ಜಾತಿ ಗಣತಿ ಪ್ರಸ್ತಾಪಿಸಿ ರಾಹುಲ್ ಗಾಂಧಿ ವಿರುದ್ಧ ಅಖಿಲೇಶ್ ಯಾದವ್ ವಾಗ್ದಾಳಿ
INDIA ಮೈತ್ರಿಕೂಟದಲ್ಲಿ ಮತ್ತಷ್ಟು ಬಿರುಕು
ಅಖಿಲೇಶ್ ಯಾದವ್ (PTI)
ಸತ್ನಾ (ಮಧ್ಯಪ್ರದೇಶ): ಕಾಂಗ್ರೆಸ್ ನೇತೃತ್ವದ ಸರ್ಕಾರವು ಕೇಂದ್ರದಲ್ಲಿ ಅಧಿಕಾರದಲ್ಲಿದ್ದಾಗಲೇಕೆ ಜಾತಿ ಗಣತಿಯನ್ನು ನಡೆಸಿರಲಿಲ್ಲ ಎಂದು ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಪ್ರಶ್ನಿಸುವ ಮೂಲಕ ವಿರೋಧ ಪಕ್ಷಗಳ ಮೈತ್ರಿಕೂಟವಾದ INDIAದಲ್ಲಿನ ಬಿರುಕು ಮತ್ತಷ್ಟು ಹಿಗ್ಗಿದೆ ಎಂದು ndtv.com ವರದಿ ಮಾಡಿದೆ.
ಮುಂಬರುವ ಸಾರ್ವತ್ರಿಕ ಚುನಾವಣೆಯಲ್ಲಿ ಆಡಳಿತಾರೂಢ ಬಿಜೆಪಿ ಎದುರು ಒಗ್ಗಟ್ಟಿನ ಹೋರಾಟ ನಡೆಸಲು ಅಸ್ತಿತ್ವಕ್ಕೆ ಬಂದಿರುವ ವಿರೋಧ ಪಕ್ಷಗಳ INDIA ಮೈತ್ರಿಕೂಟದಲ್ಲಿನ ಪ್ರಮುಖ ಪಕ್ಷಗಳಾದ ಕಾಂಗ್ರೆಸ್ ಹಾಗೂ ಸಮಾಜವಾದಿ ಪಕ್ಷಗಳ ನಡುವಿನ ಭಿನ್ನಾಭಿಪ್ರಾಯವು ಅಖಿಲೇಶ್ ಯಾದವ್ ಅವರ ಈ ಹೇಳಿಕೆಯಿಂದ ಮತ್ತೆ ಮುನ್ನೆಲೆಗೆ ಬಂದಿದೆ.
ಸುದ್ದಿ ಸಂಸ್ಥೆಯೊಂದಿಗೆ ಮಾತನಾಡಿದ ಅಖಿಲೇಶ್ ಯಾದವ್, ತಪ್ಪು ನೀತಿಗಳ ಕಾರಣಕ್ಕೆ ಈ ಹಿಂದಿನ ಸರ್ಕಾರಗಳು ಜಾತಿ ಗಣತಿ ಕುರಿತು ಕ್ರಮ ಕೈಗೊಂಡಿರಲಿಲ್ಲ ಎಂದು ಆರೋಪಿಸಿದರು. ಇದೇ ವೇಳೆ ಜಾತಿ ಗಣತಿ ಆಗ್ರಹದ ಕುರಿತು ರಾಹುಲ್ ಗಾಂಧಿ ನೀಡಿದ್ದ ‘ಕ್ಷ-ಕಿರಣ’ ಹೇಳಿಕೆಯನ್ನೂ ಅವರು ವ್ಯಂಗ್ಯವಾಡಿದರು.
ಇದಕ್ಕೂ ಮುನ್ನ, ನಿನ್ನೆ ಜಾತಿ ಗಣತಿಗಾಗಿನ ತಮ್ಮ ಆಗ್ರಹವನ್ನು ಪುನರುಚ್ಚರಿಸಿದ್ದ ರಾಹುಲ್ ಗಾಂಧಿ, ಈ ವಿಧಾನವು ದೇಶದಲ್ಲಿನ ವಿವಿಧ ಸಮುದಾಯಗಳ ಕುರಿತು ವಿವರ ನೀಡುವ ‘ಕ್ಷ-ಕಿರಣ’ ಕ್ರಮವಾಗಿದೆ ಎಂದು ಪ್ರತಿಪಾದಿಸಿದ್ದರು. ಈ ಕುರಿತು ಅಖಿಲೇಶ್ ಯಾದವ್ ಅವರನ್ನು ಸುದ್ದಿಗಾರರು ಪ್ರಶ್ನಿಸಿದಾಗ, ಜಾತಿ ಗಣತಿಗಾಗಿನ ಕಾಂಗ್ರೆಸ್ ಆಗ್ರಹ ಒಂದು ಪವಾಡವಾಗಿದೆ ಎಂದು ವ್ಯಂಗ್ಯವಾಡಿದರು.
