ಚಂಡೀಗಢ ಮೇಯರ್ ಚುನಾವಣೆಯಲ್ಲಿ ಅಕ್ರಮ ನಡೆದಿದೆ ಎಂದು ಆರೋಪಿಸಿ ವಿಡಿಯೊ ಬಿಡುಗಡೆ ಮಾಡಿದ ಆಪ್, ಕಾಂಗ್ರೆಸ್
Screengrab Photo: thenewsminute.com
ಚಂಡೀಗಢ: ಚಂಡೀಗಢ ಮೇಯರ್ ಚುನಾವಣೆಯಲ್ಲಿ ಚುನಾವಣಾಧಿಕಾರಿ ಅನಿಲ್ ಮಸಿಹ್ ಮತಪತ್ರಗಳನ್ನು ತಿದ್ದಿದ್ದಾರೆ ಎಂದು ಆರೋಪಿಸಿರುವ ಆಪ್ ಮತ್ತು ಕಾಂಗ್ರೆಸ್, ತಮ್ಮ ಆರೋಪಕ್ಕೆ ಸಮರ್ಥನೆಯಾಗಿ ವಿಡಿಯೊವೊಂದನ್ನು ಬಿಡುಗಡೆ ಮಾಡಿವೆ.
ಮಂಗಳವಾರ ನಡೆದಿದ್ದ ಚಂಡೀಗಢ ಚುನಾವಣೆಯಲ್ಲಿ ಆಪ್ ಮತ್ತು ಕಾಂಗ್ರೆಸ್ ಮೈತ್ರಿಕೂಟದ ಅಭ್ಯರ್ಥಿ ಪರಾಭವಗೊಂಡ ಬಳಿಕ ಬಿಜೆಪಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಆಪ್ ಮತ್ತು ಕಾಂಗ್ರೆಸ್ ಪಕ್ಷಗಳು, ಮಂಗಳವಾರ ಜಂಟಿ ಪತ್ರಿಕಾಗೋಷ್ಠಿ ನಡೆಸಿ, ಮೇಯರ್ ಚುನಾವಣೆಯನ್ನು ಅಸಾಂವಿಧಾನಿಕ, ಅಕ್ರಮ ಹಾಗೂ ವಂಚನೆ ಎಂದು ದೂರಿದವು.
ಆಪ್ ನಾಯಕ ರಾಘವ್ ಛಡ್ಡಾ, ಕಾಂಗ್ರೆಸ್ ನಾಯಕ ಪವನ್ ಬನ್ಸಾಲ್, ಆಪ್ ಪಕ್ಷದ ಚಂಡೀಗಢ ಉಸ್ತುವಾರಿ ಜರ್ನೈಲ್ ಸಿಂಗ್, ಆಪ್ ನಾಯಕ ಪ್ರೇಮ್ ಗರ್ಗ್ ಹಾಗೂ ಕಾಂಗ್ರೆಸ್ ಚಂಡೀಗಢ ಘಟಕದ ಅಧ್ಯಕ್ಷ ಹರ್ಮೊಹಿಂದರ್ ಸಿಂಗ್ ಲಕ್ಕಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ್ದರು.
ಮೇಯರ್ ಚುನಾವಣೆಯಲ್ಲಿ ಬಿಜೆಪಿ ಎಸಗಿರುವುದು ಅಸಾಂವಿಧಾನಿಕ, ಅಕ್ರಮ ಹಾಗೂ ದೇಶದ್ರೋಹ ಎಂದು ಆಪ್ ನಾಯಕ ರಾಘವ್ ಛಡ್ಡಾ ಆರೋಪಿಸಿದರು.
ಇಂಡಿಯಾ ಮೈತ್ರಿಕೂಟದ ಬಳಿ 20 ಮತಗಳು (13 ಆಪ್ ಹಾಗೂ ಕಾಂಗ್ರೆಸ್ ಬಳಿ 7 ಕೌನ್ಸಿಲರ್ ಗಳು) ಹಾಗೂ ಬಿಜೆಪಿ ಬಳಿ 16 ಮತಗಳು (ಬಿಜೆಪಿಯ 14 ಕೌನ್ಸಿಲರ್ ಗಳು, ಓರ್ವ ಸಂಸದ ಹಾಗೂ ಓರ್ವ ಶಿರೋಮಣಿ ಅಕಾಲಿ ದಳದ ಕೌನ್ಸಿಲರ್) ಮತಗಳಿದ್ದದ್ದು ಎಲ್ಲರಿಗೂ ತಿಳಿದಿದೆ ಎಂದು ರಾಘವ್ ಛಡ್ಡಾ ಹೇಳಿದರು.
