ರೈಲು ಪೈಲಟ್ ಸಮಯಪ್ರಜ್ಞೆಯಿಂದ ತಪ್ಪಿದ ಭಾರೀ ದುರಂತ
Photo: timesofindia.indiatimes.com
ಜೈಪುರ: ರೈಲು ಹಳಿಗಳ ಮೇಲೆ ಕಲ್ಲು ಹಾಗೂ ಕಬ್ಬಿಣದ ಸರಳುಗಳು ಇದ್ದುದನ್ನು ಗಮನಿಸಿ ಸಮಯಪ್ರಜ್ಞೆ ಮೆರೆದ ಉದಯಪುರ- ಜೈಪುರ ವಂದೇಭಾರತ್ ರೈಲನ್ನು ಪೈಲಟ್ ದಿಢೀರನೇ ನಿಲ್ಲಿಸಿದ ಪರಿಣಾಮವಾಗಿ ಸಂಭಾವ್ಯ ಭಾರಿ ದುರಂತ ತಪ್ಪಿದೆ, ಸೋಮವಾರ ಬೆಳಿಗ್ಗೆ ಗಂಗರಾರ್ ಮತ್ತು ಸೋನಿಯಾನಾ ಸೆಕ್ಷನ್ನಲ್ಲಿ ಈ ಘಟನೆ ನಡೆದಿದೆ ಎಂದು ವಾಯವ್ಯ ರೈಲ್ವೆ ಪ್ರಕಟಿಸಿದೆ.
"ಸುಮಾರು 9.55ರ ಸುಮಾರಿಗೆ ಚಿತ್ತೋರ್ಗಢ ದಾಟಿದ ಬಳಿಕ, ಹಳಿಗಳನ್ನು ಸಂಪರ್ಕಿಸುವ ಸಲುವಾಗಿ ಬಳಸುವ ಕಲ್ಲುಗಳು, ಕಬ್ಬಿಣದ ಉಂಡೆಗಳು ಮತ್ತು ಕ್ಲಿಪ್ಗಳು ಹಳಿಯ ಮೇಲೆ ಇರುವುದನ್ನು ಲೋಕೊ ಪೈಲಟ್ ಗಮನಿಸಿ, ತಕ್ಷಣ ದಿಢೀರನೇ ಬ್ರೇಕ್ ಹಾಕಿದರು. ಈ ಕಾರಣದಿಂದ ಯಾವುದೇ ಹಾನಿಯಾಗಲಿಲ್ಲ ಹಾಗೂ ಇವುಗಳನ್ನು ಹಳಿಯಿಂದ ತೆರವುಗೊಳಿಸಿದ ಬಳಿಕ ರೈಲು ಪ್ರಯಾಣ ಮುಂದುವರಿಸಿತು. ಈ ಘಟನೆ ಬಗ್ಗೆ ರೈಲ್ವೆ ಸುರಕ್ಷತಾ ಪಡೆ ತನಿಖೆ ನಡೆಸುತ್ತಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಹಿರಿಯ ಪೊಲೀಸ್ ಅಧಿಕಾರಿಗಳು ಮತ್ತು ರೈಲ್ವೆ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಲಾಗಿದೆ. ಕಳೆದ ತಿಂಗಳು ಪ್ರಧಾನಿ ನರೇಂದ್ರ ಮೋದಿ, ಉದಯಪುರ- ಜೈಪುರ ನಡುವೆ ಈ ಸೆಮಿ ಹೈಸ್ಪೀಡ್ ರೈಲನ್ನು ಉದ್ಘಾಟಿಸಿದ್ದರು.
ದೇಶದಲ್ಲಿ ವಂದೇಭಾರತ್ ರೈಲನ್ನು ಗುರಿ ಮಾಡುವ ಹಲವು ಘಟನೆಗಳು ವರದಿಯಾಗುತ್ತಿವೆ. ಕಳೆದ ಮೇ ತಿಂಗಳಲ್ಲಿ ವಾಯವ್ಯ ರೈಲ್ವೆ ವಿಭಾಗದ ವ್ಯಾಪ್ತಿಯಲ್ಲಿ ಅಜ್ಮೀರ್-ದೆಹಲಿ ಕಂಟೋನ್ಮೆಂಟ್ ವಂದೇ ಭಾರತ್ ರೈಲಿಗೆ ಕಲ್ಲು ತೂರಾಟ ನಡೆಸಿದ 13 ಘಟನೆಗಳು ವರದಿಯಾಗಿದ್ದವು.