ಜನನ ಪ್ರಮಾಣ, ಜನಸಂಖ್ಯೆ ನಿರ್ವಹಣೆ ಕುರಿತು ಪ್ರತಿಯೊಂದು ಮನೆಯಲ್ಲೂ ಚರ್ಚೆಯಾಗಬೇಕು : ಆಂಧ್ರ ಸಿಎಂ ಚಂದ್ರಬಾಬು ನಾಯ್ಡು
ಜನನ ಪ್ರಮಾಣ ಇಳಿಕೆ ಬಗ್ಗೆ ಕಳವಳ
Photo | PTI
ಅಮರಾವತಿ: ಜನನ ಪ್ರಮಾಣ ಕುಸಿದಿದೆ ಎಂದು ಆಂಧ್ರಪ್ರದೇಶದ ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು ಸೋಮವಾರ ಮತ್ತೊಮ್ಮೆ ಕಳವಳ ವ್ಯಕ್ತಪಡಿಸಿದ್ದು, ಜನನ ಪ್ರಮಾಣ ಕುಸಿದಿರುವ ದಕ್ಷಿಣ ಕೊರಿಯಾ ಮತ್ತು ಜಪಾನ್ ನಂತಹ ಇತರ ದೇಶಗಳು ಮಾಡಿದ ತಪ್ಪುಗಳನ್ನು ಭಾರತ ಪುನರಾವರ್ತಿಸಬಾರದು ಎಂದು ಹೇಳಿದ್ದಾರೆ.
ಚಿತ್ತೂರು ಜಿಲ್ಲೆಯಲ್ಲಿ ಕುಪ್ಪಂ ವಿಷನ್-2029 ಡಾಕ್ಯುಮೆಂಟ್ ಅನಾವರಣಗೊಳಿಸಿ ಮಾತನಾಡಿದ ಆಂಧ್ರಪ್ರದೇಶದ ಮುಖ್ಯಮಂತ್ರಿ ಎನ್.ಚಂದ್ರಬಾಬು ನಾಯ್ಡು, ಜನನ ಪ್ರಮಾಣ ಮತ್ತು ಜನಸಂಖ್ಯೆ ನಿರ್ವಹಣೆ ಕುರಿತು ನಾಳೆಯಿಂದ ಪ್ರತಿಯೊಂದು ಮನೆಯಲ್ಲೂ ಚರ್ಚೆಯಾಗಬೇಕು. ಬೇರೆ ದೇಶಗಳು ಮಾಡಿದ ತಪ್ಪುಗಳನ್ನು ನಾವು ಪುನರಾವರ್ತಿಸಬಾರದು ಮತ್ತು ಈ ಬಗ್ಗೆ ಎಚ್ಚರಿಕೆ ವಹಿಸಬೇಕು. ಕುಪ್ಪಂನಲ್ಲಿ ಜನನ ದರ 1.5ಕ್ಕೆ ಇಳಿದಿದೆ. ಅದು ಎರಡಕ್ಕಿಂತ ಹೆಚ್ಚಿರಬೇಕು. ದಕ್ಷಿಣ ಕೊರಿಯಾದಲ್ಲಿ ಜನನ ದರ 0.9ಕ್ಕೆ ಕುಸಿದಿದೆ. ಜಪಾನ್ ಇನ್ನೂ ದೊಡ್ಡ ಸಮಸ್ಯೆಗಳನ್ನು ಎದುರಿಸುತ್ತಿದೆ ಎಂದು ಚಂದ್ರ ಬಾಬು ನಾಯ್ಡು ಹೇಳಿದ್ದಾರೆ.
ಗಳಿಸಿದ ಹಣವನ್ನು ಹಂಚಿಕೊಳ್ಳಲು ಬಯಸದ ಮತ್ತು ಆ ಸಂಪತ್ತನ್ನು ತಮ್ಮ ಸಂತೋಷಕ್ಕಾಗಿ ಮಾತ್ರ ಬಳಸಲು ಬಯಸುವ ಕೆಲವು ದಂಪತಿಗಳು ಇಂದಿನ ದಿನಗಳಲ್ಲಿ ಮಕ್ಕಳು ಬೇಡ ಎಂಬ ಅಭಿಪ್ರಾಯದಲ್ಲಿದ್ದಾರೆ. ನಿಮ್ಮ ತಂದೆ-ತಾಯಿ ಕೂಡ ಹಾಗೆ ಯೋಚಿಸಿದ್ದರೆ ನೀವು ಈ ಜಗತ್ತಿಗೆ ಬರುತ್ತಿದ್ದಿರಾ? ಈ ವಿಚಾರದಲ್ಲಿ ಎಲ್ಲರಿಗೂ ಸ್ಪಷ್ಟತೆ ಇರಬೇಕು ಎಂದ ಅವರು ಒಂದು ಕಾಲದಲ್ಲಿ ಮಕ್ಕಳಿಲ್ಲದಿರುವುದು ಕಳಂಕ ಎಂದು ಭಾವಿಸಿದ್ದನ್ನು ನೆನಪಿಸಿದ್ದಾರೆ.
ಇತ್ತೀಚೆಗೆ ದಕ್ಷಿಣದ ರಾಜ್ಯಗಳಲ್ಲಿ ವಿಶೇಷವಾಗಿ ಆಂಧ್ರಪ್ರದೇಶದಲ್ಲಿ ಹೆಚ್ಚುತ್ತಿರುವ ವಯಸ್ಕ ಜನಸಂಖ್ಯೆಯ ಬಗ್ಗೆ ಕಳವಳ ವ್ಯಕ್ತಪಡಿಸಿದ ಸಿಎಂ ಚಂದ್ರಬಾಬು ನಾಯ್ಡು, ದಂಪತಿಗಳು ಹೆಚ್ಚಿನ ಮಕ್ಕಳನ್ನು ಹೊಂದುವಂತೆ ಸಲಹೆ ನೀಡಿದ್ದರು.