ದಿಲ್ಲಿಯಲ್ಲಿ ಅಮೆಝಾನ್ ಮ್ಯಾನೇಜರ್ ಹತ್ಯೆ ಪ್ರಕರಣ: ಪ್ರಮುಖ ಆರೋಪಿ 18 ವರ್ಷದ ಯುವಕನ ಬಂಧನ
Photo: PTI
ಹೊಸದಿಲ್ಲಿ: ಅಮೆಝಾನ್ ನಲ್ಲಿ ಹಿರಿಯ ವ್ಯವಸ್ಥಾಪಕರೊಬ್ಬರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ 18 ವರ್ಷದ ಯುವಕನನ್ನು ದಿಲ್ಲಿ ಪೊಲೀಸರು ಇಂದು ಬಂಧಿಸಿದ್ದಾರೆ. ಈತ ಪ್ರಮುಖ ಆರೋಪಿಯಾಗಿದ್ದಾನೆ ಎಂದು ತಿಳಿದುಬಂದಿದೆ.
ಬುಧವಾರ ಈಶಾನ್ಯ ದಿಲ್ಲಿಯಲ್ಲಿ ಅಮೆಝಾನ್ ಮ್ಯಾನೇಜರ್ ಹರ್ಪ್ರೀತ್ ಗಿಲ್ ತನ್ನ ಸ್ನೇಹಿತನೊಂದಿಗೆ ಬೈಕ್ನಲ್ಲಿ ಪ್ರಯಾಣಿಸುತ್ತಿದ್ದಾಗ ಐವರು ದುಷ್ಕರ್ಮಿಗಳು ಗುಂಡಿಕ್ಕಿ ಕೊಂದಿದ್ದರು.
ಕಿರಿದಾದ ಹಾದಿಯಲ್ಲಿ ಹೋಗುವಾರ ಇಬ್ಬರ ನಡುವೆ ಉಂಟಾದ ವಾದ ವಿವಾದದಿಂದ ದಾಳಿ ನಡೆದಿದೆ. ದಾಳಿಕೋರರು ವಿರುದ್ಧ ದಿಕ್ಕಿನಿಂದ ಸ್ಕೂಟರ್ ನಲ್ಲಿ ಬರುತ್ತಿದ್ದು, ಲೇನ್ ಕಿರಿದಾಗಿದ್ದು, ಏಕಕಾಲಕ್ಕೆ ಒಂದು ವಾಹನ ಮಾತ್ರ ಹಾದು ಹೋಗುತ್ತಿತ್ತು. ಗಿಲ್ ಹಾಗೂ ದಾಳಿಕೋರರು ಹಿಂದಕ್ಕೆ ಹೋಗಿ ದಾರಿ ಮಾಡಿಕೊಡಲು ನಿರಾಕರಿಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ದಿಲ್ಲಿಯ ಭಜನಪುರದಲ್ಲಿ ರಾತ್ರಿ 11.30ರ ಸುಮಾರಿಗೆ ಗುಂಡಿನ ದಾಳಿ ನಡೆದಿದೆ.
ಪೊಲೀಸರ ಪ್ರಕಾರ, ಆರೋಪಿ ಬಿಲಾಲ್ ಗನಿ ಹಾಗೂ ಆತನ ಸಹಚರರಾದ ಮುಹಮ್ಮದ್ ಸಮೀರ್ (18), ಸೊಹೈಲ್ (23), ಮುಹಮ್ಮದ್ ಜುನೈದ್ (23), ಮತ್ತು ಅದ್ನಾನ್ (19) ಭಜನಪುರದ ಉತ್ತರ ಘೋಂಡಾದಲ್ಲಿ ಪಾರ್ಟಿ ಮಾಡುತ್ತಿದ್ದರು.
ರಾತ್ರಿ 10.30 ರ ಸುಮಾರಿಗೆ ಅವರು ಎರಡು ಸ್ಕೂಟರ್ಗಳಲ್ಲಿ ಸವಾರಿ ಮಾಡಲು ನಿರ್ಧರಿಸಿದ್ದರು. ಕೆಲವೆಡೆ ನಿಲ್ಲಿಸಿ ಕೊನೆಗೆ ಎರಡು ದ್ವಿಚಕ್ರ ವಾಹನಗಳು ದಾಟಲು ಸಾಧ್ಯವಾಗದ ಕಿರಿದಾದ ಹಾದಿಯಲ್ಲಿ ಸವಾರಿ ಆರಂಭಿಸಿದ್ದರು.
ಗನಿ ಹಾಗೂ ಅವನ ಸಹಚರರು ಜಗಳಕ್ಕೆ ನಿಂತರು ಗಿಲ್ ಯುವಕರೊಂದಿಗೆ ಮಾತನಾಡಲು ಕೆಳಗಿಳಿಯಲು ಪ್ರಯತ್ನಿಸಿದಾಗ, ಸಮೀರ್ ಅವರ ತಲೆಗೆ ಗುಂಡು ಹಾರಿಸಿದ್ದ ಎಂದು ಡಿಸಿಪಿ ಹೇಳಿದರು.
ಸಿಸಿಟಿವಿ ದೃಶ್ಯಾವಳಿಗಳನ್ನು ಸ್ಕ್ಯಾನ್ ಮಾಡಿದ ನಂತರ ಆರೋಪಿಗಳನ್ನು ಗುರುತಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