ಉದ್ಯಮಿಗಳ ಲಾಭಕ್ಕಾಗಿ ಅಗ್ನಿವೀರ್ ಯೋಜನೆ: ರಾಹುಲ್ ಗಾಂಧಿ ಆರೋಪ
Photo : PTI
ಮೊಹಾನಿಯಾ : ರಕ್ಷಣಾ ಬಜೆಟ್ ಅನ್ನು ದೊಡ್ಡ ಉದ್ಯಮಿಗಳ ಲಾಭಕ್ಕಾಗಿ ವಿನಿಯೋಗಿಸುವ ಸಲುವಾಗಿ ನರೇಂದ್ರ ಮೋದಿ ಸರಕಾರ ‘ಅಗ್ನಿವೀರ್’ ಯೋಜನೆಯನ್ನು ಜಾರಿಗೆ ತಂದಿದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಶುಕ್ರವಾರ ಆರೋಪಿಸಿದ್ದಾರೆ.
ಉತ್ತರಪ್ರದೇಶ ಗಡಿಯ ಬಿಹಾರದ ಕೈಮುರ್ ಜಿಲ್ಲೆಯ ಮೊಹಾನಿಯಾದಲ್ಲಿ ‘ಭಾರತ್ ಜೋಡೊ ನ್ಯಾಯಾ ಯಾತ್ರೆ’ಯಲ್ಲಿ ಅವರು ಮಾತನಾಡಿದರು.
ಈ ಭಾಗದಿಂದ ದೊಡ್ಡ ಸಂಖ್ಯೆಯ ಯುವಕರು ಶಸಸ್ತ್ರ ಪಡೆಗಳಿಗೆ ದಾಖಲಾಗುತ್ತಾರೆ. ಎರಡು ವರ್ಷಗಳ ಹಿಂದೆ ಅಗ್ನಿವೀರ್ ಯೋಜನೆಯ ವಿರುದ್ಧ ಬೃಹತ್ ಪ್ರತಿಭಟನೆಗೆ ಈ ಪ್ರದೇಶ ಸಾಕ್ಷಿಯಾಗಿತ್ತು.
‘‘ಸಾಮಾನ್ಯ ಯೋಧನಿಗೆ ದೊರೆಯುವಂತೆ ಅಗ್ನಿವೀರ್ ಯೋಜನೆಯಲ್ಲಿ ಯೋಧನಿಗೆ ವೇತನ ಹಾಗೂ ಪಿಂಚಣಿ ದೊರೆಯುವುದಿಲ್ಲ. ಅಲ್ಲದೆ, ಕ್ಯಾಂಟಿನ್ ಸೌಲಭ್ಯ ಕೂಡ ದೊರೆಯುವುದಿಲ್ಲ’’ ಎಂದು ಅವರು ಹೇಳಿದ್ದಾರೆ.
‘‘ಮೋದಿ ಸರಕಾರ ರಕ್ಷಣಾ ಬಜೆಟ್ ಅನ್ನು ಯೋಧರ ವೇತನ ಹಾಗೂ ಇತರ ಸೌಲಭ್ಯಗಳಿಗೆ ವಿನಿಯೋಗಿಸಲು ಬಯಸುತ್ತಿಲ್ಲ. ಅದು ದೊಡ್ಡ ಉದ್ಯಮಿಗಳ ಪ್ರಯೋಜನಕ್ಕಾಗಿ ಈ ಹಣವನ್ನು ವಿನಿಯೋಗಿಸಲು ಬಯಸುತ್ತಿದೆ’’ ಎಂದು ಅವರು ತಿಳಿಸಿದ್ದಾರೆ.
ಮೂರು ಸೇನಾ ಪಡೆಗಳಿಗೆ ಅಧಿಕಾರಿ ಶ್ರೇಣಿಯ ಕೇಡರ್ ಗೆ ನಾಲ್ಕು ವರ್ಷಗಳಿಗೆ ಅಗ್ನಿವೀರರಾಗಿ ನೇಮಕ ಮಾಡಲು ಕೇಂದ್ರ ಸರಕಾರ 2022 ಜೂನ್ 15ರಂದು ಅಗ್ನಿಪಥ ಯೋಜನೆಯನ್ನು ಜಾರಿಗೆ ತಂದಿದೆ.