ಪ್ರೇಮ ವಿವಾಹವಾಗಿದ್ದ ಸೇನಾ ದಂಪತಿ ಬೇರೆ ಬೇರೆ ಕಡೆ ಆತ್ಮಹತ್ಯೆ
ಆಗ್ರಾ: ಭಾರತೀಯ ವಾಯುಪಡೆಯಲ್ಲಿ ಫ್ಲೈಟ್ ಲೆಫ್ಟಿನೆಂಟ್ ಆಗಿದ್ದ ಅಧಿಕಾರಿ ಹಾಗೂ ಸೇನೆಯಲ್ಲಿ ಕ್ಯಾಪ್ಟನ್ ಆಗಿದ್ದ ಪತ್ನಿ ಕ್ರಮವಾಗಿ ಆಗ್ರಾ ಮತ್ತು ದೆಹಲಿಯಲ್ಲಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಬೆಳಕಿಗೆ ಬಂದಿದೆ. ಮೃತಪಟ್ಟವರನ್ನು ಫ್ಲೈಟ್ ಲೆಫ್ಟಿನೆಂಟ್ ದೀನ ದಯಾಳ್ ದೀಪ್ (32) ಮತ್ತು ಅವರ ಪತ್ನಿ ಕ್ಯಾಪ್ಟನ್ ರೇಣು ತನ್ವರ್ ಎಂದು ಗುರುತಿಸಲಾಗಿದೆ. ದೀಪ್ ಆಗ್ರಾದ ವಾಯುನೆಲೆಯಲ್ಲಿ ಸೇವೆಯಲ್ಲಿದ್ದರೆ ಅವರ ಪತ್ನಿ ಅದೇ ನಗರದ ಸೇನಾ ಆಸ್ಪತ್ರೆಯಲ್ಲಿ ಸೇವೆಯಲ್ಲಿದ್ದರು.
ತಾಯಿಯ ಚಿಕಿತ್ಸೆಗಾಗಿ ದೆಹಲಿಗೆ ಆಗಮಿಸಿದ್ದ ಕ್ಯಾಪ್ಟನ್ ತನ್ವರ್ ಅವರ ಮೃತದೇಹ ದೆಹಲಿ ಕಂಟೋನ್ಮೆಂಟ್ ನ ಮೆಸ್ ನಲ್ಲಿ ಪತ್ತೆಯಾಗಿದ್ದು, ದೀಪ್ ಮೃತದೇಹ ಅವರ ಅಗ್ರಾ ಕ್ವಾರ್ಟಸ್ ನಲ್ಲಿ ಫ್ಯಾನಿಗೆ ನೇತುಹಾಕಿದ ಸ್ಥಿತಿಯಲ್ಲಿ ಕಂಡುಬಂದಿದೆ.
ದೆಹಲಿ ಪೊಲೀಸರಿಗೆ ಆತ್ಮಹತ್ಯೆ ಟಿಪ್ಪಣಿ ಸಿಕ್ಕಿದ್ದು, ತಮ್ಮ ಪತಿಯ ಜತೆಗೆ ