ಅತಿಕ್ರಮಣ ಆರೋಪ | ಉತ್ತರ ಪ್ರದೇಶದ ಹಟಾದಲ್ಲಿ ಮತ್ತೊಂದು ಮಸೀದಿಯ ಸಮೀಕ್ಷೆ
PC : PTI
ಲಕ್ನೊ : ಉತ್ತರ ಪ್ರದೇಶದ ಕುಶಿನಗರ ಜಿಲ್ಲೆಯ ಹಟಾ ಪ್ರದೇಶದ ಮದ್ನಿ ಮಸೀದಿಯನ್ನು ಸರ್ಕಾರಿ ಭೂಮಿಯನ್ನು ಒತ್ತುವರಿ ಮಾಡಿ ನಿರ್ಮಿಸಲಾಗಿದೆ ಎಂದು ಸಂಘ ಪರಿವಾರದ ಸಂಘಟನೆಗಳು ದೂರು ನೀಡಿದ ನಂತರ ಅಧಿಕಾರಿಗಳು ಸಮೀಕ್ಷೆ ನಡೆಸಿದ್ದಾರೆ ಎಂದು deccanherald.com ವರದಿ ಮಾಡಿದೆ.
ಭದ್ರತಾ ಸಿಬ್ಬಂದಿ ಮತ್ತು ಜಿಲ್ಲೆಯ ಹಿರಿಯ ಅಧಿಕಾರಿಗಳ ಸಮ್ಮುಖದಲ್ಲಿ ಸಮೀಕ್ಷೆ ನಡೆಸಲಾಗಿದೆ ಎಂದು ತಿಳಿದು ಬಂದಿದೆ.
ಕಂದಾಯ ಇಲಾಖೆಯ ತಂಡವನ್ನೂ ಒಳಗೊಂಡ ಅಧಿಕಾರಿಗಳು ಮಸೀದಿ ಇರುವ ಜಮೀನಿನ ಅಳತೆ ನಡೆಸಿದರು. ಸಮೀಕ್ಷೆಯ ಫಲಿತಾಂಶಗಳನ್ನು ಇನ್ನೂ ಬಹಿರಂಗಪಡಿಸಲಾಗಿಲ್ಲ.
ಸರಕಾರಿ ಭೂಮಿ ಒತ್ತುವರಿ ದೂರು ಬಂದ ಹಿನ್ನೆಲೆಯಲ್ಲಿ ಸರ್ವೆ ನಡೆಸಲಾಗಿದೆ ಎಂದು ಉಪವಿಭಾಗಾಧಿಕಾರಿ ಪ್ರಭಾಕರ ಸಿಂಗ್ ತಿಳಿಸಿದ್ದಾರೆ. ಯಾವುದೇ ಮುಂದಿನ ಕ್ರಮವು ಸಮೀಕ್ಷೆಯ ಫಲಿತಾಂಶದ ಮೇಲೆ ನಿರ್ಧರಿತವಾಗಿದೆ ಎಂದು ಅವರು ಹೇಳಿದರು.
ಸಂಘಪರಿವಾರದ ಕಾರ್ಯಕರ್ತ ರಾಮ್ ಬಚನ್ ಸಿಂಗ್ ಅವರು ಸರ್ಕಾರಿ ಭೂಮಿಯನ್ನು ಒತ್ತುವರಿ ಮಾಡಿ ಮದ್ನಿ ಮಸೀದಿಯನ್ನು ನಿರ್ಮಿಸಲಾಗಿದೆ ಎಂದು ಮುಖ್ಯಮಂತ್ರಿಗಳ ಪೋರ್ಟಲ್ನಲ್ಲಿ ದೂರು ನೀಡಿದ್ದರು. ಅದರ ಸಮೀಕ್ಷೆಗೂ ಒತ್ತಾಯಿಸಿದ್ದರು ಎನ್ನಲಾಗಿದೆ.
ಮಸೀದಿಯನ್ನು ನಿರ್ಮಿಸುವ ಉದ್ದೇಶಕ್ಕಾಗಿ ಮುಸ್ಲಿಂ ಸಮುದಾಯವು ಸುಮಾರು 15 ವರ್ಷಗಳ ಹಿಂದೆ ಭೂಮಿಯನ್ನು ಖರೀದಿಸಿದೆ ಎಂದು ಮಸೀದಿಯ ಉಸ್ತುವಾರಿ ಹೇಳಿದರು. ಯಾವುದೇ ಅತಿಕ್ರಮಣ ನಡೆದಿಲ್ಲ ಮತ್ತು ಮಸೀದಿ ಖಾಸಗಿ ಭೂಮಿಯಲ್ಲಿದೆ ಎಂದು ಅವರು ಪ್ರತಿಪಾದಿಸಿದರು.
ಕಳೆದ ಹತ್ತು ವರ್ಷಗಳಿಂದ ಈ ಮಸೀದಿ ಇದ್ದು, ಮುಸ್ಲಿಮರು ನಿತ್ಯವೂ ಅಲ್ಲಿ ಪ್ರಾರ್ಥನೆ ಸಲ್ಲಿಸುತ್ತಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕೆಲವು ದಿನಗಳ ಹಿಂದೆ ಯುಪಿಯ ಸಂಭಾಲ್ ಪಟ್ಟಣದ ಪ್ರಸಿದ್ಧ ಮಸೀದಿಯೊಂದರ ಸಮೀಕ್ಷೆಯ ಸಮಯದಲ್ಲಿ ನೂರಾರು ಮುಸ್ಲಿಮರು ಬೀದಿಗಿಳಿದು ಸಮೀಕ್ಷೆಯ ವಿರುದ್ಧ ಪ್ರತಿಭಟನೆ ನಡೆಸಿದ್ದರು. ಈ ವೇಳೆ ವಾಹನಗಳಿಗೆ ಬೆಂಕಿ ಹಚ್ಚುವುದರ ಜೊತೆಗೆ ಭಾರೀ ಕಲ್ಲು ತೂರಾಟದಲ್ಲಿ ನಂತರ ನಾಲ್ಕು ಜನರು ಸಾವನ್ನಪ್ಪಿ ಇತರರು ಗಾಯಗೊಂಡಿದ್ದರು.