ಮಣಿಪುರ: ಮತ್ತೊಂದು ಲೈಂಗಿಕ ದೌರ್ಜನ್ಯ ಬೆಳಕಿಗೆ; ದೂರು ದಾಖಲಿಸಿದ ಸಂತ್ರಸ್ತೆ
File Photo: PTI
ಇಂಫಾಲ್: ಮಣಿಪುರ ಹಿಂಸಾಚಾರದ ವೇಳೆ ಮೇ ತಿಂಗಳಲ್ಲಿ ನಡೆದ ಇನ್ನೊಂದು ಬರ್ಬರ ಲೈಂಗಿಕ ದೌರ್ಜನ್ಯದ ಪ್ರಕರಣವು, ಇದೀಗ ಪರಿಹಾರ ಶಿಬಿರದಲ್ಲಿ ವಾಸಿಸುತ್ತಿರುವ ಸಂತ್ರಸ್ತೆ ಪೊಲೀಸ್ ದೂರು ದಾಖಲಿಸುವುದರೊಂದಿಗೆ ಬೆಳಕಿಗೆ ಬಂದಿದೆ.
ಈ ನಿರ್ದಿಷ್ಟ ಪ್ರಕರಣದಲ್ಲಿ ಮಣಿಪುರದ ಚುರಚಂದಪುರ ಜಿಲ್ಲೆಯ 37 ವರ್ಷದ ವಿವಾಹಿತ ಮಹಿಳೆ ತನ್ನ ಹೊತ್ತಿ ಉರಿಯುತ್ತಿರುವ ಮನೆಯಿಂದ ಹೊರಬಂದು ತನ್ನ ಇಬ್ಬರು ಪುತ್ರರು, ಸೋದರ ಸೊಸೆ ಮತ್ತು ಅತ್ತಿಗೆ ಜೊತೆಗೆ ಸುರಕ್ಷಿತ ಸ್ಥಳದತ್ತ ತೆರಳಲು ಯತ್ನಿಸುತ್ತಿರುವಾಗ ಪುರುಷರ ಒಂದು ಗುಂಪು ಆಕೆಯನ್ನು ತನ್ನ ವಶಕ್ಕೆ ಪಡೆದು ಮೇ 3ರಂದು ಸಾಮೂಹಿಕ ಅತ್ಯಾಚಾರ ನಡೆಸಿದೆ ಎಂದು ಆರೋಪಿಸಲಾಗಿದೆ.
ಮಣಿಪುರದ ಹಿಂಸಾಚಾರ ವೇಳೆ ತಮ್ಮ ಮೇಲಾದ ದೌರ್ಜನ್ಯವನ್ನು ವಿವರಿಸಲು ಹಲವು ಮಹಿಳೆಯರು ಮುಂದೆ ಬಂದಿರುವುದರಿಂದ ಈ ಸಂತ್ರಸ್ತೆಯೂ ಮುಂದೆ ಬಂದು ಪೊಲೀಸ್ ದೂರು ದಾಖಲಿಸಿದ್ದಾರೆ.
“ಕುಟುಂಬದ ಮಾನ ಮರ್ಯಾದೆಗೆ ಅಂಜಿ ಇಲ್ಲಿಯ ತನಕ ದೂರು ನೀಡಿರಲಿಲ್ಲ, ನನ್ನ ಜೀವ ಕಳೆದುಕೊಳ್ಳಬೇಕೆಂದು ಬಯಸಿದ್ದೆ,” ಎಂದು ಸಂತ್ರಸ್ತೆ ಬಿಷ್ಣುಪುರ್ ಪೊಲೀಸ್ ಠಾಣೆಯಲ್ಲಿ ದಾಖಲಿಸಿರುವ ದೂರಿನಲ್ಲಿ ತಿಳಿಸಿದ್ದಾರೆ.
ಎಫ್ಐಆರ್ನಲ್ಲಿ ತಿಳಿಸಿದಂತೆ ಮೇ 3ರಂದು ಸಂಜೆ 6.30ಕ್ಕೆ ದುಷ್ಕರ್ಮಿಗಳು ಆಕೆಯ ಮನೆಗೆ ಕಿ ಹಚ್ಚಿದ ನಂತರ ಆಕೆ ಸೋದರಸೊಸೆಯನ್ನು ಬೆನ್ನಿನ್ನಲ್ಲಿರಿಸಿ ಹಾಗೂ ಇಬ್ಬರು ಪುತ್ರರನ್ನು ಕೈಯ್ಯಲ್ಲಿ ಗಟ್ಟಿಯಾಗಿ ಹಿಡಿದು ಅತ್ತಿಗೆಯೊಂದಿಗೆ ಓಡಲು ಪ್ರಾರಂಭಿಸಿದ್ದರು. ಆಗ ರಸ್ತೆಯಲ್ಲಿ ಎಡವಿ ಬಿದಿದ್ದಾಗ ಅತ್ತಿಗೆ ಓಡಿ ಬಂದು ಬೆನ್ನಿನಲ್ಲಿದ್ದ ಮಗು ಹಾಗೂ ತನ್ನಿಬ್ಬರು ಪುತ್ರರೊಂದಿಗೆ ತನ್ನ ಸೂಚನೆಯಂತೆ ಅಲ್ಲಿಂದ ಓಡಿದರೆಂದು ಆಕೆ ಹೇಳಿದ್ದಾರೆ. ಆಕೆ ಏಳಲು ಯತ್ನಿಸಿದಾಗ ಐದಾರು ಮಂದಿ ಆಕೆಯನ್ನು ನಿಂದಿಸಿ ಹಲ್ಲೆಗೈದು ಲೈಂಗಿಕ ದೌರ್ಜನ್ಯವೆಸಗಿದ್ದಾಗಿ ಆಕೆ ಹೇಳಿದ್ದಾರೆ.
ನಂತರ ತನ್ನ ಆರೋಗ್ಯ ಕ್ಷೀಣಿಸಲಾರಂಭಿಸಿತ್ತು, ಇಂಫಾಲದ ಜೆಎನ್ಐಎಂಎಸ್ ಆಸ್ಪತ್ರೆಗೆ ಹೋಗಿ ಚಿಕಿತ್ಸೆ ಪಡೆದುಕೊಂಡರೂ ಪರಿಸ್ಥಿತಿ ವಿವರಿಸುವ ಹಾಗಿರಲಿಲ್ಲ ಎಂದು ಆಕೆ ಹೇಳಿದ್ದಾರೆ.