ಅಂಬೇಡ್ಕರ್ ಪ್ರತಿಮೆಗೆ ಹಾನಿ, ದಲಿತರಿಗೆ ಹಲ್ಲೆ: ಬಜರಂಗ ದಳ ಸದಸ್ಯ, ಇತರ ಇಬ್ಬರ ಬಂಧನ
ಸಾಂದರ್ಭಿಕ ಚಿತ್ರ. Photo: ಡಾ. ಭೀಮರಾವ್ ಅಂಬೇಡ್ಕರ್ | PTI
ಸೆಹೋರ್: ಮಧ್ಯಪ್ರದೇಶದ ಸೆಹೋರ್ ಜಿಲ್ಲೆಯ ಇಚ್ಛಾವಾರ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸಮಾಜ ಸುಧಾರಕ ಡಾ. ಭೀಮರಾವ್ ಅಂಬೇಡ್ಕರ್ ಅವರ ಪ್ರತಿಮೆಗೆ ಹಾನಿಯನ್ನುಂಟು ಮಾಡಿದ್ದಕ್ಕಾಗಿ ಮತ್ತು ದಲಿತ ಗ್ರಾಮಸ್ಥರ ಮೇಲೆ ಹಲ್ಲೆ ನಡೆಸಿದ್ದಕ್ಕಾಗಿ ಬಜರಂಗ ದಳದ ಸದಸ್ಯ ಸೇರಿದಂತೆ ಮೂವರನ್ನು ಪೊಲೀಸರು ಬಂಧಿಸಿದ್ದಾರೆ.
ಗುಂಪೊಂದರ ಭಾಗವಾಗಿದ್ದ ಆರೋಪಿಗಳು ಕಳೆದ ತಿಂಗಳು ಅರ್ಚಕರೋರ್ವರ ಮೇಲೆ ನಡೆದಿದ್ದ ಹಲ್ಲೆಗೆ ಪ್ರತೀಕಾರವಾಗಿ ಈ ಕೃತ್ಯವನ್ನೆಸಗಿದ್ದರು ಎಂದು ಇಚ್ಛಾವಾರ್ ಠಾಣಾಧಿಕಾರಿ ಉಷಾ ಮಾರ್ವಾರಿ ಸುದ್ದಿಗಾರರಿಗೆ ತಿಳಿಸಿದರು.
ಸುಮಾರು ಎಂಟು ದಿನಗಳ ಹಿಂದೆ ಧಾರ್ಮಿಕ ಮೆರವಣಿಗೆ ಸಂದರ್ಭ ಜಗಳ ಸಂಭವಿಸಿತ್ತು. ಮದ್ಯದ ನಶೆಯಲ್ಲಿದ್ದ ಗ್ರಾಮಸ್ಥನೋರ್ವ ಹನುಮಾನ್ ಧ್ವಜವನ್ನು ಹಿಡಿದಿದ್ದ ಅರ್ಚಕನಿಗೆ ಕೋಲಿನಿಂದ ಹೊಡೆದಿದ್ದ. ಧ್ವಜದ ಮೇಲೆ ಹನುಮಾನ್ ಚಿತ್ರವನ್ನು ಅಳವಡಿಸಲಾಗಿತ್ತು. ಆರೋಪಿ ದಲಿತ ವ್ಯಕ್ತಿ ಕನೈಯಾ ಲಾಲ್ ಎಂಬಾತನನ್ನು ಬಂಧಿಸಲಾಗಿತ್ತು. ಮಂಗಳವಾರ ಅಂಬೇಡ್ಕರ್ ಪ್ರತಿಮೆಗೆ ಹಾನಿಯನ್ನುಂಟು ಮಾಡಿದ ಗುಂಪು ಲಾಲ್ ಮನೆಯನ್ನು ಧ್ವಂಸಗೊಳಿಸಿತ್ತು. ಎಫಐಆರ್ನಂತೆ ಐವರು ವ್ಯಕ್ತಿಗಳು ತಮ್ಮನ್ನು ತಡೆಯಲೆತ್ನಿಸಿದ್ದ ದೂರುದಾರ ಮನೋಜ ಮಾಳವೀಯರನ್ನು ಥಳಿಸಿದ್ದರು ಎಂದು ಮಾರ್ವಾರಿ ತಿಳಿಸಿದರು.
