ಟೆಲ್ ಅವಿವ್ ಗೆ ಏರ್ ಇಂಡಿಯಾ ಯಾನ ರದ್ದು
ಇಸ್ರೇಲ್ - ಹಮಾಸ್ ಬಿಕ್ಕಟ್ಟು
ಏರ್ ಇಂಡಿಯಾ | Photo: PTI
ಹೊಸದಿಲ್ಲಿ : ಇಸ್ರೇಲ್ ಮೇಲೆ ಹಮಾಸ್ ದಾಳಿಯ ಹಿನ್ನೆಲೆಯಲ್ಲಿ ಏರ್ ಇಂಡಿಯಾ ಶನಿವಾರದಿಂದ ದಿಲ್ಲಿ ಮತ್ತು ಟೆಲ್ ಅವಿವ್ ನಡುವೆ ತನ್ನ ವಿಮಾನ ಹಾರಾಟವನ್ನು ರದ್ದುಗೊಳಿಸಿದೆ. ‘ನಮ್ಮ ಪ್ರಯಾಣಿಕರು ಮತ್ತು ಸಿಬ್ಬಂದಿಗಳ ಸುರಕ್ಷತೆಗಾಗಿ ದಿಲ್ಲಿಯಿಂದ ಇಸ್ರೇಲ್ ರಾಜಧಾನಿ ಟೆಲ್ ಅವಿವ್ ಮತ್ತು ಟೆಲ್ ಅವಿವ್ ನಿಂದ ದಿಲ್ಲಿಗೆ ನಮ್ಮ ವಿಮಾನಗಳ ಹಾರಾಟವನ್ನು ಅ.14ರವರೆಗೆ ರದ್ದುಗೊಳಿಸಲಾಗಿದೆ ’ ಎಂದು ಏರ್ ಇಂಡಿಯಾದ ವಕ್ತಾರರು ತಿಳಿಸಿದರು.
ಏರ್ ಇಂಡಿಯಾ ಟೆಲ್ ಅವಿವ್ ಗೆ ವಾರಕ್ಕೆ ಐದು ಯಾನಗಳನ್ನು ಕಾರ್ಯಾಚರಿಸುತ್ತದೆ.
ಜರ್ಮನ್ ವಿಮಾನಯಾನ ಸಂಸ್ಥೆ ಲುಫ್ತಾನ್ಸಾ ತನ್ನ ಯಾನಗಳ ಸಂಖ್ಯೆಯನ್ನು ಕಡಿತಗೊಳಿಸಿದೆ.
ಟೆಲ್ ಅವಿವ್ ನಲ್ಲಿಯ ಪ್ರಸಕ್ತ ಭದ್ರತಾ ಸ್ಥಿತಿಯನ್ನು ಪರಿಗಣಿಸಿ ಶನಿವಾರ ಅಲ್ಲಿಂದ ಫ್ರಾಂಕ್ಫರ್ಟ್ ಗೆ ಏಕೈಕ ಯಾನವನ್ನು ನಿರ್ವಹಿಸಲಾಗಿದೆ. ಟೆಲ್ ಅವಿವ್ ಗೆ ತೆರಳುವ ಮತ್ತು ಅಲ್ಲಿಂದ ನಿರ್ಗಮಿಸುವ ಇತರ ಎಲ್ಲ ಲುಫ್ತಾನ್ಸಾ ಯಾನಗಳನ್ನು ಶನಿವಾರ ರದ್ದುಗೊಳಿಸಲಾಗಿದೆ ಎಂದು ಕಂಪನಿಯ ವಕ್ತಾರರು ಸುದ್ದಿಸಂಸ್ಥೆಗೆ ತಿಳಿಸಿದರು.
ಟೆಲ್ ಅವಿವ್ ವಿಮಾನ ನಿಲ್ದಾಣವು ಶನಿವಾರ ಕಾರ್ಯಾಚರಣೆಯನ್ನು ಮುಂದುವರಿಸಿದೆ ಮತ್ತು ಕೇವಲ ಶೇ.14ರಷ್ಟು ಯಾನಗಳು ರದ್ದುಗೊಂಡಿವೆ. ವಿಝ್ ಏರ್ ಮತ್ತು ರ್ಯಾನ್ ಏರ್ ಗಳಂತಹ ಕೆಲವು ಯಾನಗಳನ್ನು ಪರ್ಯಾಯ ತಾಣಗಳಿಗೆ ತಿರುಗಿಸಲಾಗಿದೆ ಎಂದು ವಿಮಾನಯಾನಗಳ ಮಾಹಿತಿಗಳನ್ನು ಒದಗಿಸುವ ಫ್ಲೈಟ್ ರ್ಯಾಡಾರ್24 ವೆಬ್ ಸೈಟ್ ನಲ್ಲಿಯ ದತ್ತಾಂಶಗಳು ತೋರಿಸಿವೆ.