ಅಹಮದಾಬಾದ್: ಆಸ್ಪತ್ರೆಯಲ್ಲಿ ಅಗ್ನಿ ಅನಾಹುತ, 125 ರೋಗಿಗಳ ಸ್ಥಳಾಂತರ
ಅಹಮದಾಬಾದ್: ಗುಜರಾತ್ ನ ಅಹಮದಾಬಾದ್ ನಗರದ 10 ಅಂತಸ್ತಿನ ಆಸ್ಪತ್ರೆಯ ನೆಲಮಾಳಿಗೆಯಲ್ಲಿ ರವಿವಾರ ಬೆಂಕಿ ಕಾಣಿಸಿಕೊಂಡಿದ್ದು, ಮುನ್ನೆಚ್ಚರಿಕೆ ಕ್ರಮವಾಗಿ ಸುಮಾರು 125 ರೋಗಿಗಳನ್ನು ಆಸ್ಪತ್ರೆಯಿಂದ ಸ್ಥಳಾಂತರಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇಲ್ಲಿಯವರೆಗೆ ಯಾವುದೇ ಸಾವು ನೋವು ಸಂಭವಿಸಿದ ಬಗ್ಗೆ ವರದಿಯಾಗಿಲ್ಲ ಎಂದು ಸಾಹಿಬಾಗ್ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಎಂ ಡಿ ಚಂಪಾವತ್ ತಿಳಿಸಿದ್ದಾರೆ.
ಆಸ್ಪತ್ರೆಯಲ್ಲಿ ನವೀಕರಣ ಕಾರ್ಯ ನಡೆಯುತ್ತಿರುವುದರಿಂದ ನೆಲಮಾಳಿಗೆಯಲ್ಲಿ ಸಂಗ್ರಹಿಸಲಾಗಿದ್ದ ಹಲವಾರು ವಸ್ತುಗಳಿಗೆ ಬೆಂಕಿ ತಗುಲಿ ಭಾರೀ ಹೊಗೆ ಉಂಟಾಯಿತು ಎಂದು ಅಗ್ನಿಶಾಮಕ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಪ್ರಾಥಮಿಕ ಮಾಹಿತಿಯ ಪ್ರಕಾರ, ನಗರದ ಸಾಹಿಬಾಗ್ ಪ್ರದೇಶದಲ್ಲಿರುವ ರಾಜಸ್ಥಾನ ಆಸ್ಪತ್ರೆಯ ನೆಲಮಾಳಿಗೆಯಲ್ಲಿ ಬೆಳಗಿನ ಜಾವ 4.30 ರ ಸುಮಾರಿಗೆ ಬೆಂಕಿ ಕಾಣಿಸಿಕೊಂಡಿದೆ ಎಂದು ಚಂಪಾವತ್ ತಿಳಿಸಿದ್ದಾರೆ.
"ಅಗ್ನಿಶಾಮಕ ತಂಡಗಳು ಬೆಂಕಿಯನ್ನು ನಿಯಂತ್ರಿಸಲು ಶ್ರಮಿಸುತ್ತಿವೆ. ಬೆಂಕಿ ಹೊತ್ತಿಕೊಂಡ ಆಸ್ಪತ್ರೆಯ ನೆಲಮಾಳಿಗೆಯಿಂದ ಹೊಗೆ ಹೊರಹೊಮ್ಮುತ್ತಿದೆ" ಎಂದು ಅವರು ಹೇಳಿದರು.
ಮುನ್ನೆಚ್ಚರಿಕೆ ಕ್ರಮವಾಗಿ ಸುಮಾರು 125 ರೋಗಿಗಳನ್ನು ವಿವಿಧ ಆಸ್ಪತ್ರೆಗಳಿಗೆ ಸ್ಥಳಾಂತರಿಸಲಾಗಿದೆ ಎಂದು ಪೊಲೀಸ್ ಇನ್ಸ್ಪೆಕ್ಟರ್ ತಿಳಿಸಿದ್ದಾರೆ.
ಆಸ್ಪತ್ರೆಯನ್ನು ಚಾರಿಟಬಲ್ ಟ್ರಸ್ಟ್ ನಡೆಸುತ್ತಿದೆ.