ತಮ್ಮ ಪಕ್ಷಗಳ ಚುನಾವಣಾ ಪ್ರತಿನಿಧಿಗಳನ್ನು ಎಣಿಕೆಯ ಮೇಜಿನ ಬಳಿಗೆ ಹೋಗಲು ಅವಕಾಶವನ್ನೇ ನೀಡಲಿಲ್ಲ. ನಿಯಮಗಳ ಪ್ರಕಾರ ಎಲ್ಲ ಚುನಾವಣಾ ಪ್ರತಿನಿಧಿಗಳು ಎಣಿಕೆಯ ಮೇಜಿನ ಬಳಿ ಇರಬೇಕು ಹಾಗೂ ಯಾವುದಾದರೂ ಮತವನ್ನು ಅನೂರ್ಜಿತ ಎಂದು ಘೋಷಿಸಿದರೆ ಅದನ್ನು ಚುನಾವಣಾ ಪ್ರತಿನಿಧಿ ಹಾಗೂ ಉಪ ಆಯುಕ್ತರಿಗೆ ತೋರಿಸಬೇಕು. ಅವರು ಆ ನಿರ್ಧಾರಕ್ಕೆ ಸಮ್ಮತಿ ನೀಡಿದ ನಂತರವಷ್ಟೇ ಅಂತಹ ಮತವನ್ನು ಅನೂರ್ಜಿತ ಎಂದು ಘೋಷಿಸಬೇಕು ಎಂದು ಛಡ್ಡಾ ವಿವರಿಸಿದರು.
ಆದರೆ, ಮತಪತ್ರಗಳನ್ನು ಅನೂರ್ಜಿತಗೊಳಿಸುವಾಗ ಇಂತಹ ಯಾವುದೇ ನಿಯಮಗಳನ್ನು ಪಾಲಿಸಿಲ್ಲ ಎಂದು ಅವರು ಆರೋಪಿಸಿದರು.
ಇಂಡಿಯಾ ಮೈತ್ರಿಕೂಟದ ಕೌನ್ಸಿಲರ್ ಗಳ ಮತಪತ್ರಗಳನ್ನು ಅನೂರ್ಜಿಗೊಳಿಸಲು ಚುನಾವಣಾಧಿಕಾರಿಯು ಅವುಗಳನ್ನು ತಿದ್ದಿದ್ದಾರೆ ಎಂದು ರಾಘವ್ ಛಡ್ಡಾ ಆರೋಪಿಸಿದರು.
ಚಂಡೀಗಢ ಮೇಯರ್ ಚುನಾವಣೆಯಲ್ಲಿ ಇಂಡಿಯಾ ಮೈತ್ರಿಕೂಟದ ಕಾಂಗ್ರೆಸ್ ಹಾಗೂ ಆಪ್ ಮಿತ್ರಪಕ್ಷಗಳಿಗೆ ಭಾರಿ ಹಿನ್ನಡೆಯಾಗಿದ್ದು, ಬಿಜೆಪಿಯು ಸತತ ಒಂಬತ್ತನೆ ಬಾರಿಗೆ ಚಂಡೀಗಢ ಮಹಾನಗರ ಪಾಲಿಕೆಯ ಮೇಯರ್ ಹುದ್ದೆಯನ್ನು ತನ್ನದಾಗಿಸಿಕೊಂಡಿದೆ. ಈ ಚುನಾವಣೆಯಲ್ಲಿ ಕೇವಲ ನಾಲ್ಕು ಮತಗಳ ಅಂತರದಲ್ಲಿ ಬಿಜೆಪಿ ಗೆಲುವಿನ ನಗೆ ಬೀರಿದೆ.
ತಮ್ಮ ಬಳಿ ಅತಿ ಹೆಚ್ಚು ಕೌನ್ಸಿಲರ್ ಗಳಿದ್ದರೂ ಆಪ್-ಕಾಂಗ್ರೆಸ್ ಮೈತ್ರಿಕೂಟವು ಚಂಡೀಗಢ ಮೇಯರ್ ಹುದ್ದೆಯನ್ನು ಕಳೆದುಕೊಂಡಿವೆ.