ಪೂಂಚ್ ನಲ್ಲಿ ವಾಯು ಪಡೆ ಸಿಬ್ಬಂದಿ ಮೇಲೆ ಹೊಂಚುಹಾಕಿ ದಾಳಿ ಮಾಡಿದ್ದ ಉಗ್ರರು
ಶಂಕಿತರ ಮಾಹಿತಿ ನೀಡಿದವರಿಗೆ 20 ಲಕ್ಷ ರೂ. ಬಹುಮಾನ ಘೋಷಣೆ
PC : NDTV
ಹೊಸದಿಲ್ಲಿ : ಕಳೆದ ವಾರ ಪೂಂಚ್ ನಲ್ಲಿ ಭಾರತೀಯ ವಾಯು ಪಡೆ (IAF) ವಾಹನವೊಂದರ ಮೇಲೆ ದಾಳಿ ನಡೆಸಿದ್ದಾರೆನ್ನಲಾದ ಇಬ್ಬರು ಪಾಕಿಸ್ತಾನಿ ಭಯೋತ್ಪಾದಕರ ರೇಖಾಚಿತ್ರಗಳನ್ನು ಜಮ್ಮು ಮತ್ತು ಕಾಶ್ಮೀರದ ಭದ್ರತಾ ಪಡೆಗಳು ಬಿಡುಗಡೆಗೊಳಿಸಿವೆ. ಅದೇ ವೇಳೆ, ಇಬ್ಬರು ಶಂಕಿತರ ಬಂಧನಕ್ಕೆ ನೆರವಾಗುವ ಮಾಹಿತಿಗಳನ್ನು ನೀಡಿದವರಿಗೆ 20 ಲಕ್ಷ ರೂ. ಬಹುಮಾನವನ್ನೂ ಭದ್ರತಾ ಪಡೆಗಳು ಘೋಷಿಸಿವೆ.
ಜಮ್ಮು ಮತ್ತು ಕಾಶ್ಮೀರದ ಪೂಂಚ್ ಜಿಲ್ಲೆಯ ಶಹ್ಸಿತಾರ್ ಸಮೀಪ ಶನಿವಾರ ಸಂಜೆ ಭಾರತೀಯ ವಾಯು ಪಡೆಯ ವಾಹನಗಳ ಮೇಲೆ ಭಯೋತ್ಪಾದಕರು ನಡೆಸಿರುವ ದಾಳಿಯಲ್ಲಿ ಪಡೆಯ ಕಾರ್ಪೊರಲ್ ವಿಕ್ಕಿ ಪಹಾದೆ ಮೃತಪಟ್ಟಿದ್ದಾರೆ ಮತ್ತು ನಾಲ್ವರು ಗಾಯಗೊಂಡಿದ್ದಾರೆ.
ದಾಳಿ ನಡೆದಂದಿನಿಂದ ಸಶಸ್ತ್ರ ಪಡೆಗಳು ಶಹ್ಸಿತಾರ್ ಪ್ರದೇಶದಲ್ಲಿ ಶೋಧ ಕಾರ್ಯಾಚರಣೆಯನ್ನು ನಡೆಸುತ್ತಿವೆ. ಭಯೋತ್ಪಾದಕರನ್ನು ಪತ್ತೆಹಚ್ಚಲು ಗುಂಡುನಿರೋಧಕ ವಾಹನಗಳು ಮತ್ತು ಶ್ವಾನ ದಳಗಳನ್ನು ನಿಯೋಜಿಸಲಾಗಿದೆ.
ಭಯೋತ್ಪಾದಕರ ದಾಳಿಯಲ್ಲಿ ಮೃತಪಟ್ಟಿರುವ ವಿಕ್ಕಿ ಪಹಾದೆ ತನ್ನ ಸಹೋದರಿಯ ಮದುವೆಗಾಗಿ ದೀರ್ಘ ರಜೆಯಲ್ಲಿದ್ದರು. ಸಾಯುವ 15 ದಿನಗಳ ಹಿಂದೆಯಷ್ಟೇ ಅವರು ಕರ್ತವ್ಯಕ್ಕೆ ಮರುಸೇರ್ಪಡೆಯಾಗಿದ್ದರು. ಅವರು ಮಧ್ಯಪ್ರದೇಶದ ಛಿಂದ್ವಾರದ ನೊನಿಯ ಕರ್ಬಲ್ ನಿವಾಸಿಯಾಗಿದ್ದರು.
ಅವರು 2011ರಲ್ಲಿ ಭಾರತೀಯ ವಾಯು ಪಡೆಗೆ ಸೇರ್ಪಡೆಯಾಗಿದ್ದರು. ಅವರು ಪತ್ನಿ ಮತ್ತು ಓರ್ವ ಪುತ್ರನನ್ನು ಅಗಲಿದ್ದಾರೆ.