ರಾಮ ಮಂದಿರ ಸ್ವಚ್ಛತಾ ಸಿಬ್ಬಂದಿ ಮೇಲೆ ನಿರಂತರ ಅತ್ಯಾಚಾರ ಆರೋಪ: ಎಂಟು ಮಂದಿ ಬಂಧನ
ಅಯೋಧ್ಯೆ: ರಾಮಜನ್ಮಭೂಮಿ ದೇವಸ್ಥಾನದ ಸ್ವಚ್ಛತಾ ಸಿಬ್ಬಂದಿ ಹಾಗೂ ಕಾಲೇಜು ವಿದ್ಯಾರ್ಥಿಯೊಬ್ಬಳ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿದ ಆರೋಪದಲ್ಲಿ ಎಂಟು ಮಂದಿಯನ್ನು ಶುಕ್ರವಾರ ಬಂಧಿಸಲಾಗಿದೆ.
ಆರೋಪಿಗಳಾದ ವಿನಯ್ ಕುಮಾರ್ ಹಾಗೂ ಷರೀಕ್ ಎಂಬುವವರನ್ನು ಸಂತ್ರಸ್ತೆ ಗುರುತಿಸಿದ್ದಾರೆ. ಅಯೋಧ್ಯೆ ಪಟ್ಟಣದ ಕಾಲೇಜಿನಲ್ಲಿ ತೃತೀಯ ಬಿಎ ವಿದ್ಯಾರ್ಥಿನಿ ಎಂದು ಈಕೆ ಗುರುತಿಸಿಕೊಂಡಿದ್ದು, ರಾಮಜನ್ಮಭೂಮಿ ದೇವಾಲಯದಲ್ಲಿ ಸ್ವಚ್ಛತಾ ಸಿಬ್ಬಂದಿಯಾಗಿ ಕಾರ್ಯ ನಿರ್ವಹಿಸುತ್ತಿರುವುದಾಗಿ ಹೇಳಿದ್ದಾರೆ.
"ಅಯೋಧ್ಯೆ ಜಿಲ್ಲೆಯ ಸಹದತ್ ಗಂಜ್ ನಿವಾಸಿ ವಂಶ್ ಚೌಧರಿ ಎಂಬಾತ, ವಿಹಾರಕ್ಕೆ ಜಿಲ್ಲೆಯ ವಿವಿಧೆಡೆಗೆ ಕರೆದೊಯ್ಯುವುದಾಗಿ ಭರವಸೆ ನೀಡಿದ್ದ. ಆಗಸ್ಟ್ 16ರಂದು ಅತಿಥಿಗೃಹವೊಂದಕ್ಕೆ ಕರೆದೊಯ್ದು ಕೂಡಿಹಾಕಿದ. ಇತರ ಇಬ್ಬರು ಸ್ನೇಹಿತರ ಜತೆ ಸೇರಿ ಅತ್ಯಾಚಾರ ಎಸಗಿದ್ದಲ್ಲದೇ, ಇತರ ಮೂವರು ಸ್ನೇಹಿತರನ್ನು ಆಹ್ವಾನಿಸಿ ಆಘಾತ ಉಂಟುಮಾಡಿದ್ದಾನೆ. ಅತಿಥಿಗೃಹದಿಂದ ಬನವೀರಪುರ ಬ್ಯಾರೇಜ್ ಗೆ ಕರೆದೊಯ್ದು ಮತ್ತೆ ಕಿರುಕುಳ ನೀಡಿದರು. ಆಗಸ್ಟ್ 18ರಂದು ಬಿಡುಗಡೆ ಮಾಡಿದರು" ಎಂದು ದೂರಿನಲ್ಲಿ ವಿವರಿಸಲಾಗಿದೆ.
"ಈ ವಿಷಯವನ್ನು ಪೊಲೀಸರಿಗೆ ತಿಳಿಸಿದರೆ ನನ್ನನ್ನು ಹಾಗೂ ಕುಟುಂಬದವರನ್ನು ಹತ್ಯೆ ಮಾಡುವುದಾಗಿ ಬೆದರಿಕೆ ಹಾಕಿದ್ದರು. ಆಗಸ್ಟ್ 25ರಂದು ನಾನು ದೇವಾಲಯಕ್ಕೆ ಹೋಗುತ್ತಿದ್ದಾಗ ಮತ್ತೆ ಅಪಹರಿಸಿದರು. ಉದಿತ್ ಕುಮಾರ್, ಸತ್ರಮ್ ಚೌಧರಿ ಮತ್ತು ಇಬ್ಬರು ಅಪರಿಚಿತರು ಆತನ ಜತೆಗಿದ್ದರು. ಕಾರಿನಲ್ಲೇ ಅತ್ಯಾಚಾರ ಎಸಗುವ ಪ್ರಯತ್ನ ಮಾಡಿದರು. ಆದರೆ ಕಾರು ವಿಭಜಕ್ಕೆ ಢಿಕ್ಕಿ ಹೊಡೆಯಿತು. ಹಾಗಾಗಿ ಅವರ ಹಿಡಿತದಿಂದ ತಪ್ಪಿಸಿಕೊಳ್ಳಲು ಸಾಧ್ಯವಾಯಿತು" ಎಂದಿದ್ದಾರೆ.
ಅಗಸ್ಟ್ 26ರಂದು ದೂರು ನೀಡಲು ಠಾಣೆಗೆ ಹೋದಾಗ ದೂರು ಸ್ವೀಕರಿಸಿಲ್ಲ ಎಂದು ಸಂತ್ರಸ್ತೆ ತಿಳಿಸಿದ್ದಾರೆ.
ಸೆಪ್ಟೆಂಬರ್ 2ರಂದು ಪ್ರಕರಣ ದಾಖಲಿಸಿ ವಿಚಾರಣೆ ನಡೆಸಿ ಎಲ್ಲ ಎಂಟು ಮಂದಿ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಠಾಣಾಧಿಕಾರಿ ಅಮರೇಂದ್ರ ಸಿಂಗ್ ಸ್ಪಷ್ಟಪಡಿಸಿದ್ದಾರೆ.