ಪಶ್ಚಿಮ ಬಂಗಾಳದ ಬಳಿಕ ‘ಇಂಡಿಯಾʼಮೈತ್ರಿಕೂಟದ ಏಕತೆಗೆ ಪಂಜಾಬಿನಿಂದ ಇನ್ನೊಂದು ಆಘಾತ
ಭಗವಂತ ಮಾನ್ | Photo:PTI
ಚಂಡಿಗಡ : ಪ್ರತಿಪಕ್ಷಗಳ ಮೈತ್ರಿಕೂಟ ‘ಇಂಡಿಯಾʼಬುಧವಾರ ಕೆಲವೇ ಗಂಟೆಗಳಲ್ಲಿ ಎರಡು ಆಘಾತಗಳನ್ನು ಅನುಭವಿಸಿದೆ. ಪಶ್ಚಿಮ ಬಂಗಾಳದಲ್ಲಿ ಕಾಂಗ್ರೆಸ್ ನೊಂದಿಗೆ ಯಾವುದೇ ಮೈತ್ರಿ ಸಾಧ್ಯತೆಯನ್ನು ಟಿಎಂಸಿ ಮುಖ್ಯಸ್ಥೆ ಮಮತಾ ಬ್ಯಾನರ್ಜಿಯವರು ತಳ್ಳಿಹಾಕಿದ ಬೆನ್ನಿಗೇ ಅತ್ತ ಪಂಜಾಬಿನಲ್ಲಿ ಎಲ್ಲ ಲೋಕಸಭಾ ಕ್ಷೇತ್ರಗಳಲ್ಲಿ ತಾನು ಸ್ಪರ್ಧಿಸುವುದಾಗಿ ಆಪ್ ಘೋಷಿಸಿದೆ.
‘ಆಪ್ ಪಂಜಾಬಿನ 13 ಲೋಕಸಭಾ ಕ್ಷೇತ್ರಗಳಿಗೆ 40 ಅಭ್ಯರ್ಥಿಗಳನ್ನು ಪಟ್ಟಿ ಮಾಡಿದೆ. ಅಭ್ಯರ್ಥಿಗಳನ್ನು ಅಂತಿಮಗೊಳಿಸುವ ಮುನ್ನ ನಾವು ಸಮೀಕ್ಷೆಯನ್ನು ನಡೆಸಲಿದ್ದೇವೆ ’ ಎಂದು ಪಂಜಾಬ್ ಮುಖ್ಯಮಂತ್ರಿ ಭಗವಂತ ಮಾನ್ ಬುಧವಾರ ಹೇಳಿದರು.
ಮಾನ್ ಹೇಳಿಕೆಗೆ ಕಾಂಗ್ರೆಸ್ ಇನ್ನಷ್ಟೇ ಪ್ರತಿಕ್ರಿಯಿಸಬೇಕಿದೆ. ಪಶ್ಚಿಮ ಬಂಗಾಳದಲ್ಲಿ ಕಾಂಗ್ರೆಸ್ ಜೊತೆ ಮೈತ್ರಿ ಮಾಡಿಕೊಳ್ಳುವುದಿಲ್ಲ ಎಂಬ ಮಮತಾರ ಹೇಳಿಕೆಗೆ ಪ್ರತಿಕ್ರಿಯಿಸಿದ ಪಕ್ಷದ ಹಿರಿಯ ನಾಯಕ ಕೆ.ಸಿ.ವೇಣುಗೋಪಾಲ ಅವರು, ‘ಪಶ್ಚಿಮ ಬಂಗಾಳದಲ್ಲಿ ಕಾಂಗ್ರೆಸ್ ಮತ್ತು ಟಿಎಂಸಿ ಮೈತ್ರಿಯನ್ನು ಮಾಡಿಕೊಳ್ಳಲಿವೆ. ಬಿಜೆಪಿಯ ಸ್ಥಾನಗಳನ್ನು ತಗ್ಗಿಸುವುದು ನಮ್ಮ ಗುರಿಯಾಗಿದೆ. ನಾವು ಟಿಎಂಸಿ ಜೊತೆ ಮಾತನಾಡುತ್ತೇವೆ. ಮಮತಾ ಬ್ಯಾನರ್ಜಿ ಇಂಡಿಯಾ ಮೈತ್ರಿಕೂಟದಲ್ಲಿ ಹಿರಿಯ ನಾಯಕಿಯಾಗಿದ್ದಾರೆ. ಇವೆಲ್ಲ ಸಣ್ಣಪುಟ್ಟ ಭಿನ್ನಾಭಿಪ್ರಾಯಗಳಾಗಿದ್ದು ಬಗೆಹರಿಸಿಕೊಳ್ಳಲಾಗುವುದು ’ ಎಂದು ಹೇಳಿದರು.
