ಮುಂಬೈ | ತಂದೆಗೆ ಹೆದರಿ ಮನೆಯಿಂದ ಓಡಿಹೋಗಿ ಅತ್ಯಾಚಾರದ ಕಥೆ ಕಟ್ಟಿದ ಯುವತಿ

Photo | NDTV
ಮುಂಬೈ: ತಂದೆಗೆ ಹೆದರಿ ಮನೆಯಿಂದ ಓಡಿಹೋದ ಯುವತಿಯೋರ್ವಳು ತನ್ನ ಗುಪ್ತಾಂಗಕ್ಕೆ ಪ್ಲಾಸ್ಟಿಕ್ ನಲ್ಲಿ ಸುತ್ತಿದ ಕಲ್ಲುಗಳು ಮತ್ತು ಸರ್ಜಿಕಲ್ ಬ್ಲೇಡ್ ಹಾಕಿಕೊಂಡು ಅತ್ಯಾಚಾರದ ಕಥೆ ಕಟ್ಟಿದ್ದಾಳೆ ಎಂದು ಮುಂಬೈ ಪೊಲೀಸರು ತಿಳಿಸಿದ್ದಾರೆ.
ಮಂಗಳವಾರ ತಡರಾತ್ರಿ ರೈಲ್ವೆ ನಿಲ್ದಾಣದಲ್ಲಿ 20ರ ಹರೆಯದ ಯುವತಿಯೋರ್ವಳು ಪತ್ತೆಯಾಗಿದ್ದು, ಆಕೆಗೆ ಅತ್ಯಾಚಾರವಾಗಿದೆ ಎಂದು ಹೇಳಲಾಗಿತ್ತು. ಆಕೆಯ ಗುಪ್ತಾಂಗದಲ್ಲಿ ಪ್ಲಾಸ್ಟಿಕ್ ನಲ್ಲಿ ಸುತ್ತಿದ ಕಲ್ಲುಗಳು ಮತ್ತು ಸರ್ಜಿಕಲ್ ಬ್ಲೇಡ್ ಪತ್ತೆಯಾಗಿತ್ತು. ಪ್ರಕರಣಕ್ಕೆ ಸಂಬಂಧಿಸಿ ಆಟೋ ರಿಕ್ಷಾ ಚಾಲಕನೋರ್ವನನ್ನು ಬಂಧಿಸಲಾಗಿತ್ತು.
ಬಂಧಿತ ರಿಕ್ಷಾ ಚಾಲಕನ ಮೇಲೆ ಅತ್ಯಾಚಾರ ಎಸಗಿದ ಆರೋಪ ಹೊರಿಸಲಾಗಿದೆ. ಆದರೆ ಪೊಲೀಸರು ಪ್ರಾಥಮಿಕ ತನಿಖೆಯನ್ನು ನಡೆಸಿದಾಗ ಕಥೆ ಬೇರೆಯದ್ದೇ ಇದೆ ಎಂದು ತಿಳಿದು ಬಂದಿದೆ. ಯುವತಿಯೇ ತನ್ನ ಗುಪ್ತಾಂಗಕ್ಕೆ ಪ್ಲಾಸ್ಟಿಕ್ ನಲ್ಲಿ ಸುತ್ತಿದ ಕಲ್ಲುಗಳು ಮತ್ತು ಸರ್ಜಿಕಲ್ ಬ್ಲೇಡ್ ಹಾಕಿಕೊಂಡಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.
