ಇತಿಹಾಸ ಸೃಷ್ಟಿಸಿದ ಇಸ್ರೋ; ಅಂತಿಮ ಕಕ್ಷೆ ತಲುಪಿದ ಆದಿತ್ಯ-ಎಲ್1
ಹೊಸದಿಲ್ಲಿ: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ)ದ ಮಹತ್ವಾಕಾಂಕ್ಷಿ ಆದಿತ್ಯ-ಎಲ್1 ಮಿಷನ್ ಇಂದು ತನ್ನ ಗಮ್ಯಸ್ಥಾನವಾಗಿರುವ ಎಲ್-1 ಪಾಯಿಂಟ್ ಅನ್ನು ಯಶಸ್ವಿಯಾಗಿ ತಲುಪಿದೆ. ಭಾರತ ಇನ್ನೊಂದು ಮೈಲಿಗಲ್ಲು ಸಾಧಿಸಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಸಂತಸ ವ್ಯಕ್ತಪಡಿಸಿದ್ದಾರೆ. ಈ ಕುರಿತು ಪ್ರಧಾನಿ ಟ್ವೀಟ್ ಮಾಡಿದ್ದಾರೆ.
110 ದಿನಗಳಿಗೂ ಹೆಚ್ಚಿನ ಪ್ರಯಾಣದ ಅವಧಿಯಲ್ಲಿ ಆದಿತ್ಯ ಎಲ್1 15 ಲಕ್ಷ ದೂರ ಕ್ರಮಿಸಿ ನಿಖರವಾಗಿ ತನ್ನ ಕಕ್ಷೆ ತಲುಪಿದೆ.
ಈ ಎಲ್1 ಪಾಯಿಂಟ್ ಬಾಹ್ಯಾಕಾಶ ನೌಕೆಯನ್ನು ಭೂಮಿಯಿಂದ ಅಂದಾಜು 15 ಲಕ್ಷ ಕಿಲೋಮೀಟರ್ ದೂರದಲ್ಲಿ ಸೂಕ್ತ ಸ್ಥಳದಲ್ಲಿ ನಿಲ್ಲಿಸಿದೆ ಹಾಗೂ ಇಲ್ಲಿಂದ ಸೂರ್ಯನನ್ನು ಯಾವುದೇ ಅಡಚಣೆಯಿಲ್ಲದೆ ನೋಡಿ ಅಧ್ಯಯನ ನಡೆಸಬಹುದಾಗಿದೆ.
ಈ ಬಾಹ್ಯಾಕಾಶ ನೌಕೆ ಲ್ಯಾಗ್ರೇಂಜ್ ಪಾಯಿಂಟ್ ಅಥವಾ ಎಲ್1 ಪಾಯಿಂಟ್ ಸುತ್ತಲಿನ ಹೇಲೋ ಕಕ್ಷೆ ತಲುಪಿದೆ. ಇಲ್ಲಿಂದ ಅದು ಸೂರ್ಯನನ್ನು ನಿರಂತರವಾಗಿ ನೋಡಿ ಸೌರ ಚಟುವಟಿಕೆಗಳ ಅಧ್ಯಯನ ನಡೆಸಲಿದೆ.
ಇಂದು ಬೆಳಿಗ್ಗೆ ಇಸ್ರೋ ಈ ಹೇಲೋ ಕಕ್ಷೆಗೆ ಸೇರಿಸುವ ಪ್ರಕ್ರಿಯೆಯನ್ನು ಆರಂಭಿಸಿತ್ತು. ಆದಿತ್ಯ-ಎಲ್1ನ ಮೋಟಾರ್‌ಗಳಿಗೆ ಅದು ಚಾಲನೆ ನೀಡಿತ್ತು.
“ಈ ಸಾಧನೆಯು ನಮ್ಮ ವಿಜ್ಞಾನಿಗಳ ಅವಿರತ ಶ್ರಮದ ಫಲವಾಗಿದ್ದು ಅತ್ಯಂತ ಕ್ಲಿಷ್ಟಕರ ಮತ್ತು ನಾಜೂಕು ಬಾಹ್ಯಾಕಾಶ ಯೋಜನೆಯನ್ನು ಭಾರತ ಕಾರ್ಯಗತಗೊಳಿಸಿದೆ. ಈ ಅಸಾಧಾರಣ ಕಾರ್ಯವನ್ನು ನಾನು ದೇಶದೊಂದಿಗೆ ಸೇರಿಕೊಂಡು ಶ್ಲಾಘಿಸುತ್ತೇನೆ, ಮಾನವ ಕುಲದ ಪ್ರಯೋಜನಕ್ಕಾಗಿ ವಿಜ್ಞಾನ ಕ್ಷೇತ್ರದಲ್ಲಿ ಹೊಸ ಸಾಧನೆಗಳನ್ನು ಮುಂದುವರಿಸುತ್ತೇವೆ,” ಎಂದು ಪ್ರಧಾನಿ ಹೇಳಿದ್ದಾರೆ.
ಇನ್ನು ಈ ಬಾಹ್ಯಾಕಾಶ ನೌಕೆಯು ಕಮಿಷನಿಂಗ್ ಹಂತದ ಮೂಲಕ ಹಾದುಹೋಗಲಿದ್ದು ನಂತರ ಅದು ಸೂರ್ಯನನನ್ನು ಅಧ್ಯಯನ ನಡೆಸುವ ಕೆಲಸ ಮಾಡಲಿದೆ.