ಮುಂದುವರಿದ ಅಮೇಥಿ ಕ್ಲೈಮ್ಯಾಕ್ಸ್: ರಾಯ್ ಬರೇಲಿಯಿಂದ ರಾಹುಲ್ ಸ್ಪರ್ಧೆ?
Photo: FB/Rahulgandhi
ಹೊಸದಿಲ್ಲಿ: ಅಮೇಥಿ ಮತ್ತು ರಾಯಯ್ ಬರೇಲಿ ಕ್ಷೇತ್ರಗಳ ಕಾಂಗ್ರೆಸ್ ಅಭ್ಯರ್ಥಿಗಳ ಹೆಸರನ್ನು 24 ಗಂಟೆಗಳ ಒಳಗಾಗಿ ಘೋಷಿಸುವುದಾಗಿ ಪಕ್ಷ ನೀಡಿದ ಭರವಸೆ ಹುಸಿಯಾಗಿದ್ದು, ಗಾಂಧಿ ಕುಟುಂಬದ ಭದ್ರಕೋಟೆ ಎನಿಸಿದ ಎರಡು ಕ್ಷೇತ್ರಗಳಿಗೆ ಯಾರು ಅಭ್ಯರ್ಥಿ ಎನ್ನುವ ಕುತೂಹಲ ಮುಂದುವರಿದಿದೆ. ಅಭ್ಯರ್ಥಿ ಘೋಷಣೆಯನ್ನು ಮಧ್ಯರಾತ್ರಿ ಮುಂದೂಡಲಾಗಿದ್ದು, ನಾಮಪತ್ರ ಸಲ್ಲಿಕೆಗೆ ಕೊನೆಯ ದಿನವಾಗಿರುವ ಶುಕ್ರವಾರ ಹೆಸರು ಬಹಿರಂಗಪಡಿಸುವ ಸಾಧ್ಯತೆ ಇದೆ.
ಈ ಎರಡು ಕ್ಷೇತ್ರಗಳಿಂದ ಗಾಂಧಿ ಕುಟುಂಬದ ಕುಡಿಗಳಾಗಿರುವ ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ವಾದ್ರಾ ಸ್ಪರ್ಧಿಸಲಿದ್ದಾರೆ ಎಂಬ ವದಂತಿ ದಟ್ಟವಾಗಿ ಹಬ್ಬಿದೆ. ರಾಹುಲ್ ಗಾಂಧಿ ಸ್ಪರ್ಧೆಗೆ ಉತ್ಸಾಹ ತೋರಿಸಿಲ್ಲ ಎನ್ನಲಾಗಿದ್ದು, ಆದರೆ 2014-19ರ ಅವಧಿಯಲ್ಲಿ ಪ್ರತಿನಿಧಿಸಿದ್ದ ಅಮೇಥಿ ಕ್ಷೇತ್ರವನ್ನು ಬಿಟ್ಟು ರಾಯ್ ಬರೇಲಿಯಿಂದ ಸ್ಪರ್ಧಿಸಲು ಒಪ್ಪಿಗೆ ಸೂಚಿಸಿದ್ದಾರೆ ಎಂದು ಉನ್ನತ ಮೂಲಗಳು ಹೇಳಿವೆ.
ರಾಯ್ ಬರೇಲಿ ಸಂಸದೆ ಸೋನಿಯಾಗಾಂಧಿ ರಾಜ್ಯಸಭೆ ಪ್ರವೇಶಿಸಿದ್ದಾರೆ. ಇಲ್ಲಿಂದ ಸ್ಪರ್ಧಿಸಲು ರಾಹುಲ್ ಮೊದಲು ಒಪ್ಪಿಕೊಂಡಿದ್ದರು. ತಡರಾತ್ರಿವರೆಗೂ ರಾಹುಲ್ ಅವರನ್ನು ಮನವೊಲಿಸುವ ಪ್ರಯತ್ನ ನಡೆಯಿತು. ಪ್ರಿಯಾಂಕಾಗಾಂಧಿ ಲೋಕಸಭಾ ಚುನಾವಣೆಗೆ ಸ್ಪರ್ಧಿಸುವ ಸಾಧ್ಯತೆಯನ್ನು ತಳ್ಳಿಹಾಕಿದ್ದಾರೆ. ಇಬ್ಬರೂ ಸ್ಪರ್ಧಿಸದಿದ್ದರೆ, ಪಕ್ಷದ ನಿಷ್ಠಾವಂತರು ಇಲ್ಲಿ ನಾಮಪತ್ರ ಸಲ್ಲಿಸುವ ಸಾಧ್ಯತೆ ಇದೆ.
ಗುರುವಾರ ಸಂಜೆ ಶಿವಮೊಗ್ಗದಲ್ಲಿ ಪ್ರಚಾರ ರ್ಯಾಲಿ ನಡೆಸಿದ ಬಳಿಕ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ರಾಹುಲ್ ಗಾಂಧಿ ಮತ್ತು ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಈ ಸಂಬಂಧ ಚರ್ಚೆ ನಡೆಸಿದ್ದಾರೆ. ಅಧಿಕೃತ ಘೋಷಣೆಯೊಂದಿಗೆ ಅಂತಿಮ ನಿರ್ಧಾರ ತಿಳಿಯಲಿದೆ. ಸದ್ಯಕ್ಕೆ ಯಾವುದೂ ಸ್ಪಷ್ಟತೆ ಇಲ್ಲ ಎಂದು ಹಿರಿಯ ಮುಖಂಡರೊಬ್ಬರು ವಿವರಿಸಿದ್ದಾರೆ.