ಬಿಜೆಪಿ ಸಂಸದರಾದ ರಮೇಶ್ ಬಿಧುರಿ, ಪ್ರತಾಪ್ ಸಿಂಹ ವಿರುದ್ಧ ಕ್ರಮವೇಕಿಲ್ಲ: ಪ್ರತಿಪಕ್ಷಗಳ ಪ್ರಶ್ನೆ
"ಸಂಸದರ ಸಾಮೂಹಿಕ ಅಮಾನತು ಪ್ರಜಾಪ್ರಭುತ್ವಕ್ಕೆ ವಿರುದ್ಧ"
ಪ್ರತಾಪ್ ಸಿಂಹ
ಹೊಸದಿಲ್ಲಿ: ಸಂಸತ್ ಭದ್ರತಾ ವೈಫಲ್ಯದ ವಿರುದ್ಧ ಪ್ರತಿಭಟಿಸಿದ್ದ ಸಂಸದರನ್ನು ಅಶಿಸ್ತಿನ ನಡವಳಿಕೆಗಾಗಿ ಅಮಾನತುಗೊಳಿಸಿರುವ ಕುರಿತು ಭಾರೀ ಗದ್ದಲದ ನಡುವೆಯೇ ಪ್ರತಿಪಕ್ಷಗಳು,ಲೋಕಸಭೆಯ ಇಬ್ಬರು ಬಿಜೆಪಿ ಸದಸ್ಯರು ಬೃಹತ್ ವಿವಾದಗಳ ಕೇಂದ್ರವಾಗಿದ್ದರೂ ಅವರ ವಿರುದ್ಧ ಇನ್ನೂ ಯಾವುದೇ ಕ್ರಮವನ್ನು ತೆಗೆದುಕೊಂಡಿಲ್ಲವೇಕೆ ಎಂದು ಪ್ರಶ್ನಿಸಿವೆ.
ರಮೇಶ್ ಬಿಧುರಿ ಮತ್ತು ಪ್ರತಾಪ್ ಸಿಂಹ ಈ ಇಬ್ಬರು ಬಿಜೆಪಿ ಸಂಸದರಾಗಿದ್ದಾರೆ. ಬಿಧುರಿ ಅಮ್ರೋಹಾ ಸಂಸದ ದಾನಿಷ್ ಅಲಿ ವಿರುದ್ಧ ಕೋಮುವಾದಿ ಮತ್ತು ಅವಹೇಳನಕಾರಿ ಭಾಷೆಯನ್ನು ಬಳಸಿದ್ದರೆ,ಸಿಂಹ ಅವರ ಕಚೇರಿಯು ಡಿ.13ರಂದು ಲೋಕಸಭೆಯ ಚೇಂಬರ್ಗೆ ನುಗ್ಗಿದ್ದ ಇಬ್ಬರ ಪೈಕಿ ಓರ್ವನಿಗೆ ಸಂದರ್ಶಕರ ಪಾಸ್ ನೀಡಿತ್ತು.
ಭದ್ರತಾ ಲೋಪ ಕುರಿತು ಕೇಂದ್ರ ಗೃಹಸಚಿವ ಅಮಿತ್ ಶಾ ಅವರಿಂದ ಹೇಳಿಕೆಯನ್ನು ಬಯಸಿದ್ದಕ್ಕಾಗಿ 141 ಸಂಸದರನ್ನು ಅಮಾನತುಗೊಳಿಸಲಾಗಿದೆ ಮತ್ತು ಸಂಸತ್ ಭದ್ರತೆ ಉಲ್ಲಂಘನೆಯ ಆರು ಆರೋಪಿಗಳ ವಿರುದ್ಧ ಭಯೋತ್ಪಾದನೆ ನಿಗ್ರಹ ಕಾನೂನಿನಡಿ ಪ್ರಕರಣ ದಾಖಲಾಗಿದೆ ಎಂದು ಎಕ್ಸ್ ಪೋಸ್ಟ್ನಲ್ಲಿ ಹೇಳಿರುವ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರು, ‘ಆರೋಪಿಗಳಿಗೆ ಪಾಸ್ ನೀಡಿದ್ದ ಪ್ರತಾಪ್ ಸಿಂಹ ಆರಾಮವಾಗಿದ್ದಾರೆ ಮತ್ತು ಅವರನ್ನು ಈವರೆಗೂ ಪ್ರಶ್ನಿಸಲಾಗಿಲ್ಲ. ಇದು ಯಾವ ಸೀಮೆಯ ತನಿಖೆ? ಸಂಸತ್ತಿನ ಭದ್ರತೆಯ ಹೊಣೆಯನ್ನು ಹೊತ್ತಿರುವ ಹಿರಿಯ ಅಧಿಕಾರಿಗಳನ್ನೇಕೆ ಉತ್ತರದಾಯಿಯಾಗಿಸಿಲ್ಲ? ಇಷ್ಟೊತ್ತಿಗಾಗಲೇ ತಲೆಗಳು ಉರುಳಬೇಕಿತ್ತು. ಇದರ ಬದಲು ಅವರು ಸಂಸದರ ಪ್ರಜಾಸತ್ತಾತ್ಮಕ ಹಕ್ಕುಗಳನ್ನು ಕಿತ್ತುಕೊಂಡಿದ್ದಾರೆ,ಅವರು ಹೊಣೆಗಾರಿಕೆಯಿಂದ ನುಣುಚಿಕೊಳ್ಳುತ್ತಿದ್ದಾರೆ ’ ಎಂದಿದ್ದಾರೆ.
