ಬಿಜೆಪಿ ಜತೆಗಿನ ಮೈತ್ರಿ ಚುನಾವಣೆಗಷ್ಟೇ ಸೀಮಿತ : ಎಐಎಡಿಎಂಕೆ ಸ್ಪಷ್ಟನೆ

pc : ndtv
ಚೆನ್ನೈ : ಬಿಜೆಪಿ ಜತೆ ಎಐಎಡಿಎಂಕೆ ಮಾಡಿಕೊಂಡಿರುವ ಒಪ್ಪಂದ ಕೇವಲ 2026ರ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಮಾಡಿಕೊಂಡ ಚುನಾವಣಾ ಒಪ್ಪಂದ. ಆದರೆ ಚುನಾವಣೆ ಬಳಿಕ ಸಮ್ಮಿಶ್ರ ಸರ್ಕಾರ ರಚಿಸುವ ಬಗ್ಗೆ ಯಾವುದೇ ಬದ್ಧತೆಯನ್ನು ಹೊಂದಿಲ್ಲ ಎಂದು ಪಕ್ಷದ ಪ್ರಧಾನ ಕಾರ್ಯದರ್ಶಿ ಹಾಗೂ ವಿಧಾನಸಭೆ ವಿರೋಧ ಪಕ್ಷದ ನಾಯಕ ಎಡಪ್ಪಾಡಿ ಕೆ.ಪಳನಿಸ್ವಾಮಿ ಸ್ಪಷ್ಟಪಡಿಸಿದ್ದಾರೆ.
ಗಾಢವಾದ ಏಕತೆಯನ್ನು ಸೂಚಿಸುವಂಥ ರಾಜಕೀಯ ವಿಶ್ಲೇಷಣೆಗಳಿಂದ ಉಂಟಾದ ತಪ್ಪು ಕಲ್ಪನೆಯನ್ನು ಹೋಗಲಾಡಿಸಲು ಸ್ಪಷ್ಟನೆ ನೀಡುವುದು ಅಗತ್ಯ ಎಂದು ಅವರು ಬುಧವಾರ ಸುದ್ದಿಗಾರರ ಜತೆ ಮಾತನಾಡುವ ವೇಳೆ ಹೇಳಿದರು. "ಚುನಾವಣೆ ಬಳಿಕ ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರ ರಚನೆಯಾಗುತ್ತದೆ ಎಂದು ಕೇಂದ್ರ ಗೃಹಸಚಿವ ಅಮಿತ್ ಶಾ ಎಲ್ಲೂ ಹೇಳಿಲ್ಲ. ನಾವು ಮೈತ್ರಿಕೂಟದ ಭಾಗವಾಹಿರುತ್ತೇವೆ ಎಂದಷ್ಟೇ ಹೇಳಿದ್ದೇವೆ. ನಾವು ಸಮ್ಮಿಶ್ರ ಸರ್ಕಾರ ರಚಿಸುತ್ತೇವೆ ಎಂದು ಎಲ್ಲೂ ಹೇಳಿಲ್ಲ. ನಾವು ಮೈತ್ರಿ ಮಾಡಿಕೊಂಡರೆ ಡಿಎಂಕೆಗೆ ಏಕೆ ಕಿರಿ ಕಿರಿಯಾಗಬೇಕು? ಡಿಎಂಕೆಗೆ ಭಯ ಶುರುವಾಗಿದೆ. ಅಮಿತ್ ಶಾ ಕೂಡಾ ಸಮ್ಮಿಶ್ರ ಆಡಳಿತದ ಬಗ್ಗೆ ಉಲ್ಲೇಖಿಸಿಲ್ಲ. ದೆಹಲಿಗೆ ಮೋದಿ ಎಂದು ಹೇಳುವ ಜೊತೆಗೆ ರಾಜ್ಯದಲ್ಲಿ ಪಳನಿಸ್ವಾಮಿ ನಾಯಕತ್ವ ವಹಿಸಲಿದ್ದಾರೆ ಎಂದಷ್ಟೇ ಹೇಳಿದ್ದಾಗಿ ವಿವರಿಸಿದ್ದಾರೆ.
ಪಳನಿಸ್ವಾಮಿ ಹೇಳಿಕೆಗೆ ಪ್ರತಿಕ್ರಿಯಿಸಿದ ಬಿಜೆಪಿ ರಾಜ್ಯ ಘಟಕದ ಮುಖ್ಯಸ್ಥ ನೈನಾರ್ ನಾಗೇಂದ್ರನ್ ಅವರು, ತಮಿಳುನಾಡಿನಲ್ಲಿ ಸಮ್ಮಿಶ್ರ ಸರ್ಕಾರ ರಚಿಸುವ ವಿಚಾರದಲ್ಲಿ ಬಿಜೆಪಿ ಮುಖಂಡರು ನಿರ್ಧರಿಸಲಿದ್ದಾರೆ ಎಂದು ಸ್ಪಷ್ಟಪಡಿಸಿದ್ದಾರೆ. ಸೀಟು ಹಂಚಿಕೆ ಮತ್ತು ಸಚಿವ ಸ್ಥಾನ ಹಂಚಿಕೆ ಬಗ್ಗೆ ಸೂಕ್ತ ಸಮಯದಲ್ಲಿ ಮಿತ್ರ ಪಕ್ಷಗಳ ಜತೆ ಚರ್ಚೆ ನಡೆಸಿ ನಿರ್ಧಾರ ಕೈಗೊಳ್ಳುವುದಾಗಿ ಅಮಿತ್ ಶಾ ಚೆನ್ನೈ ಭೇಟಿ ವೇಳೆ ಸ್ಪಷ್ಟಪಡಿಸಿದ್ದರು.