ಪೊಲೀಸ್ ಮೂಲಗಳು ಸ್ಥಳೀಯ ದಿನಪತ್ರಿಕೆಯೊಂದಕ್ಕೆ ನೀಡಿದ ಮಾಹಿತಿಯ ಪ್ರಕಾರ, ಯುವತಿ ಮುಂಬೈ ಮೆಟ್ರೋಪಾಲಿಟನ್ ಪ್ರದೇಶದ ಟೌನ್ ಶಿಪ್ ನಲಸೊಪಾರಾದಲ್ಲಿರುವ ತನ್ನ ಮನೆಯಿಂದ ಓಡಿ ಹೋಗಿದ್ದಾರೆ. ʼವ್ಯಾಪಾರಿಯಾಗಿರುವ ತಂದೆ ನನಗೆ ಮತ್ತು ನನ್ನ ತಾಯಿಗೆ ದೈಹಿಕವಾಗಿ ನಿಂದನೆ ಮತ್ತು ಹಲ್ಲೆ ನಡೆಸುತ್ತಿದ್ದರು. ಇದರಿಂದ ಮನೆಬಿಟ್ಟು ಬಂದಿದ್ದೇನೆ. ರೈಲ್ವೆ ನಿಲ್ದಾಣದಲ್ಲಿ ಆಟೋ-ರಿಕ್ಷಾ ಚಾಲಕನನ್ನು ಭೇಟಿಯಾಗಿ ತನ್ನ ಸಂಕಷ್ಟ ಮತ್ತು ಕುಟುಂಬದ ಪರಿಸ್ಥಿತಿ ಮತ್ತು ಆತ್ಮಹತ್ಯೆಯ ಆಲೋಚನೆಗಳನ್ನು ಆತನಲ್ಲಿ ಹೇಳಿಕೊಂಡಿದ್ದೇನೆ. ಅವನು ತನ್ನ ಬಗ್ಗೆ ಕನಿಕರ ವ್ಯಕ್ತಪಡಿಸಿ ಮರಳಿ ಮನೆಗೆ ಕರೆದುಕೊಂಡು ಹೋಗುವುದಾಗಿ 12 ಕಿ.ಮೀ ದೂರದಲ್ಲಿರುವ ಅರ್ನಾಲಾಕ್ಕೆ ಕರೆದುಕೊಂಡು ಹೋಗಿ ಎರಡು ಬಾರಿ ಅತ್ಯಾಚಾರ ಎಸಗಿದ್ದಾನೆ ಎಂದು ಆಕೆ ಹೇಳಿಕೊಂಡಿದ್ದಾಳೆ ಎಂದು ತಿಳಿಸಿದ್ದಾರೆ.
ಆಟೋ ಡ್ರೈವರ್ ಬಳಿ ಮಾನ್ಯವಾದ ಗುರುತಿನ ಚೀಟಿ ಇರದ ಕಾರಣ ಆತ ಹೋಟೆಲ್ ಕೊಠಡಿಯನ್ನು ಪಡೆಯಲು ಸಾಧ್ಯವಾಗಿಲ್ಲ. ಆದ್ದರಿಂದ ಇಬ್ಬರು ಕೂಡ ರಾತ್ರಿ ಸಮುದ್ರತೀರದಲ್ಲಿ ಕಳೆದಿದ್ದರು. ಆಕೆಯ ಮೇಲೆ ಅತ್ಯಾಚಾರ ನಡೆದಿರಬಹುದು, ಆ ಬಳಿಕ ಆಟೋ ಚಾಲಕ ಸ್ಥಳದಿಂದ ಪರಾರಿಯಾಗಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.
ಆದರೆ ಮನೆಗೆ ತೆರಳದೆ ಒಂದು ದಿನ ಹೊರಗೆ ಇದ್ದ ಕಾರಣ ಯುವತಿ ಮನೆಯವರಲ್ಲಿ ಸಹನಭೂತಿ ಹುಟ್ಟಿಸಲು ಸರ್ಜಿಕಲ್ ಚಾಕು ಖರೀದಿಸಿ ಗುಪ್ತಾಂಗಕ್ಕೆ ಸೇರಿಸಿದ್ದಾಳೆ ಎನ್ನಲಾಗಿದೆ. ಪೊಲೀಸರು ಈ ಕುರಿತು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ. ಇದಲ್ಲದೆ ಮಹಿಳೆಗೆ ಮಾನಸಿಕವಾಗಿ ಸ್ಥಿರವಾಗಿಲ್ಲ ಎಂಬುವುದನ್ನು ಕೂಡ ಕಂಡುಕೊಂಡಿದ್ದಾರೆ.