"ಇವರಲ್ಲಿ ಯಾರು ಹೆಚ್ಚು ಅಪಾಯಕಾರಿ?": ಯೂಟ್ಯೂಬರ್ ರಣವೀರ್ ಅನ್ನು ಟೀಕಿಸಿದ ಅಮಿಶ್ ದೇವಗನ್ ಬಗ್ಗೆ ಪತ್ರಕರ್ತ ಮುಹಮ್ಮದ್ ಝುಬೈರ್ ಪ್ರಶ್ನೆ

ಮುಹಮ್ಮದ್ ಝುಬೈರ್ (en.wikipedia.org) / ಅಮಿಶ್ ದೇವಗನ್ (YouTube) / ರಣವೀರ್ ಅಲಹಾಬಾದಿಯ (instagram)
ಹೊಸದಿಲ್ಲಿ: ಯೂಟ್ಯೂಬರ್ ರಣವೀರ್ ಅಲಹಾಬಾದಿಯ ಅವರು ʼಇಂಡಿಯಾಸ್ ಗಾಟ್ ಲೇಟೆಂಟ್ʼ ಕಾರ್ಯಕ್ರಮದಲ್ಲಿ ನೀಡಿದ ಹೇಳಿಕೆಗೆ ಸಂಬಂಧಿಸಿ ವಿವಾದಕ್ಕೀಡಾಗುತ್ತಿದ್ದಂತೆ ಅವರನ್ನು ನ್ಯೂಸ್ 18 ನಿರೂಪಕ ಅಮಿಶ್ ದೇವಗನ್ ಟೀಕಿಸಿದ್ದರು. ಈ ಬಗ್ಗೆ ಪ್ರತಿಕ್ರಿಯಿಸಿದ ಪತ್ರಕರ್ತ ಮುಹಮ್ಮದ್ ಝುಬೈರ್, ನ್ಯೂಸ್ 18 ನಿರೂಪಕ ಅಮಿಶ್ ದೇವಗನ್ ಅವರ ಕೋಮು ನಿರೂಪಣೆಯ ಚರ್ಚಾ ಕಾರ್ಯಕ್ರಮದ ಪೋಟೊಗಳನ್ನು ಹಂಚಿಕೊಂಡಿದ್ದು, ಇವರಲ್ಲಿ ಯಾರು ಹೆಚ್ಚು ಅಪಾಯಕಾರಿ? ಎಂದು ಪ್ರಶ್ನಿಸಿದ್ದಾರೆ.
ಸಮಯ್ ರೈನಾ ಅವರ ಯೂಟ್ಯೂಬ್ ಶೋ ʼಇಂಡಿಯಾಸ್ ಗಾಟ್ ಲೇಟೆಂಟ್ʼನಲ್ಲಿ ಅಲಹಾಬಾದಿಯ ಅವರು ಅಶ್ಲೀಲವಾದ ಹೇಳಿಕೆಯನ್ನು ನೀಡಿದ್ದರು. ಇದರ ಬೆನ್ನಲ್ಲೇ ಅವರ ವಿರುದ್ಧ ಮುಂಬೈ ಪೊಲೀಸ್ ಕಮಿಷನರ್ ಮತ್ತು ಮಹಾರಾಷ್ಟ್ರ ಮಹಿಳಾ ಆಯೋಗಕ್ಕೆ ದೂರನ್ನು ನೀಡಲಾಗಿತ್ತು. ಪೊಲೀಸರು ಯೂಟ್ಯೂಬರ್ ರಣವೀರ್ ಅಲಹಾಬಾದಿಯ, ಅಪೂರ್ವ ಮಖಿಜಾ, ಸಮಯ್ ರೈನಾ ಮತ್ತು 'ಇಂಡಿಯಾಸ್ ಗಾಟ್ ಲ್ಯಾಟೆಂಟ್' ಕಾರ್ಯಕ್ರಮದ ಆಯೋಜಕರ ವಿರುದ್ಧ ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ. ಈ ಕುರಿತು ಕೇಂದ್ರ ಸರಕಾರದ ಸೂಚನೆ ಬೆನ್ನಲ್ಲೇ ವೀಡಿಯೊ ತುಣುಕನ್ನು ಯೂಟ್ಯೂಬ್ ನಿಂದ ತೆಗೆದು ಹಾಕಲಾಗಿದೆ.
