ಸಂಸತ್ತಿನಲ್ಲಿ ಅಂಬೇಡ್ಕರ್ ಕುರಿತು ವಿವಾದಾತ್ಮಕವಾಗಿ ಮಾತನಾಡಿದ ಅಮಿತ್ ಶಾ: ಕ್ಷಮೆಯಾಚನೆಗೆ ಕಾಂಗ್ರೆಸ್ ಆಗ್ರಹ
"ಅಂಬೇಡ್ಕರ್,ಅಂಬೇಡ್ಕರ್... ಎನ್ನುವುದು ಈಗ ಒಂದು ಫ್ಯಾಷನ್ ಆಗಿಬಿಟ್ಟಿದೆ" ಎಂದ ಗೃಹಸಚಿವ
ಅಮಿತ್ ಶಾ ,PC : PTI
ಹೊಸದಿಲ್ಲಿ: ಮಂಗಳವಾರ ಗೃಹಸಚಿವ ಅಮಿತ್ ಶಾ ಅವರು ಲೋಕಸಭೆಯಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಕುರಿತು ಆಡಿದ ಮಾತುಗಳು ರಾಜಕೀಯ ಕೋಲಾಹಲವನ್ನು ಸೃಷ್ಟಿಸಿದ್ದು, ಬಿಜೆಪಿಯು ಭಾರತೀಯ ಸಂವಿಧಾನ ಶಿಲ್ಪಿಯ ಬಗ್ಗೆ ಅಸಡ್ಡೆಯನ್ನು ಹೊಂದಿದೆ ಎಂದು ಕಾಂಗ್ರೆಸ್ ಆರೋಪಿಸಿದೆ.
ತನ್ನ ಭಾಷಣದಲ್ಲಿ ಶಾ, "ಅಂಬೇಡ್ಕರ್,ಅಂಬೇಡ್ಕರ್,ಅಂಬೇಡ್ಕರ್... ಎನ್ನುವುದು ಈಗ ಒಂದು ಫ್ಯಾಷನ್ ಆಗಿಬಿಟ್ಟಿದೆ. ನೀವು ಇಷ್ಟು ಸಲ ದೇವರ ಹೆಸರು ತೆಗೆದುಕೊಂಡಿದ್ದರೆ, ಏಳೇಳು ಜನ್ಮಗಳಲ್ಲೂ ಸ್ವರ್ಗ ಪ್ರಾಪ್ತಿಯಾಗುತಿತ್ತು" ಎಂದು ಹೇಳಿದ್ದರು. ಈ ಹೇಳಿಕೆಯನ್ನು ‘ಅಸಹ್ಯಕರ’ ಎಂದು ಬಣ್ಣಿಸಿರುವ ಕಾಂಗ್ರೆಸ್, ಗೃಹಸಚಿವರು ಸಾರ್ವಜನಿಕವಾಗಿ ಕ್ಷಮೆ ಯಾಚಿಸಬೇಕು ಎಂದು ಆಗ್ರಹಿಸಿದೆ.
‘ಬಿಜೆಪಿ ಮತ್ತು ಆರೆಸ್ಸೆಸ್ ಬಾಬಾ ಸಾಹೇಬ್ ಅಂಬೇಡ್ಕರ್ ಅವರನ್ನು ತುಂಬ ದ್ವೇಷಿಸುತ್ತಿವೆ ಎನ್ನುವುದನ್ನು ಇದು ತೋರಿಸಿದೆ. ಎಷ್ಟೊಂದು ದ್ವೇಷವೆಂದರೆ ಅಂಬೇಡ್ಕರ್ ಹೆಸರು ಕೇಳಿದರೂ ಅವರಿಗೆ ಕ್ರೋಧ ಉಕ್ಕುತ್ತದೆ. ಇದೇ ಜನರ ಪೂರ್ವಜರು ಅಂಬೇಡ್ಕರ್ರ ಪ್ರತಿಕೃತಿಗಳನ್ನು ಸುಟ್ಟಿದ್ದರು ಮತ್ತು ಅವರು ನಮಗೆ ನೀಡಿದ್ದ ಸಂವಿಧಾನವನ್ನು ಬದಲಿಸುವ ಮಾತುಗಳನ್ನು ಆಡಿದ್ದರು. ಜನತೆ ಅವರಿಗೆ ಪಾಠ ಕಲಿಸಿದಾಗ ಈಗ ಅಂಬೇಡ್ಕರ್ ಹೆಸರೆತ್ತುವವರ ಬಗ್ಗೆಯೂ ಅವರು ಸಿಟ್ಟಿಗೇಳುತ್ತಿದ್ದಾರೆ. ನಾಚಿಕೆಗೇಡು’ ಎಂದು ಕಾಂಗ್ರೆಸ್ ಆಕ್ರೋಶ ವ್ಯಕ್ತಪಡಿಸಿದೆ.