ತಮ್ಮ ಭದ್ರಕೋಟೆಗಳಲ್ಲಿ ಏಕಾಂಗಿಯಾಗಿ ಚುನಾವಣೆಗಳಲ್ಲಿ ಸ್ಪರ್ಧಿಸುವ ಟಿಎಂಸಿ ಮತ್ತು ಆಪ್ ನಿರ್ಧಾರಗಳನ್ನು ಇಂಡಿಯಾ ಮೈತ್ರಿಕೂಟದಲ್ಲಿ ಕಾಂಗ್ರೆಸ್ ಮತ್ತು ಪ್ರಾದೇಶಿಕ ಪಕ್ಷಗಳ ನಿರಂತರ ಕಚ್ಚಾಟದ ಹಿನ್ನೆಲೆಯಲ್ಲಿ ನೋಡುವುದು ಅಗತ್ಯವಾಗಿದೆ.
ಪ್ರಾದೇಶಿಕ ಪಕ್ಷಗಳು, ವಿಶೇಷವಾಗಿ ಟಿಎಂಸಿ, ಆಪ್ ಮತ್ತು ಎಸ್ಪಿ ತಮ್ಮ ಭದ್ರಕೋಟೆಗಳಲ್ಲಿ ನಾಯಕತ್ವ ಪಾತ್ರಕ್ಕಾಗಿ ಪದೇ ಪದೇ ಒತ್ತಾಯಿಸುತ್ತಿದ್ದರೆ ದೊಡ್ಡಣ್ಣನ ಪಾತ್ರವನ್ನು ವಹಿಸಲು ನಿರ್ಧರಿಸಿರುವ ಕಾಂಗ್ರೆಸ್ ರಾಜ್ಯಮಟ್ಟದಲ್ಲಿ ಸ್ಥಾನ ಹಂಚಿಕೆ ಮಾತುಕತೆಗಳ ಸಂದರ್ಭದಲ್ಲಿ ಹೆಚ್ಚು ಸ್ಥಾನಗಳಿಗಾಗಿ ಆಗ್ರಹಿಸುತ್ತಿದೆ.
ಇಂಡಿಯಾ ಮೈತ್ರಿಕೂಟದ ಸಭೆಗಳಲಿ ಒಗ್ಗಟ್ಟಿನ ಹೇಳಿಕೆಗಳ ಹೊರತಾಗಿಯೂ ಕಳೆದ ಕೆಲವು ತಿಂಗಳುಗಳಿಂದ ಪಶ್ಚಿಮ ಬಂಗಾಳ ಮತ್ತು ಪಂಜಾಬಿನಲ್ಲಿ ಕಾಂಗ್ರೆಸ್ ಮತ್ತು ಆಡಳಿತ ಪಕ್ಷದ ನಡುವೆ ದಾಳಿ-ಪ್ರತಿದಾಳಿಗಳು ನಿರಂತರವಾಗಿ ಮುಂದುವರಿದಿವೆ. ಪಶ್ಚಿಮ ಬಂಗಾಳದಲ್ಲಿ ಅಧೀರ ರಂಜನ ಚೌಧುರಿ ನೇತೃತ್ವದ ಮತ್ತು ಪಂಜಾಬಿನಲ್ಲಿ ಅಮರಿಂದರ್ ರಾಜಾ ಸಿಂಗ್ ವಾರಿಂಗ್ ನೇತೃತ್ವದ ಕಾಂಗ್ರೆಸ್ ಘಟಕಗಳು ರಾಜ್ಯ ಮಟ್ಟದಲ್ಲಿ ಮೈತ್ರಿಯನ್ನು ವಿರೋಧಿಸಿವೆ ಮತ್ತು ರಾಜ್ಯ ಸರಕಾರಗಳ ವಿರುದ್ಧ ದಾಳಿಯ ಯಾವುದೇ ಅವಕಾಶವನ್ನು ಕಳೆದುಕೊಳ್ಳುತ್ತಿಲ್ಲ.
ಪ್ರಾದೇಶಿಕ ಪಕ್ಷಗಳು, ವಿಶೇಷವಾಗಿ ಇತ್ತೀಚಿನ ವಿಧಾನಸಭಾ ಚುನಾವಣೆಗಳಲ್ಲಿ ಕಾಂಗ್ರೆಸ್ ಗೆ ಹಿನ್ನಡೆಯಾಗಿರುವ ಹಿನ್ನೆಲೆಯಲ್ಲಿ ತಮ್ಮ ಭದ್ರಕೋಟೆಗಳಲ್ಲಿ ತಮ್ಮ ನೆಲೆಯನ್ನು ಬಿಟ್ಟುಕೊಡುವ ಮನಃಸ್ಥಿತಿಯಲ್ಲಿಲ್ಲ.