ಭಾರತ ವಿಭಜನೆ ಐತಿಹಾಸಿಕ ಪ್ರಮಾದ, ಅದು ಸಂಭವಿಸಬಾರದಿತ್ತು: ಅಸದುದ್ದೀನ್ ಉವೈಸಿ
Photo : ANI
ಹೈದರಾಬಾದ್: ಭಾರತ ವಿಭಜನೆಯನ್ನು ಐತಿಹಾಸಿಕ ತಪ್ಪು ಎಂದು ಕರೆದಿರುವ ಎಐಎಂಐಎಂ ಮುಖ್ಯಸ್ಥ ಹಾಗೂ ಹೈದರಬಾದ್ ಸಂಸದ ಅಸದುದ್ದೀನ್ ಉವೈಸಿ ಅವರು, ಭಾರತದ ವಿಭಜನೆ ಎಂದಿಗೂ ನಡೆಯಬಾರದಿತ್ತು ಎಂದು ಹೇಳಿದ್ದಾರೆ.
ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಉವೈಸಿ, “ಐತಿಹಾಸಿಕವಾಗಿ, ಇದು ಒಂದೇ ದೇಶವಾಗಿತ್ತು, ಆದರೆ ದುರದೃಷ್ಟವಶಾತ್ ಇದು ವಿಭಜನೆಯಾಗಿದೆ, ಅದು ಸಂಭವಿಸಬಾರದಿತ್ತು” ಎಂದು ಹೇಳಿರುವುದಾಗಿ Timesofindia.com ವರದಿ ಮಾಡಿದೆ.
"ನೀವು ಬಯಸಿದರೆ ಈ ಬಗ್ಗೆ ಚರ್ಚೆಯನ್ನು ಏರ್ಪಡಿಸಿ. ಈ ದೇಶದ ವಿಭಜನೆಗೆ ಯಾರು ಹೊಣೆ ಎಂದು ನಾನು ನಿಮಗೆ ಹೇಳಬಲ್ಲೆ, ಆದರೆ, ಆ ಸಮಯದಲ್ಲಿ ನಡೆದಿರುವ ಐತಿಹಾಸಿಕ ತಪ್ಪಿಗೆ ನಾನು ಒಂದೇ ಸಾಲಿನಲ್ಲಿ ಉತ್ತರವನ್ನು ನೀಡಲು ಸಾಧ್ಯವಿಲ್ಲ,” ಎಂದು ಅವರು ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದರು.
ಸ್ವಾತಂತ್ರ್ಯ ಹೋರಾಟಗಾರ ಮತ್ತು ಭಾರತದ ಮೊದಲ ಶಿಕ್ಷಣ ಸಚಿವ ಮೌಲಾನಾ ಅಬುಲ್ ಕಲಾಂ ಆಝಾದ್ ಅವರ ಪುಸ್ತಕ 'ಇಂಡಿಯಾ ವಿನ್ಸ್ ಫ್ರೀಡಂ' ವನ್ನು ಓದಲು ಸಲಹೆ ನೀಡಿದ ಅವರು, ಅಬುಲ್ ಕಲಾಂ ಆಝಾದರು, ಕಾಂಗ್ರೆಸ್ ನಾಯಕರ ಬಳಿಗೆ ಹೋಗಿ, ಈ ವಿಭಜನೆಯ ಪ್ರಸ್ತಾಪವನ್ನು ಒಪ್ಪಿಕೊಳ್ಳಬೇಡಿ ಎಂದು ಮನವಿ ಮಾಡಿದ್ದರು ಎಂದು ಉವೈಸಿ ಹೇಳಿದ್ದಾರೆ.
“ಈ ದೇಶದ ವಿಭಜನೆ ಆಗಬಾರದಿತ್ತು. ಅದು ತಪ್ಪಾಗಿತ್ತು. ಆ ಸಮಯದಲ್ಲಿ ಅಲ್ಲಿದ್ದ ಎಲ್ಲಾ ನಾಯಕರು, ಅವರೆಲ್ಲರೂ (ವಿಭಜನೆಗೆ) ಕಾರಣರಾಗಿದ್ದರು. ಮೌಲಾನಾ ಅಬುಲ್ ಕಲಾಂ ಆಜಾದ್ ಅವರ ‘ಇಂಡಿಯಾ ವಿನ್ಸ್ ಫ್ರೀಡಂ’ ಪುಸ್ತಕವನ್ನು ನೀವು ಓದಿದರೆ, ಮೌಲಾನಾ ಆಜಾದ್ ಎಲ್ಲಾ ಕಾಂಗ್ರೆಸ್ ನಾಯಕರಲ್ಲಿ ದೇಶವನ್ನು ಇಬ್ಭಾಗ ಮಾಡಬಾರದು ಎಂದು ವಿನಂತಿಸಿದ್ದರು,” ಎಂದು ಉವೈಸಿ ಹೇಳಿದರು.
ಆ ಕಾಲದ ಇಸ್ಲಾಮಿಕ್ ವಿದ್ವಾಂಸರು ಕೂಡ ಎರಡು ರಾಷ್ಟ್ರ ಸಿದ್ಧಾಂತವನ್ನು ವಿರೋಧಿಸಿದ್ದರು ಎಂದು ಅವರು ಹೇಳಿದ್ದಾರೆ.