ಭಯೋತ್ಪಾದಕ ತಡೆ ಪ್ರಕರಣ: ನ್ಯೂಸ್ ಕ್ಲಿಕ್ ಸಂಸ್ಥಾಪಕನ ಬಂಧನ
Photo: twitter.com/Cric_gal
ಹೊಸದಿಲ್ಲಿ: ಚೀನಿ ಪ್ರಚಾರ ಅಭಿಯಾನ ನಡೆಸುತ್ತಿರುವ ಜಾಲವೊಂದರಿಂದ ನ್ಯೂಸ್ ಕ್ಲಿಕ್ ನೆರವು ಸ್ವೀಕರಿಸಿದೆ ಎಂದು ನ್ಯೂಯಾರ್ಕ್ ಟೈಮ್ಸ್ ಪ್ರಕಟಿಸಿದ ತನಿಖಾ ವರದಿ ಆಧಾರದಲ್ಲಿ ಪತ್ರಕರ್ತ ಹಾಗೂ ನ್ಯೂಸ್ ಕ್ಲಿಕ್ ಸಂಸ್ಥಾಪಕ ಪ್ರಭೀರ್ ಪುರಕಾಯಸ್ಥ ಅವರನ್ನು ಭಯೋತ್ಪಾದಕ ತಡೆ, ಕಾನೂನುಬಾಹಿರ ಚಟುವಟಿಕೆಗಳ (ತಡೆ) ಕಾಯ್ದೆಯಡಿ ಬಂಧಿಸಲಾಗಿದೆ. ಈ ನ್ಯೂಸ್ ಪೋರ್ಟೆಲ್ ನ ಮಾನವ ಸಂಪನ್ಮೂಲ ವಿಭಾಗದ ಮುಖ್ಯಸ್ಥ ಅಮಿತ್ ಚಕ್ರವರ್ತಿ ಕೂಡಾ ಬಂಧಿತರಾಗಿದ್ದಾರೆ.
ಇದಕ್ಕೂ ಮುನ್ನ ದೆಹಲಿ- ಎನ್ ಸಿಆರ್ ಮತ್ತು ಮುಂಬೈನಲ್ಲಿ 20ಕ್ಕೂ ಹೆಚ್ಚು ಕಡೆಗಳಲ್ಲಿ ದಾಳಿ ನಡೆಸಿ ನ್ಯೂಸ್ ಕ್ಲಿಕ್ ಜತೆ ಸಂಬಂಧ ಹೊಂದಿರುವ ಪತ್ರಕರ್ತರ ಮನೆಗಳಲ್ಲಿ ಶೋಧಕಾರ್ಯ ನಡೆಸಲಾಗಿತ್ತು. ಇದನ್ನು ವಿರೋಧ ಪಕ್ಷಗಳು ಕಟುವಾಗಿ ಟೀಕಿಸಿದ್ದು, ಇದು ಪತ್ರಿಕಾ ಸ್ವಾತಂತ್ರ್ಯದ ಮೇಲಿನ ಪ್ರಹಾರ ಎಂದು ಕರೆದಿದ್ದವು.
"ಒಟ್ಟು 37 ಮಂದಿ ಶಂಕಿತ ಪುರುಷ ಹಾಗೂ 9 ಮಂದಿ ಮಹಿಳೆಯರನ್ನು ಅವರ ಸ್ಥಳಗಳಲ್ಲಿ ವಿಚಾರಣೆಗೆ ಗುರಿಪಡಿಸಲಾಗಿದೆ. ಜತೆಗೆ ಅವರ ಡಿಜಿಟಲ್ ಸಾಧನಗಳು ಹಗೂ ಇತರ ದಾಖಲೆಗಳನ್ನು ಪರೀಕ್ಷೆಗಾಗಿ ವಶಪಡಿಸಿಕೊಳ್ಳಲಾಗಿದೆ ಅಥವಾ ಪಡೆಯಲಾಗಿದೆ. ಈ ಪ್ರಕ್ರಿಯೆ ಮುಂದುವರಿದಿದ್ದು, ಇದುವರೆಗೆ ಪ್ರಬೀರ್ ಪುರಕಾರಸ್ಥ ಮತ್ತು ಅಮಿತ್ ಚಕ್ರವರ್ತಿಯವರನ್ನು ಬಂಧಿಸಲಾಗಿದೆ" ಎಂದು ದೆಹಲಿ ಪೊಲೀಸರು ಹೇಳಿದ್ದಾರೆ. ಪ್ರಕರಣದ ತನಿಖೆ ಮುಂದುವರಿದಿದೆ.
ಚೀನಾ ಜತೆ ಸಂಪರ್ಕ ಹೊಂದಿರುವ ಸಂಸ್ಥೆಯಿಂದ ನ್ಯೂಸ್ ಕ್ಲಿಕ್ 38 ಕೋಟಿ ರೂಪಾಯಿಯನ್ನು ಸ್ವೀಕರಿಸಿದೆ ಹಾಗೂ ಈ ಹಣವನ್ನು ಸುದ್ದಿ ವೆಬ್ಸೈಟ್ ನಲ್ಲಿ ಚೀನಾ ಪರ ಮಾಹಿತಿಗಳನ್ನು ಪ್ರಕಟಿಸುವಂತೆ ಪ್ರಭಾವ ಬೀರಲು ಬಳಸಲಾಗಿದೆ ಎಂಬ ಆರೋಪ ನ್ಯೂಸ್ ಕ್ಲಿಕ್ ಮೇಲಿದೆ.