ಪ್ರತಿಮೆಗೆ ಹಾನಿಯುಂಟಾಗುವುದನ್ನು ತಡೆಯಲು ಯತ್ನಿಸಿದ್ದ ಗ್ರಾಮಸ್ಥರಿಗೂ ಗುಂಪು ಜಾತಿ ನಿಂದನೆಯನ್ನು ಮಾಡಿತ್ತು ಎಂದು ಆರೋಪಿಸಲಾಗಿದೆ.
‘ಘಟನೆ ನಡೆದಾಗ ನನ್ನ ಮಗ ಪಾನಮತ್ತನಾಗಿದ್ದ. ಅವರು ನನ್ನ ಮನೆಯ ಮೇಲೆ ದಾಳಿ ನಡೆಸಬಾರದಿತ್ತು’ ಎಂದು ಲಾಲ್ ತಂದೆ ದುರ್ಗಾಪ್ರಸಾದ ಅಳಲು ತೋಡಿಕೊಂಡರು.
ಎಪ್ರಿಲ್ನಲ್ಲಿ ಬಜರಂಗದಳದ ಸದಸ್ಯ ಮತ್ತು ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿರುವ ಅಜಯ ರಾಠೋಡ್ ಅಂಬೇಡ್ಕರ ಪ್ರತಿಮೆ ಸ್ಥಾಪನೆಯನ್ನು ಆಕ್ಷೇಪಿಸಿದ್ದ.
‘ಮಂಗಳವಾರ ಡಿಜೆ ಅಬ್ಬರದೊಂದಿಗೆ ಮೆರವಣಿಗೆಯಲ್ಲಿ ಬಂದಿದ್ದ ಗುಂಪು ಪ್ರತಿಮೆಗೆ ಹಾನಿಯನ್ನುಂಟು ಮಾಡಲು ಆರಂಭಿಸಿದ್ದಾಗ ನಾನು ಅದನ್ನು ವಿರೋಧಿಸಿದ್ದೆ ’ ಎಂದು ಆರೆಸ್ಸೆಸ್ ಸದಸ್ಯ ಧೀರಜ್ ಪಾಟಿದಾರ್ ಸುದ್ದಿಗಾರರಿಗೆ ತಿಳಿಸಿದರು. ‘ಅವರ ಪೈಕಿ ಹೆಚ್ಚಿನವರು ಹೊರಗಿನವರಾಗಿದ್ದರು. ನಾವು ಅಂಬೇಡ್ಕರ್ ವಿರೋಧಿಗಳಲ್ಲ ’ ಎಂದರು.
‘ಪ್ರತಿಮೆಯನ್ನು ಸ್ಥಾಪಿಸಲು ಗ್ರಾಮ ಪಂಚಾಯತ್ ನಿರ್ಧರಿಸಿತ್ತು. ಪ್ರತಿಯೊಬ್ಬರ ಅನುಮತಿ ಪಡೆದುಕೊಂಡೇ ಪ್ರತಿಮೆಯನ್ನು ನಾವು ಸ್ಥಾಪಿಸಿದ್ದೆವು. ಆದರೆ ಅದರಿಂದಾಗಿ ಉದ್ವಿಗ್ನತೆ ಹೊಗೆಯಾಡುತ್ತಲೇ ಇತ್ತು ’ಎಂದು ಭೀಮ ಯುವಸಂಘಟನೆಯ ಸದಸ್ಯರೋರ್ವರು ತಿಳಿಸಿದರು.