15 ತಿಂಗಳ ಬಳಿಕ ಚೀನಾದಿಂದ ಭಾರತಕ್ಕೆ ಹೊಸ ರಾಯಭಾರಿ ನೇಮಕ ಸಾಧ್ಯತೆ
Photo: PTI
ಹೊಸದಿಲ್ಲಿ: ಉಭಯ ದೇಶಗಳ ಗಡಿವಿವಾದ, ಪೂರ್ವ ಲಡಾಕ್ ನಲ್ಲಿ ಸೇನೆಗಳ ಹಿಂಪಡೆಯುವಿಕೆ ಮತ್ತು ಉದ್ವಿಗ್ನತೆ ಶಮನ ವಿಳಂಬದ ಹಿನ್ನೆಲೆಯಲ್ಲಿ ಭಾರತದಲ್ಲಿ ಚೀನಾ ರಾಯಭಾರಿ ಇಲ್ಲದೇ 15 ತಿಂಗಳು ಕಳೆದ ಬಳಿಕ ಭಾರತದಲ್ಲಿ ತನ್ನ ಹೊಸ ರಾಯಭಾರಿಯನ್ನು ನೇಮಕ ಮಾಡಲು ಚೀನಾ ಸಜ್ಜಾಗಿದೆ.
ಈ ಹಿಂದೆ ಅಫ್ಘಾನಿಸ್ತಾನದಲ್ಲಿ ಚೀನಾ ರಾಯಭಾರಿಯಾಗಿ ಕಾರ್ಯ ನಿರ್ವಹಿಸಿದ ಅನುಭವ ಹೊಂದಿರುವ ಹಿರಿಯ ರಾಜತಾಂತ್ರಿಕ ಅಧಿಕಾರಿ ಕ್ಸು ಫೀಹಾಂಗ್ ಅವರನ್ನು ಭಾರತದಲ್ಲಿ ತನ್ನ ಪ್ರತಿನಿಧಿಯಾಗಿ ನೇಮಿಸಲು ಚೀನಾ ನಿರ್ಧರಿಸಿದೆ ಎಂದು ತಿಳಿದುಬಂದಿದೆ.
ಕ್ಸು ಅವರು ರೊಮಾನಿಯಾದಲ್ಲಿ ದೇಶದ ರಾಯಭಾರಿಯಾಗಿ ಕಾರ್ಯನಿರ್ವಹಿಸಿದ್ದರು ಹಾಗೂ ಪ್ರಸ್ತುತ ವಿದೇಶಾಂಗ ವ್ಯವಹಾರಗಳ ಖಾತೆ ರಾಜ್ಯ ಸಚಿವರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಹೊಸ ರಾಜತಾಂತ್ರಿಕರನ್ನು ನಿರ್ಮಿಸುವ ವಿಧಿವಿಧಾನಗಳು ಇನ್ನೂ ಪೂರ್ಣಗೊಂಡಿಲ್ಲ. ಹಾಗೂ ಯಾವಾಗ ಅಧಿಕಾರ ವಹಿಸಿಕೊಳ್ಳುತ್ತಾರೆ ಎನ್ನುವುದು ಕೂಡಾ ಇನ್ನೂ ನಿಖರವಾಗಿ ತಿಳಿದುಬಂದಿಲ್ಲ.
ಚೀನಾದ ಹಿಂದಿನ ರಾಯಭಾರಿ ಸುನ್ ವೀಡಾಂಗ್ ಅವರು 2022ರ ಅಕ್ಟೋಬರ್ ನಲ್ಲಿ ಭಾರತ ತೊರೆದಿದ್ದರು. ಕಳೆದ ಒಂದು ದಶಕದಲ್ಲೇ ಉಭಯ ದೇಶಗಳ ನಡುವಿನ ದ್ವಿಪಕ್ಷೀಯ ಸಂಬಂಧ ಅತ್ಯಂತ ಪ್ರಕ್ಷುಬ್ಧಕಾರಿ ಹಂತವನ್ನು ತಲುಪಿದ ಹಿನ್ನೆಲೆಯಲ್ಲಿ ನೇಮಕಾತಿ ವಿಳಂಬವಾಗಿತ್ತು.
ಗಲ್ವಾನ್ ಸಂಘರ್ಷ ಮತ್ತು ಗಡಿಯಲ್ಲಿ ಶಾಂತಿ ಹಾಗೂ ಸೌಹಾರ್ದತೆ ಕಾಪಾಡುವ ನಿಟ್ಟಿನಲ್ಲಿ ದ್ವಿಪಕ್ಷೀಯ ಒಪ್ಪಂದವನ್ನು ಗೌರವಿಸಬೇಕು ಎಂಬ ಭಾರತದ ಒತ್ತಾಯಕ್ಕೆ ಚೀನಾ ಸ್ಪಂದಿಸದ ಹಿನ್ನೆಲೆಯಲ್ಲಿ ಈ ಅಂಶ ನನೆಗುದಿಗೆ ಬಿದ್ದಿತ್ತು. ಗಡಿಯಲ್ಲಿ ಉಭಯ ದೇಶಗಳು ಸೇನೆಯನ್ನು ಭಾರಿ ಪ್ರಮಾಣದಲ್ಲಿ ನಿಯೋಜಿಸಿದ್ದರೂ, ಇತ್ತೀಚಿನ ತಿಂಗಳುಗಳಲ್ಲಿ ಯಾವುದೇ ಸಂಘರ್ಷ ಸಂಭವಿಸಿಲ್ಲ.