ಒಂದೇ ದಿನ 11 ಹಿರಿಯ ಮಹಿಳಾ ನ್ಯಾಯವಾದಿಗಳ ನೇಮಕ : ಇತಿಹಾಸ ಸೃಷ್ಟಿಸಿದ ಸುಪ್ರೀಂ ಕೋರ್ಟ್
ಕಳೆದ 75 ವರ್ಷಗಳಲ್ಲಿ ಕೇವಲ 14 ಮಹಿಳಾ ನ್ಯಾಯವಾದಿಗಳು ಈ ಸ್ಥಾನ ಪಡೆದಿದ್ದರು
ಸುಪ್ರೀಂ ಕೋರ್ಟ್ | Photo: PTI
ಹೊಸದಿಲ್ಲಿ : ಸರ್ವೋಚ್ಚ ನ್ಯಾಯಾಲಯವು ಶುಕ್ರವಾರ ಒಂದೇ ದಿನ 11 ಮಹಿಳಾ ನ್ಯಾಯವಾದಿಗಳಿಗೆ ಹಿರಿಯ ವಕೀಲರ ಸ್ಥಾನಮಾನವನ್ನು ನೀಡುವ ಮೂಲಕ ಇತಿಹಾಸವನ್ನು ಸೃಷ್ಟಿಸಿದೆ. ನ್ಯಾಯಾಲಯದ 75 ವರ್ಷಗಳ ಇತಿಹಾಸದಲ್ಲಿ ಕೇವಲ 14 ಮಹಿಳಾ ನ್ಯಾಯವಾದಿಗಳು ಈ ಗೌರವವನ್ನು ಪಡೆದಿದ್ದರು.
ಭಾರತದ ಮುಖ್ಯ ನ್ಯಾಯಾಧೀಶ ಡಿ.ವೈ.ಚಂದ್ರಚೂಡ್ ಅವರ ನೇತೃತ್ವದಡಿ ಶುಕ್ರವಾರ 11 ಮಹಿಳೆಯರು ಮತ್ತು 34 ಮೊದಲ ಪೀಳಿಗೆಯ ನ್ಯಾಯವಾದಿಗಳು ಸೇರಿದಂತೆ 56 ನ್ಯಾಯವಾದಿಗಳಿಗೆ ಹಿರಿಯ ವಕೀಲ ಸ್ಥಾನಮಾನವನ್ನು ನೀಡಲಾಯಿತು.
ಶೋಭಾ ಗುಪ್ತಾ, ಸ್ವರುಪಮಾ ಚತುರ್ವೇದಿ, ಲಿಝ್ ಮ್ಯಾಥ್ಯೂ, ಕರುಣಾ ನಂದಿ, ಉತ್ತರಾ ಬಬ್ಬರ್, ಹರಿಪ್ರಿಯಾ ಪದ್ಮನಾಭನ್, ಅರ್ಚನಾ ಪಾಠಕ್ ದವೆ, ಶಿರಿನ್ ಖಜುರಿಯಾ, ಎನ್.ಎಸ್.ನಪ್ಪಿನೈ, ಎಸ್.ಜನನಿ ಮತ್ತು ನಿಶಾ ಬಾಗ್ಚಿ ಅವರು ಈ 11 ಮಹಿಳಾ ನ್ಯಾಯವಾದಿಗಳಾಗಿದ್ದಾರೆ.
ಅಮಿತ ಆನಂದ ತಿವಾರಿ, ಸೌರಭ್ ಮಿಶ್ರಾ ಮತ್ತು ಅಭಿನವ ಮುಖರ್ಜಿ ಅವರು ಮೊದಲ ಪೀಳಿಗೆಯ ವಕೀಲರಲ್ಲಿ ಸೇರಿದ್ದಾರೆ.
ಶುಕ್ರವಾರ ಸರ್ವೋಚ್ಚ ನ್ಯಾಯಾಲಯದ ಪೂರ್ಣ ನ್ಯಾಯಾಲಯ ಸಭೆಯಲ್ಲಿ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ.
ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರಿಗೆ ಹಿರಿಯ ನ್ಯಾಯವಾದಿ ಸ್ಥಾನಮಾನವನ್ನು ನೀಡುವ ನಿರ್ಧಾರವನ್ನು ಸ್ವಾಗತಿಸಿದ ಹೆಚ್ಚುವರಿ ಸಾಲಿಸಿಟರ್ ಜನರಲ್ ಹಾಗೂ ಹಿರಿಯ ನ್ಯಾಯವಾದಿ ಐಶ್ವರ್ಯಾ ಭಾಟಿ ಅವರು, ಇದು ಸರ್ವೋಚ್ಚ ನ್ಯಾಯಾಲಯದ ಐತಿಹಾಸಿಕ ಹೆಜ್ಜೆಯಾಗಿದೆ ಮತ್ತು ಮಹಿಳಾ ನ್ಯಾಯವಾದಿಗಳ ಅರ್ಹತೆಯನ್ನು ಗುರುತಿಸುವ ಮೂಲಕ ಲಿಂಗ ನ್ಯಾಯಕ್ಕೆ ನಿಜವಾದ ಸೇವೆಯಾಗಿದೆ. ಇದು ಅವರಿಗೆ ಗೌರವವನ್ನು ತೋರಿಸುತ್ತದೆ ಎಂದು ಹೇಳಿದರು.
ಸರ್ವೋಚ್ಚ ನ್ಯಾಯಾಲಯವು ಈವರೆಗೆ ಇಬ್ಬರು ನಿವೃತ್ತ ನ್ಯಾಯಾಧೀಶರು ಸೇರಿದಂತೆ ಕೇವಲ 14 ಮಹಿಳೆಯರಿಗೆ ಹಿರಿಯ ನ್ಯಾಯವಾದಿ ಸ್ಥಾನಮಾನವನ್ನು ನೀಡಿತ್ತು.
ಸರ್ವೋಚ್ಚ ನ್ಯಾಯಾಲಯವು ಅಸ್ತಿತ್ವಕ್ಕೆ ಬಂದ 57 ವರ್ಷಗಳ ಬಳಿಕ 2007ರಲ್ಲಿ ಇಂದು ಮಲೋತ್ರಾ ಹಿರಿಯ ನ್ಯಾಯವಾದಿಯಾಗಿ ನೇಮಕಗೊಂಡಿದ್ದ ಮೊದಲ ಮಹಿಳೆಯಾಗಿದ್ದರು. ನಂತರ ಅವರು ಸರ್ವೋಚ್ಚ ನ್ಯಾಯಾಲಯದ ನ್ಯಾಯಾಧೀಶೆಯಾಗಿದ್ದರು.