“ಕ್ಷ-ಕಿರಣ ಆ ಕಾಲಘಟ್ಟದ ಅಗತ್ಯವಾಗಿತ್ತು. ಈಗ ನಮ್ಮ ಬಳಿ ಎಂಆರ್ಐ ಹಾಗೂ ಸಿಟಿ ಸ್ಕ್ಯಾನ್ ತಂತ್ರಜ್ಞಾನಗಳು ಲಭ್ಯವಿವೆ. ಈಗ ಈ ಕಾಯಿಲೆ ವ್ಯಾಪಿಸಿದೆ. ಈ ಸಮಸ್ಯೆಯನ್ನು ಹಿಂದೆಯೇ ಬಗೆಹರಿಸಿದ್ದರೆ, ಇಂದು ಸಮಾಜದಲ್ಲಿ ಇಂತಹ ಬಿರುಕು ಉದ್ಭವವಾಗುತ್ತಿರಲಿಲ್ಲ” ಎಂದು ರಾಹುಲ್ ಗಾಂಧಿಯನ್ನುದ್ದೇಶಿಸಿ ಅವರು ವ್ಯಂಗ್ಯವಾಡಿದರು.
“ಕಾಂಗ್ರೆಸ್ ಪಕ್ಷವು ಜಾತಿ ಗಣತಿ ಕುರಿತು ಮಾತನಾಡುತ್ತಿರುವುದೇ ಬಹು ದೊಡ್ಡ ಪವಾಡವಾಗಿದೆ. ಯಾರೀಗ ಕ್ಷ-ಕಿರಣದ ಕುರಿತು ಮಾತನಾಡುತ್ತಿದ್ದಾರೆ ಅವರೇ ಸ್ವಾತಂತ್ರ್ಯಾನಂತರ ಜಾತಿ ಗಣತಿಯನ್ನು ಸ್ಥಗಿತಗೊಳಿಸಿದ್ದು” ಎಂದು ಅವರು ಆರೋಪಿಸಿದರು.
ಭಾರತವು ಸ್ವತಂತ್ರಗೊಂಡ ನಂತರ ಜಾತಿ ಗಣತಿ ನಡೆಸದಿದ್ದಕ್ಕೆ ಅಖಿಲೇಶ್ ಯಾದವ್ ಕಾಂಗ್ರೆಸ್ ಪಕ್ಷವನ್ನು ತರಾಟೆಗೆ ತೆಗೆದುಕೊಂಡರು. “ಈ ಕುರಿತು ನೇತಾಜಿ (ಮುಲಾಯಂ ಸಿಂಗ್ ಯಾದವ್), ಶರದ್ ಯಾದವ್, ಲಾಲೂ ಪ್ರಸಾದ್ ಯಾದವ್ ಹಾಗೂ ದಕ್ಷಿಣ ಭಾರತದ ಪಕ್ಷಗಳು ಲೋಕಸಭೆಯಲ್ಲಿ ಆಗ್ರಹಿಸಿದಾಗ, ಕಾಂಗ್ರೆಸ್ ಆ ಆಗ್ರಹವನ್ನು ತಳ್ಳಿ ಹಾಕಿತ್ತು” ಎಂದೂ ಅವರು ದೂರಿದರು.
“ಅವರಿಗೇಕೆ ಈಗ ಜಾತಿ ಗಣತಿಯ ಅಗತ್ಯವಿದೆ? ಯಾಕೆಂದರೆ, ತಮ್ಮ ಸಾಂಪ್ರದಾಯಿಕ ಮತ ಬ್ಯಾಂಕ್ ಈಗ ತಮ್ಮೊಂದಿಗಿಲ್ಲ ಎಂಬ ಸಂಗತಿ ಅವರಿಗೆ ತಿಳಿದಿದೆ. ಆದರೆ, ಸ್ವಾತಂತ್ರ್ಯಾನಂತರ ಕಾಂಗ್ರೆಸ್ ತಮ್ಮನ್ನು ವಂಚಿಸಿದೆ ಎಂಬ ಸಂಗತಿ ಹಿಂದುಳಿದ ವರ್ಗಗಳು, ದಲಿತರು ಹಾಗೂ ಆದಿವಾಸಿಗಳಿಗೆ ತಿಳಿದಿದೆ” ಎಂದು ಅವರು ಹೇಳಿದ್ದಾರೆ.
ಜಾತಿ ಗಣತಿಯ ಬಗ್ಗೆ ವಿರೋಧ ಪಕ್ಷಗಳು ಹೆಚ್ಚು ಹೆಚ್ಚು ಪ್ರಸ್ತಾಪಿಸುತ್ತಿರುವುದರಿಂದ, ಮುಂದಿನ ವರ್ಷದ ಸಾರ್ವತ್ರಿಕ ಚುನಾವಣೆಗೂ ಮುನ್ನ ಜಾತಿ ಗಣತಿಯು ಪ್ರಮುಖ ರಾಜಕೀಯ ವಿಷಯವಾಗಿ ಬದಲಾಗಿದೆ. ಮೊದಲಿಗೆ ಜಾತಿ ಗಣತಿಯನ್ನು ವಿರೋಧಿಸಿದ್ದ ಬಿಜೆಪಿ ಕೂಡಾ ಈ ಕುರಿತ ತನ್ನ ನಿಲುವನ್ನು ಸಡಿಲಗೊಳಿಸುವ ಸುಳಿವು ನೀಡಿದೆ.