‘ಮೋದಿ ಪರಿಸರ ವ್ಯವಸ್ಥೆ’ಯು ವಿಷಯವೇ ಅಲ್ಲದ ತಥಾಕಥಿತ ಮಿಮಿಕ್ರಿಯ (ಟಿಎಂಸಿ ಸಂಸದರಿಂದ ರಾಜ್ಯಸಭೆಯ ಸಭಾಪತಿಗಳ ಅನುಕರಣೆ ಉಲ್ಲೇಖಿಸಿ) ಬಗ್ಗೆ ಮಾತನಾಡುತ್ತಿದೆ, ಆದರೆ ಮೈಸೂರಿನ ಬಿಜೆಪಿ ಸಂಸದರು ಸಂಸತ್ ಭದ್ರತೆ ಉಲ್ಲಂಘನೆ ಆರೋಪಿಗಳ ಪ್ರವೇಶಕ್ಕೆ ಏಕೆ ಮತ್ತು ಹೇಗೆ ಅನುಕೂಲ ಕಲ್ಪಿಸಿದ್ದರು ಎಂಬ ನೈಜ ವಿಷಯದ ಬಗ್ಗೆ ಮೌನವಾಗಿದೆ ಎಂದು ಅಮಾನತುಗೊಂಡಿರುವ ಸಂಸದರಲ್ಲಿ ಓರ್ವರಾಗಿರುವ ಹಿರಿಯ ಕಾಂಗ್ರೆಸ್ ನಾಯಕ ಜೈರಾಂ ರಮೇಶ್ ಹೇಳಿದರು.
ಕೀಳುಭಾಷೆಯನ್ನು ಬಳಸುವವರು ಸಂಸತ್ತಿನ ಒಳಗೆ ಕುಳಿತುಕೊಳ್ಳುತ್ತಾರೆ ಮತ್ತು ಪ್ರಶ್ನೆಗಳನ್ನು ಕೇಳುವವರು ಹೊರಗೆ ಇರುತ್ತಾರೆ ಎನ್ನುವುದು ನವ ಭಾರತದ ನೂತನ ವ್ಯಾಖ್ಯೆಯಾಗಿದೆ ಎಂದು ಹೇಳಿದ ಅಮಾನತುಗೊಂಡ ಸಂಸದರಲ್ಲಿ ಓರ್ವರಾಗಿರುವ ದಾನಿಷ್ ಅಲಿ, ಪ್ರಶ್ನೆಗಳನ್ನು ಕೇಳುವುದು ಸಂಸತ್ತಿನ ಘನತೆಗೆ ಕುಂದುಂಟು ಮಾಡುವುದಿಲ್ಲ,ಬಿಜೆಪಿ ಸಂಸದರು ಕೀಳುಭಾಷೆಯನ್ನು ಬಳಸಿದಾಗ ಕುಂದುಂಟಾಗುತ್ತದೆ ಎಂದರು. ಸಿಂಹ ವಿರುದ್ಧ ಇನ್ನೂ ಕ್ರಮವನ್ನು ಕೈಗೊಂಡಿಲ್ಲವೇಕೆ ಎಂದು ಪ್ರಶ್ನಿಸಿದ ಅವರು,‘ಸರಕಾರಕ್ಕೆ ಪ್ರಶ್ನೆಗಳನ್ನು ಕೇಳುವವರನ್ನು ಶಿಲುಬೆಗೇರಿಸುವುದು ಇಲ್ಲಿರುವ ಆಲೋಚನೆಯಾಗಿದೆ. ನಾನು ಅಧಿವೇಶನದಲ್ಲಿ ಹಾಜರಿರಲಿಲ್ಲ,ಆದರೆ ನನ್ನ ಹೆಸರನ್ನೂ ಅಮಾನತು ಪಟ್ಟಿಯಲ್ಲಿ ಸೇರಿಸಲಾಗಿದೆ’ಎಂದರು.
‘ಸಂಸದರ ಸಾಮೂಹಿಕ ಅಮಾನತು ಪ್ರಜಾಪ್ರಭುತ್ವಕ್ಕೆ ವಿರುದ್ಧವಾಗಿದೆ. ಇದು ಸಂಭವಿಸಬಾರದಿತ್ತು. ನಾವು ಪ್ರತಾಪ ಸಿಂಹ್ ಅಮಾನತಿಗೆ ಆಗ್ರಹಿಸುತ್ತಿದ್ದರೆ ನಮ್ಮನ್ನೇ ಅಮಾನತು ಮಾಡಲಾಗಿದೆ ’ ಎಂದು ಟಿಎಂಸಿ ಸಂಸದ ಸೌಗತ್ ರೇ ಹೇಳಿದರು.