ಏರ್ ಇಂಡಿಯಾ ಅಧಿಕಾರಿಗೆ ವಿಮಾನದಲ್ಲಿ ಸಹ ಪ್ರಯಾಣಿಕನಿಂದ ಕಪಾಳಮೋಕ್ಷ!
ಏರ್ ಇಂಡಿಯಾ | Photo : PTI
ಹೊಸದಿಲ್ಲಿ: ಸಿಡ್ನಿಯಿಂದ ದೆಹಲಿಗೆ ಬರುತ್ತಿದ್ದ ವಿಮಾನದಲ್ಲಿ ಏರ್ ಇಂಡಿಯಾದ ಉನ್ನತ ಅಧಿಕಾರಿಯೊಬ್ಬರ ಜತೆ ಜಗಳ ತೆಗೆದ ಸಹ ಪ್ರಯಾಣಿಕನೊಬ್ಬ ಅವರಿಗೆ ಕಪಾಳಮೋಕ್ಷ ಮಾಡಿದ ಘಟನೆ ಬೆಳಕಿಗೆ ಬಂದಿದೆ. ಜುಲೈ 9ರಂದು ಈ ಘಟನೆ ನಡೆದಿದೆ ಎನ್ನಲಾಗಿದ್ದು, ವಾಯುಯಾನದ ವೇಳೆ ಪ್ರಯಾಣಿಕರ ಅಶಿಸ್ತಿನ ವರ್ತನೆಗೆ ಇದು ಹೊಸ ಸೇರ್ಪಡೆ.
ಬ್ಯುಸಿನೆಸ್ ಕ್ಲಾಸ್ ನಲ್ಲಿ ಪ್ರಯಾಣಿಸುತ್ತಿದ್ದ ಏರ್ ಇಂಡಿಯಾ ಅಧಿಕಾರಿ, ತಮ್ಮ ಆಸನ ಸಮರ್ಪಕವಾಗಿಲ್ಲ ಎಂಬ ಕಾರಣಕ್ಕೆ ಎಕಾನಮಿ ಕ್ಲಾಸ್ ಗೆ ಬಂದದ್ದು ಜಗಳಕ್ಕೆ ಮೂಲ ಎನ್ನಲಾಗಿದೆ. ಇವರು ಮೆದುವಾಗಿ ಮಾತನಾಡುವಂತೆ ಸಹ ಪ್ರಯಾಣಿಕನಿಗೆ ಕೇಳಿಕೊಂಡಾಗ ಆರೋಪಿ ತಗಾದೆ ತೆಗೆದ ಎಂದು ಹೇಳಲಾಗಿದೆ.
ಏರ್ ಇಂಡಿಯಾ ಅಧೀಕಾರಿಗೆ ಎಕಾನಮಿ ಕ್ಲಾಸ್ ನಲ್ಲಿ 30-ಸಿ ಆಸನ ನೀಡಲಾಗಿತ್ತು. ಆದರೆ ಅಲ್ಲಿ ಬೇರೆ ಪ್ರಯಾಣಿಕರು ಕುಳಿತಿದ್ದ ಕಾರಣದಿಂದ ಅವರು 25ನೇ ಸಾಲಿನಲ್ಲಿ ಕುಳಿತುಕೊಳ್ಳಲು ಮುಂದಾದರು ಎಂದು ಮೂಲಗಳು ಹೇಳಿವೆ. ಅಧಿಕಾರಿ ಸಹಪ್ರಯಾಣಿಕನಿಗೆ ಮೆದುವಾಗಿ ಮಾತನಾಡುವಂತೆ ಕೇಳಿಕೊಂಡಾಗ ಆರೋಪಿ, ಅಧಿಕಾರಿಯ ಕೆನ್ನೆಗೆ ಬಾರಿಸಿ, ತಲೆಯನ್ನು ತಿರುಚಿ ನಿಂದಿಸಿದ ಎಂದು ಆಪಾದಿಸಲಾಗಿದೆ.
ವಿಮಾನದ ಸಿಬ್ಬಂದಿ, ಪ್ರಯಾಣಿಕನ ಅಶಿಸ್ತಿನ ವರ್ತನೆಯನ್ನು ನಿರ್ಬಂಧಿಸಲು ವಿಫಲರಾದ ಹಿನ್ನೆಲೆಯಲ್ಲಿ ಅಧೀಕಾರಿ ಹಿಂದಿನ ಆಸನಕ್ಕೆ ತೆರಳಿದರು ಎಂದು ಮೂಲಗಳು ವಿವರಿಸಿವೆ. ಈ ಆಶಿಸ್ತಿನ ವರ್ತನೆ ತೋರಿದ ಪ್ರಯಾಣಿಕ ತುರ್ತು ಸಲಕರಣೆಗಳನ್ನು ಬೀಸುತ್ತಾ ಅತ್ತಿಂದಿತ್ತ ಓಡಾಡುತ್ತಿದ್ದ ಎನ್ನಲಾಗಿದೆ.
ಕ್ಯಾಬಿನ್ ಮೇಲ್ವಿಚಾರಕರು ಆಗಮಿಸಿ ಪ್ರಯಾಣಿಕನಿಗೆ ಮೌಖಿಕ ಹಾಗೂ ಲಿಖಿತ ಎಚ್ಚರಿಕೆ ನೀಡಿದರು. ಅಧಿಕಾರಿಯ ಮೇಲೆ ಹಲ್ಲೆ ನಡೆದರೂ, ವಿಮಾನದ ಸಿಬ್ಬಂದಿ ಆರೋಪಿಯನ್ನು ತಡೆಯುವ ಸಾಧನಗಳನ್ನು ಬಳಸಲಿಲ್ಲ ಎಂದು ಹೇಳಲಾಗಿದೆ.
ಜುಲೈ 9ರಂದು ಸಿಡ್ನಿಯಿಂದ ದೆಹಲಿಗೆ ಆಗಮಿಸುತ್ತಿದ್ದ ಎಐ-301 ವಿಮಾನದ ಪ್ರಯಾಣಿಕ, ಮೌಖಿಕ ಹಾಗೂ ಲಿಖಿತ ಎಚ್ಚರಿಕೆ ನೀಡಿದರೂ, ಒಪ್ಪಿಕೊಳ್ಳಲು ಸಾಧ್ಯವಿಲ್ಲದ ರೀತಿಯ ವರ್ತನೆ ತೋರಿದ್ದಾನೆ. ಈ ಮೂಲಕ ಇತರ ಪ್ರಯಾಣಿಕರಿಗೆ ಹಾಗೂ ನಮ್ಮ ಸಿಬ್ಬಂದಿಗೆ ನೋವು ತಂದಿದ್ದಾಣೆ: ಎಂದು ಏರ್ಇಂಡಿಯಾ ಪ್ರಕಟಣೆ ಹೇಳಿದೆ.
ವಿಮಾನ ದೆಹಲಿಯಲ್ಲಿ ಇಳಿದ ಬಳಿಕ ಪ್ರಯಾಣಿಕನನ್ನು ಭದ್ರತಾ ಸಿಬ್ಬಂದಿಗೆ ಹಸ್ತಾಂತರಿಸಲಾಗಿದೆ. ಬಳಿಕ ಆತ ಲಿಖಿತವಾಗಿ ಕ್ಷಮೆ ಯಾಚಿಸಿದ್ದಾಗಿ ಏರ್ಲೈನ್ ಹೇಳಿದೆ.