ಸಶಸ್ತ್ರ ಪಡೆಗಳ ಅಂಗವೈಕಲ್ಯ ಪಿಂಚಣಿ ನಿಯಮ ಬಿಜೆಪಿಯ ನಕಲಿ ರಾಷ್ಟ್ರವಾದವನ್ನು ತೋರಿಸುತ್ತಿವೆ:ಖರ್ಗೆ ವಾಗ್ದಾಳಿ
ಮಲ್ಲಿಕಾರ್ಜುನ ಖರ್ಗೆ| Photo: PTI
ಹೊಸದಿಲ್ಲಿ : ಅಂಗವೈಕಲ್ಯಗಳಿಂದ ಸೇವೆಯಲ್ಲಿ ಮುಂದುವರಿಯಲು ಅಸಮರ್ಥಗೊಂಡ ಸಶಸ್ತ್ರ ಪಡೆಗಳ ಯೋಧರಿಗೆ ಪಿಂಚಣಿ ಮಂಜೂರು ಮಾಡಲು ಕೇಂದ್ರವು ಬಿಡುಗಡೆಗೊಳಿಸಿರುವ ನೂತನ ನಿಯಮಗಳು ಬಿಜೆಪಿಯ ನಕಲಿ ರಾಷ್ಟ್ರವಾದವನ್ನು ತೋರಿಸುತ್ತಿವೆ ಎಂದು ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆಯವರು ಶನಿವಾರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪರಿಷ್ಕೃತ ನಿಯಮಗಳು ಅಂಗವೈಕಲ್ಯ ಪಿಂಚಣಿಯೊಂದಿಗೆ ನಿವೃತ್ತರಾಗುವ ಸುಮಾರು ಶೇ.40ರಷ್ಟು ಯೋಧರ ಮೇಲೆ ಪ್ರತಿಕೂಲ ಪರಿಣಾಮವನ್ನು ಬೀರುತ್ತವೆ ಮತ್ತು ನೂತನ ನೀತಿಯು ನ್ಯಾಯಾಲಯಗಳ ಹಳೆಯ ತೀರ್ಪುಗಳು, ನಿಯಮಗಳು ಮತ್ತು ಸ್ವೀಕಾರಾರ್ಹ ಜಾಗತಿಕ ಮಾನದಂಡಗಳಿಗೆ ವಿರುದ್ಧವಾಗಿವೆ ಎಂದು ಖರ್ಗೆ ತನ್ನ X ಪೋಸ್ಟ್ ನಲ್ಲಿ ಹೇಳಿದ್ದಾರೆ.
ರಕ್ಷಣಾ ಸಚಿವಾಲಯವು ಸೆ.22ರಂದು ಸಶಸ್ತ್ರ ಪಡೆಗಳ ಯೋಧರಿಗೆ ಅಂಗವೈಕಲ್ಯ ಪ್ರಯೋಜನಗಳ ಮಂಜೂರಾತಿಗೆ ಸಂಬಂಧಿಸಿದಂತೆ ನೂತನ ನಿಯಮಗಳನ್ನು ಬಿಡುಗಡೆಗೊಳಿಸಿತ್ತು. ನೂತನ ನಿಯಮಗಳು ಪಿಂಚಣಿಯ ವ್ಯಾಖ್ಯೆ, ಅರ್ಹತಾ ಮಾನದಂಡಗಳು ಮತ್ತು ಸೇವೆಯ ಸಂದರ್ಭದಲ್ಲಿ ಅಂಗವೈಕಲ್ಯ ಪ್ರಕರಣಗಳಲ್ಲಿ ನೀಡಲಾಗುವ ಪರಿಹಾರದ ಪ್ರಮಾಣವನ್ನು ಬದಲಿಸಿದೆ ಎನ್ನಲಾಗಿದೆ.
ನೂತನ ನಿಯಮಗಳ ವಿರುದ್ಧ ಅಖಿಲ ಭಾರತ ಮಾಜಿ ಯೋಧರ ಕಲ್ಯಾಣ ಸಂಘದ ಪ್ರತಿಭಟನೆಯನ್ನು ಉಲ್ಲೇಖಿಸಿರುವ ಖರ್ಗೆ, ಸರಕಾರದ ಈ ಕ್ರಮವು ನಾಗರಿಕ ಉದ್ಯೋಗಿಗಳಿಗೆ ಹೋಲಿಸಿದರೆ ಯೋಧರಿಗೆ ಅನನುಕೂಲವನ್ನು ಸೃಷ್ಟಿಸಿದೆ ಎಂದು ಹೇಳಿದ್ದಾರೆ.
ಸಶಸ್ತ್ರ ಪಡೆಗಳಿಗೆ ಸಂಬಂಧಿಸಿದ ನಿರ್ಧಾರಗಳಿಗಾಗಿ ಮೋದಿ ಸರಕಾರದ ವಿರುದ್ಧ ಇನ್ನಷ್ಟು ದಾಳಿ ನಡೆಸಿರುವ ಖರ್ಗೆ, ಜೂನ್ 2019ರಲ್ಲಿ ಸರಕಾರವು ಅಂಗವೈಕಲ್ಯ ಪಿಂಚಣಿಯ ಮೇಲೆ ತೆರಿಗೆಯನ್ನು ಪ್ರಕಟಿಸಿತ್ತು. ಸಾರ್ವಜನಿಕ ಆಕ್ರೋಶದ ಬಳಿಕ ಅದು ತನ್ನ ನಿರ್ಧಾರವನ್ನು ಹಿಂದೆಗೆದುಕೊಂಡಿತ್ತು ಎಂದು ನೆನಪಿಸಿದ್ದಾರೆ.
