ಏರ್ ಇಂಡಿಯಾ ವಿಮಾನದಲ್ಲಿ ವೃದ್ಧೆಯೊಂದಿಗೆ ಅಮಾನವೀಯವಾಗಿ ವರ್ತನೆ : ಆರೋಪ
PC : PTI
ಹೊಸದಿಲ್ಲಿ : ಏರ್ ಇಂಡಿಯಾ ವಿಮಾನದಲ್ಲಿ ನನ್ನ ವಯೋವೃದ್ಧ ತಾಯಿಯ ಜೊತೆ ಅಮಾನವೀಯವಾಗಿ ವರ್ತಿಸಲಾಗಿದೆ ಎಂದು ಮಹಿಳೆಯೋರ್ವರು ಆರೋಪಿಸಿದ್ದಾರೆ.
LinkedInನಲ್ಲಿ ಆಂಚಲ್ ಜೈನ್ ಎಂಬವರು ಈ ಕುರಿತು ತಮ್ಮ ಅನುಭವವನ್ನು ಹಂಚಿಕೊಂಡಿದ್ದು, ತನ್ನ ತಾಯಿ ಕೊಚ್ಚಿಯಿಂದ ಬೆಂಗಳೂರಿಗೆ ಪ್ರಯಾಣಿಸುವಾಗ ಲಗೇಜ್ ಗೆ ಹೆಚ್ಚುವರಿ ಶುಲ್ಕಗಳನ್ನು ವಿಧಿಸಲಾಗಿದೆ ಮತ್ತು ತಾಯಿಯ ವಯಸ್ಸು ಮತ್ತು ಅನಾರೋಗ್ಯದ ಬಗ್ಗೆ ಸಹಾನುಭೂತಿಯನ್ನು ಕೂಡ ವ್ಯಕ್ತಪಡಿಸಿಲ್ಲ ಎಂದು ಆರೋಪಿಸಿದ್ದಾರೆ.
ಹಿರಿಯ ನಾಗರಿಕರ ಜೊತೆ ಏರ್ ಇಂಡಿಯಾ ಎಕ್ಸ್ಪ್ರೆಸ್ ವಿಮಾನದಲ್ಲಿ ಅಮಾನವೀಯ ವರ್ತನೆ ಮಾಡಲಾಗಿದೆ ಎಂದು ಅವರು ಹೇಳಿದ್ದಾರೆ. 71ವರ್ಷದ ವಯೋವೃದ್ಧೆ ತಾಯಿ ನಿನ್ನೆ ರಾತ್ರಿ ಕೊಚ್ಚಿಯಿಂದ ಬೆಂಗಳೂರಿಗೆ ಪ್ರಯಾಣಿಸುತ್ತಿದ್ದರು. ಗಾಲಿಕುರ್ಚಿ ಬಳಸಿಕೊಂಡು ನಡೆದಾಡುತ್ತಿದ್ದ ನನ್ನ ತಾಯಿ ಕೈ ಮುರಿತಕ್ಕೊಳಗಾಗಿದ್ದರು. ಅವರಿಗೆ ಗಾಲಿಕುರ್ಚಿಯಲ್ಲಿ ತೆರಳಲು ಅನುಮತಿ ನೀಡಿಲ್ಲ. ನನ್ನ ತಾಯಿಗೆ ತನ್ನ ಪರ್ಸ್ ಮತ್ತು ವಾಕಿಂಗ್ ಸ್ಟಿಕ್ ನ್ನು ಕೊಂಡೊಯ್ಯಲು ಕೂಡ ಅನುಮತಿ ನೀಡಲಾಗಿಲ್ಲ. ವಿಮಾನ ತಪ್ಪಿದರೆ ಅವರೇ ಜವಾಬ್ಧಾರರು ಎಂದು ಹೇಳಲಾಯಿತು. ಇದಲ್ಲದೆ ನನ್ನ ತಾಯಿಗೆ ಲಗೇಜ್ ತೂಕ ಹೆಚ್ಚಿದೆಯೆಂದು 8,200ರೂ ಹೆಚ್ಚುವರಿ ಶುಲ್ಕ ವಿಧಿಸಲಾಗಿದೆ ಎಂದು ಜೈನ್ ಏರ್ ಇಂಡಿಯಾ ಬಗ್ಗೆ ತಮ್ಮ ಪೋಸ್ಟ್ ನಲ್ಲಿ ಹತಾಶೆ ವ್ಯಕ್ತಪಡಿಸಿದ್ದಾರೆ.