ಮತ್ತಷ್ಟು ಹಳಸಿದ ಅಜಿತ್ ಪವಾರ್- ಆರೆಸ್ಸೆಸ್ ಸಂಬಂಧ
ಮುಂಬೈ: ಅಜಿತ್ ಪವಾರ್ ನೇತೃತ್ವದ ಎನ್ಸಿಪಿಯನ್ನು ಬಿಜೆಪಿ-ಶಿವಸೇನೆ ಸರ್ಕಾರಕ್ಕೆ ಸೇರಿಸಿಕೊಂಡ ಕ್ರಮ ಅವಿವೇಕದ ಕ್ರಮ ಎಂದು ಆರೆಸ್ಸೆಸ್ ಮುಖವಾಣಿಯಲ್ಲಿ ಪ್ರಕಟವಾದ ಇತ್ತೀಚಿನ ಲೇಖನವೊಂದು ಪ್ರತಿಪಾದಿಸಿದೆ. ಇದು ಬಿಜೆಪಿಯ ತಳಹಂತದ ಕಾರ್ಯಕರ್ತರಿಗೆ ನೋವು ತಂದಿದೆ ಎಂದು ಹೇಳಿದೆ. ಲೋಕಸಭಾ ಚುನಾವಣೆಯ ಪ್ರಚಾರದಲ್ಲಿ ರಾಜಕೀಯ ಸಭ್ಯತೆಯ ಕೊರತೆ ಕಂಡುಬಂದಿತ್ತು ಎಂದು ಆರೆಸ್ಸೆಸ್ ಮುಖ್ಯಸ್ಥ ಮೋಹನ್ ಭಾಗ್ವತ್ ಹೇಳಿಕೆ ನೀಡಿದ ಬೆನ್ನಲ್ಲೇ ಈ ಲೇಖನ ಪ್ರಕಟವಾಗಿದೆ.
ಸ್ಥಳೀಯ ನಾಯಕತ್ವವನ್ನು ಕಡೆಗಣಿಸಿ ತ್ಯಾಗಿಗಳಂತೆ ಸೋಗು ಹಾಕಿದವರಿಗೆ ಹಲವು ಕ್ಷೇತ್ರಗಳಲ್ಲಿ ಟಿಕೆಟ್ ನೀಡಲಾಗಿದೆ ಎಂದು ಅಂಕಣಕಾರ ಮತ್ತು ಆರೆಸ್ಸೆಸ್ ಸದಸ್ಯ ರತನ್ ಶರ್ದಾ ಅವರ ಲೇಖನದಲ್ಲಿ ಪ್ರತಿಪಾದಿಸಲಾಗಿದೆ.
ತಡವಾಗಿ ಆಗಮಿಸಿದವರಿಗೆ ಸ್ಥಾನ ಕಲ್ಪಿಸುವ ಸಲುವಾಗಿ ಉತ್ತಮ ಸಾಧನೆ ಮಾಡಿದ ಸಂಸದರನ್ನು ಕಡೆಗಣಿಸಲಾಗಿದೆ. ಮೋದಿಯವರ ಪ್ರಭಾವಳಿಯ ವಲಯದ ಹೊಳಪನ್ನು ಆಸ್ವಾದಿಸಿದ ಪಕ್ಷ ಬೀದಿಯ ಧ್ವನಿಗಳಿಗೆ ಕಿವಿಕೊಡಲಿಲ್ಲ" ಎಂದು ಟೀಕಿಸಿದೆ.
"ಅನಗತ್ಯ ರಾಜಕಿಯ ಮತ್ತು ತಪ್ಪಿಸಬಹುದಾಗಿದ್ದ ಪರಿವರ್ತನೆಗೆ ಮಹಾರಾಷ್ಟ್ರ ಉತ್ತಮ ಉದಾಹರಣೆ. ಬಿಜೆಪಿ ಹಾಗೂ ಶಿವಸೇನೆ ಬಣ ಬಹುಮತ ಹೊಂದಿದ್ದರೂ, ಅಜಿತ್ ಪವಾರ್ ಬಣವನ್ನು ಸೇರಿಸಿಕೊಳ್ಳಲಾಯಿತು. ಶರದ್ ಪವಾರ್ ಎರಡು ಮೂರು ವರ್ಷಗಳಲ್ಲಿ ಮಬ್ಬಾದ ಬಳಿಕ ಎನ್ಸಿಪಿ ಆಂತರಿಕ ಕಚ್ಚಾಟದಿಂದ ಶಕ್ತಿಗುಂದುತ್ತಿತ್ತು. ಈ ಅವಿವೇಕದ ಹೆಜ್ಜೆಯನ್ನು ಇಟ್ಟಿದ್ದೇಕೆ? ಕಾಂಗ್ರೆಸ್ ಸಿದ್ಧಾಂತದ ವಿರುದ್ಧ ಹಲವು ವರ್ಷ ಹೋರಾಡಿದ ಬಿಜೆಪಿ ಕಾರ್ಯಕರ್ತರನ್ನು ಗೋಳಾಡಿಸಲಾಯಿತು. ಒಂದೇ ಹೊಡೆತದಲ್ಲಿ ಬಿಜೆಪಿ ತನ್ನ ಬ್ರಾಂಡ್ ಮೌಲ್ಯ ಕಳೆದುಕೊಂಡಿತು" ಎಂದು ಬಣ್ಣಿಸಲಾಗಿದೆ.
ಇದಕ್ಕೆ ಎನ್ಸಿಪಿ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದೆ. "ಆರ್ಗನೈಸರ್ ಅರೆಸ್ಸೆಸ್ನ ಅಧಿಕೃತ ಮುಖವಾಣಿಯಲ್ಲ. ಇದು ಆರೆಸ್ಸೆಸ್ ಸಿದ್ಧಾಂತವನ್ನು ಪ್ರತಿಬಿಂಬಿಸುವುದಿಲ್ಲ. ಈ ಲೇಖನಕ್ಕೆ ಬಿಜೆಪಿ ಮುಖಂಡರ ಸಹಮತ ಇಲ್ಲ ಎನ್ನುವುದು ನನ್ನ ಭಾವನೆ. ವೈಫಲ್ಯಕ್ಕೆ ಭಿನ್ನ ಕಾರಣಗಳನ್ನು ಹುಡುಕಲಾಗುತ್ತಿದೆ. ಪರಸ್ಪರ ವಿರುದ್ಧ ಪಕ್ಷಗಳು ದೋಷವನ್ನು ಹಾಗೂ ಆರೋಪಗಳನ್ನು ಕಂಡುಹಿಡಿಯುತ್ತಿವೆ. ರಾಜಕೀಯದಲ್ಲಿ ಆರೋಪಗಳ ಎರಚಾಟ ಸಾಮಾನ್ಯ. ಪ್ರತಿಯೊಂದೂ ಫಲಿತಾಂಶವನ್ನು ಅವಲಂಬಿಸಿರುತ್ತದೆ. ಅರೆಸ್ಸೆಸ್ ಹೇಳಿಕೆಯಲ್ಲಿ ಸತ್ಯ ಇಲ್ಲ ಎನ್ನುವುದು ನನ್ನ ಭಾವನೆ" ಎಂದು ವಕ್ತಾರ ಅನುಮೇಶ್ ಪಾಟೀಲ್ ಹೇಳಿದ್ದಾರೆ.