ಮೋದಿ ಸರಕಾರವನ್ನು ಯೋಧರು ಮತ್ತು ಮಾಜಿ ಯೋಧರ ವಿರುದ್ಧ ಕೆಲಸ ಮಾಡುವ ಹವ್ಯಾಸಿ ಅಪರಾಧಿ ಎಂದು ಬಣ್ಣಿಸಿರುವ ಖರ್ಗೆ, ಮಾಜಿ ಯೋಧರ ಕುಂದುಕೊರತೆಗಳನ್ನು ಪರಿಹರಿಸಲು ಆಯೋಗವೊಂದನ್ನು ರಚಿಸುವಂತೆ ಆಗ್ರಹಿಸಿದ್ದಾರೆ.
ಮಾಜಿ ಯೋಧರ ಸಂಘದ ಪ್ರತಿಭಟನೆ
ನೂತನ ನಿಯಮವು ಕಾನೂನು ಮತ್ತು ಸರ್ವೋಚ್ಚ ನ್ಯಾಯಾಲಯದ ತೀರ್ಪುಗಳಿಗೆ ವಿರುದ್ಧವಾಗಿವೆ ಎಂದು ಹೇಳಿರುವ ಮಾಜಿ ಯೋಧರ ಸಂಘವು,ಅದನ್ನು ತಕ್ಷಣ ಹಿಂದೆಗೆದುಕೊಳ್ಳುವಂತೆ ಆಗ್ರಹಿಸಿದೆ.
ಅಂಗವೈಕಲ್ಯ ಪಿಂಚಣಿಯನ್ನು “ದೌರ್ಬಲ್ಯ ಪರಿಹಾರ” ಎಂದು ಹೆಸರಿಸಿರುವುದಕ್ಕೆ ಸಂಘವು ಆಕ್ಷೇಪವನ್ನು ವ್ಯಕ್ತಪಡಿಸಿದೆ. ಅಶಕ್ತತೆಯ ವ್ಯಾಖ್ಯಾನವನ್ನು ಬದಲಿಸಿರುವುದನ್ನು “ಪ್ರತಿಗಾಮಿ” ಕ್ರಮವೆಂದು ಅದು ಬಣ್ಣಿಸಿದೆ.
ಅಶಕ್ತತೆ ಪಿಂಚಣಿಯನ್ನು ಪಡೆಯಲು ಸಶಸ್ತ್ರ ಪಡೆಗಳ ಸಿಬ್ಬಂದಿಗಳು ಕನಿಷ್ಠ 10 ವರ್ಷಗಳ ಸೇವೆಯನ್ನು ಪೂರೈಸಿರುವುದನ್ನು ನಿಯಮಗಳು ಅಗತ್ಯವಾಗಿಸಿವೆ ಎಂದು ಹೇಳಿಕೆಯೊಂದರಲ್ಲಿ ತಿಳಿಸಿರುವ ಸಂಘದ ಅಧ್ಯಕ್ಷ ಭೀಮಸೇನ ಸೆಹಗಲ್ ಅವರು, ನಾಗರಿಕ ಉದ್ಯೋಗಿಗಳಿಗೆ ಈ ಅಗತ್ಯವನ್ನು 2019ರಲ್ಲಿ ರದ್ದುಗೊಳಿಸಲಾಗಿದೆ ಎಂದು ಬೆಟ್ಟು ಮಾಡಿದ್ದಾರೆ.
ರಕ್ಷಣಾ ಸಚಿವಾಲಯವು ಬಿಡುಗಡೆಗೊಳಿಸಿರುವ ನೂತನ ನಿಯಮಗಳಡಿ ಹೃದ್ರೋಗಗಳು ಎತ್ತರದ ಪ್ರದೇಶಗಳಲ್ಲಿ ಉಂಟಾದರೆ ಮಾತ್ರ ಅವುಗಳನ್ನು ಸೇವೆಗೆ ಸಂಬಂಧಿಸಿದ್ದು ಎಂದು ಪರಿಗಣಿಸಲಾಗಿದೆ. ಆದರೆ ನಾಗರಿಕ ಉದ್ಯೋಗಿಗಳ ಪ್ರಕರಣಗಳಲ್ಲಿ ಎಲ್ಲ ಹೃದ್ರೋಗಗಳನ್ನು ಸೇವೆಯಲ್ಲಿನ ಒತ್ತಡಗಳಿಗೆ ಸಂಬಂಧಿಸಿದ್ದು ಎಂದು ಪರಿಗಣಿಸಲಾಗಿದೆ ಎಂದು ಹೇಳಿಕೆಯು ಎತ್ತಿ ತೋರಿಸಿದೆ.
ತರಬೇತಿ ಪಡೆಯುತ್ತಿರುವವರಿಗೆ ಅಂಗವೈಕಲ್ಯ ಪಿಂಚಣಿಯನ್ನು ನೀಡದಿರುವ ತನ್ನ ನೀತಿಯನ್ನು ಸಚಿವಾಲಯವು ಮುಂದುವರಿಸಿದೆ. ಕೆಡೆಟ್ ಗಳು ಸೇವೆಯ ಸಂದರ್ಭದಲ್ಲಿ ಅಂಗವೈಕಲ್ಯ ಪ್ರಕರಣಗಳಲ್ಲಿ ಮಾತ್ರ ಪರಿಹಾರಕ್ಕೆ ಅರ್ಹರಾಗಿರುತ್ತಾರೆ ಎನ್ನುವುದನ್ನು ನೂತನ ನಿಯಮಗಳು ಕಡ್ಡಾಯಗೊಳಿಸಿವೆ ಎಂದೂ ಸಂಘವು ದೂರಿದೆ.