ಗಾಂಜಾ ಜಾಲದಲ್ಲಿ ಪೊಲೀಸ್ ಅಧಿಕಾರಿಗಳು ಭಾಗಿಯಾಗಿದ್ದಾರೆಂದು ಆರೋಪಿಸಿ ಠಾಣೆಗೆ ಬೆಂಕಿ ಹಚ್ಚಿದ ಸ್ಥಳೀಯರು
Photo: PTI
ಫುಲ್ಬಾನಿ (ಒಡಿಶಾ): ತಮ್ಮ ಪ್ರದೇಶದಲ್ಲಿನ ಗಾಂಜಾ ಜಾಲದಲ್ಲಿ ಪೊಲೀಸ್ ಅಧಿಕಾರಿಗಳು ಭಾಗಿಯಾಗಿದ್ದಾರೆ ಎಂದು ಆರೋಪಿಸಿ ಕುಪಿತ ಗುಂಪೊಂದು ಪೊಲೀಸ್ ಠಾಣೆಯನ್ನು ಧ್ವಂಸಗೊಳಿಸಿ, ಅದಕ್ಕೆ ಬೆಂಕಿ ಹಚ್ಚಿರುವ ಘಟನೆ ಶನಿವಾರ ಫುಲ್ಬಾನಿ ಜಿಲ್ಲೆಯಲ್ಲಿ ನಡೆದಿದೆ ಎಂದು indianexpress.com ವರದಿ ಮಾಡಿದೆ.
ಈ ಘಟನೆಯ ನಂತರ, ಹಲವಾರು ದೂರುಗಳನ್ನು ನೀಡಿದರೂ ಫಿರಿಂಗಿಯಾ ಉಸ್ತುವಾರಿ ಇನ್ಸ್ಪೆಕ್ಟರ್ ತಪನ್ ಕುಮಾರ್ ನಹಾಕ್ ಹಾಗೂ ಅವರ ಇಬ್ಬರು ಸಹಾಯಕರು ನಿಷ್ಕ್ರಿಯತೆ ಪ್ರದರ್ಶಿಸಿದ್ದಾರೆ ಎಂದು ಆರೋಪಿಸಿ ಫುಲ್ಬಾನಿ-ಬಾಲಿಗುಡ ಮಾರ್ಗದಲ್ಲಿ ಜನರಿಂದ ರಸ್ತೆ ತಡೆಯೂ ನಡೆಯಿತು.
ಸ್ಥಳದಿಂದ ತೆರಳುವಂತೆ ಜನರಿಗೆ ಸೂಚಿಸಿದಾಗ, ಆ ಜನರ ಗುಂಪು ಪೊಲೀಸರ ವಿರುದ್ಧ ಪ್ರತಿಭಟಿಸಿತು. ಈ ಪ್ರತಿಭಟನೆಯಲ್ಲಿ ಉಪ ವಲಯ ಪೊಲೀಸ್ ಅಧಿಕಾರಿಯ ತಲೆಗೆ ಪೆಟ್ಟಾಗಿದೆ. ಈ ಘಟನೆಯಲ್ಲಿ ಹಲವಾರು ಪೊಲೀಸ್ ಸಿಬ್ಬಂದಿಗಳೂ ಗಾಯಗೊಂಡಿದ್ದು, ಅವರನ್ನೆಲ್ಲ ಆಸ್ಪತ್ರೆಗೆ ದಾಖಲಿಸಲಾಗಿದೆ.