ರಣವೀರ್ ಅಲಹಾಬಾದಿಯ ಅವರ ಹೇಳಿಕೆಯನ್ನು ನ್ಯೂಸ್ 18 ನಿರೂಪಕ ಅಮಿಶ್ ದೇವಗನ್ ಟೀಕಿಸಿದ್ದಾರೆ. ಇದರ ಬೆನ್ನಲ್ಲೇ ಪ್ರತಿಕ್ರಿಯಿಸಿದ ಆಲ್ಟ್ ನ್ಯೂಸ್ ಸಹ ಸ್ಥಾಪಕ, ಪತ್ರಕರ್ತ ಮುಹಮ್ಮದ್ ಝುಬೈರ್, ಅಮಿಶ್ ದೇವಗನ್ ಅವರ ಲವ್ ಜಿಹಾದ್, ಹಿಜಾಬ್ ವಿವಾದ, ಮತ್ತು ತಬ್ಲೀಗಿ ಜಮಾಅತ್ ಕುರಿತ ಹಿಂದಿನ ಚರ್ಚೆಗಳ ಪೋಟೊಗಳನ್ನು ಇನ್ಸ್ಟಾಗ್ರಾಂ ನಲ್ಲಿ ಹಂಚಿಕೊಂಡಿದ್ದಾರೆ. ಕಾರ್ಪೊರೇಟ್ ಬೆಂಬಲದೊಂದಿಗೆ ʼಪ್ರೈಮ್-ಟೈಮ್ ನ್ಯೂಸ್ʼ ನಿರೂಪಕರೋರ್ವರು ಟಿವಿ ಚರ್ಚೆಯಲ್ಲೇ ಬಹಿರಂಗವಾಗಿ ಕೋಮು ನಿರೂಪಣೆಗಳನ್ನು ಮಾಡುತ್ತಿರುವಾಗ, ಯೂಟ್ಯೂಬರ್ ಗಳ ಹೇಳಿಕೆಗಳನ್ನು ಏಕೆ ದೊಡ್ಡ ಮಟ್ಟದಲ್ಲಿ ವಿವಾದವನ್ನಾಗಿಸಲಾಗುತ್ತಿದೆ ಎಂದು ಪ್ರಶ್ನಿಸಿದ್ದಾರೆ.
ಈ ಕುರಿತು ಮುಹಮ್ಮದ್ ಝುಬೈರ್ ಇನ್ಸ್ಟಾಗ್ರಾಂ ನಲ್ಲಿ ಪೋಸ್ಟ್ ಮಾಡಿದ್ದು, ಯೂಟ್ಯೂಬರ್ಗೆ ಯಾರು ನೈತಿಕತೆಯನ್ನು ಹೇಳಿಕೊಡುತ್ತಿದ್ದಾರೆ ನೋಡಿ, ಭಾರತದ ಅತಿ ಶ್ರೀಮಂತ ವ್ಯಕ್ತಿಯ ಮಾಲಕತ್ವದ ನ್ಯೂಸ್ ಚಾನೆಲ್ನ ಬಿಜೆಪಿ ಪರ ಸುದ್ದಿ ನಿರೂಪಕ, ಇವರು ವರ್ಷಗಳಿಂದ ನಿರಂತರವಾಗಿ ಹಿಂದೂ-ಮುಸ್ಲಿಂ ಕುರಿತ ದ್ವೇಷ ಪ್ರಚಾರದ ಚರ್ಚೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಈಗ ಯಾರು ಹೆಚ್ಚು ಅಪಾಯಕಾರಿ ಎಂದು ಹೇಳಿ, ಸಮಾಜವನ್ನು ಒಡೆಯುವವರು ಯಾರು? ಯಾರ ವೀಡಿಯೊಗಳು ಸಮಾಜಕ್ಕೆ ಹೆಚ್ಚು ಅಪಾಯಕಾರಿ ಎಂದು ಪ್ರಶ್ನಿಸಿದ್ದಾರೆ.