್ ವಿದ್ಯುತ್ ಉತ್ಪಾದನಾ ಸಾಮರ್ಥ್ಯವನ್ನು ಹೊಂದಿದ್ದು, ಇದು 2030ರ ವೇಳೆಗೆ 31 ಗಿಗಾವ್ಯಾಟ್ಗೆ ಏರಲಿದೆ. ಅದರ ಸೋದರಿ ಸಂಸ್ಥೆ ಅದಾನಿ ಗ್ರೀನ್ ಎನರ್ಜಿ ಲಿ.ದೇಶದ ಅತ್ಯಂತ ದೊಡ್ಡ ನವೀಕರಿಸಬಹುದಾದ ಇಂಧನ ಕಂಪನಿಯಾಗಿದ್ದು, 11 ಗಿಗಾವ್ಯಾಟ್ ವಿದ್ಯುತ್ ಉತ್ಪಾದನಾ ಸಾಮರ್ಥ್ಯವನ್ನು ಹೊಂದಿದೆ. ಇದು 2023ರ ವೇಳೆಗೆ 50 ಗಿಗಾವ್ಯಾಟ್ಗೆ ಹೆಚ್ಚಲಿದೆ.