ಪ್ರತಿಭಟನಾಕಾರರ ಪ್ರಕಾರ, ಗುರುವಾರ ಕಳ್ಳಸಾಗಣೆಗಾರರಿಗೆ ಮಾದಕ ದ್ರವ್ಯ ಗಾಂಜಾವನ್ನು ಮಾರಾಟ ಮಾಡಲು ಪೊಲೀಸ್ ವ್ಯಾನ್ ಒಂದು ಗಾಂಜಾದೊಂದಿಗೆ ಬುದ್ಧಕುಂಭವನ್ನು ಪ್ರವೇಶಿಸಿದಾಗ ಗ್ರಾಮಸ್ಥರ ಗುಂಪೊಂದು ಪೊಲೀಸ್ ವ್ಯಾನ್ ಅನ್ನು ವಶಪಡಿಸಿಕೊಂಡಿದೆ. ಗ್ರಾಮಸ್ಥರು ಈ ವ್ಯಾನ್ನ ದೃಶ್ಯವನ್ನು ವಿಡಿಯೊ ಚಿತ್ರೀಕರಿಸಿಕೊಂಡು, ಉಸ್ತುವಾರಿ ಇನ್ಸ್ಪೆಕ್ಟರ್ ಹಾಗೂ ಅವರ ಸಹಾಯಕರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಆ ವಿಡಿಯೊ ದೃಶ್ಯಗಳನ್ನು ಮೇಲಧಿಕಾರಿಗಳಿಗೆ ರವಾನಿಸಿದ್ದಾರೆ. ಆದರೆ, ಜಿಲ್ಲಾ ಪೊಲೀಸ್ ಪ್ರಾಧಿಕಾರಗಳು ಈ ಕುರಿತು ಪ್ರದರ್ಶಿಸಿದ ನಿಷ್ಕ್ರಿಯತೆಯನ್ನು ವಿರೋಧಿಸಿ ಶನಿವಾರ ಗ್ರಾಮಸ್ಥರು ಪ್ರತಿಭಟನೆ ನಡೆಸಿದರು.
ಸುದ್ದಿ ತಿಳಿಯುತ್ತಿದ್ದಂತೆಯೇ ಕಂಧಮಲ್ ಪೊಲೀಸ್ ವರಿಷ್ಠಾಧಿಕಾರಿ ಸುವೇಂದು ಕುಮಾರ್ ಪಾತ್ರರೊಂದಿಗೆ ಸ್ಥಳಕ್ಕೆ ಧಾವಿಸಿದ ದಕ್ಷಿಣ ವಲಯದ ಪೊಲೀಸ್ ಮಹಾ ನಿರೀಕ್ಷಕ ಸತ್ಯಬ್ರತ ಭೋಯ್, ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡಲು ಸಾಕಷ್ಟು ಪೊಲೀಸ್ ಪಡೆಯನ್ನು ನಿಯೋಜಿಸಲಾಗಿದೆ ಎಂದು ತಿಳಿಸಿದ್ದಾರೆ.
"ಯಾರಾದರೂ ಪೊಲೀಸ್ ಸಿಬ್ಬಂದಿಗಳು ತಪ್ಪಿತಸ್ಥರಾಗಿದ್ದರೆ, ಕಾನೂನು ಪ್ರಕಾರ ಅವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ನಾವು ಗ್ರಾಮಸ್ಥರಿಗೆ ಭರವಸೆ ನೀಡಿದ್ದೇವೆ. ಆದರೆ, ಈ ಧ್ವಂಸದ ಹಿಂದೆ ಮಾದಕ ದ್ರವ್ಯ ವಶಪಡಿಸಿಕೊಂಡಿದ್ದಕ್ಕೆ ಪ್ರತೀಕಾರವಾಗಿ ಗಾಂಜಾ ಮಾಫಿಯಾಗಳ ಪಾತ್ರವಿರಬಹುದು ಎಂಬ ಶಂಕೆಯಿದೆ" ಎಂದು ಅವರು The Indian Express ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ.
ಪೊಲೀಸ್ ಠಾಣೆಯ ಧ್ವಂಸ ಹಾಗೂ ಪೊಲೀಸ್ ಸಿಬ್ಬಂದಿಗಳ ಮೇಲೆ ನಡೆದ ಹಲ್ಲೆಯಲ್ಲಿ ಭಾಗಿಯಾಗಿರುವ ಗ್ರಾಮಸ್ಥರ ವಿರುದ್ಧವೂ ಕ್ರಮ ಕೈಗೊಳ್ಳಲಾಗುವುದು ಎಂದೂ ಅವರು ಎಚ್ಚರಿಸಿದ್ದಾರೆ.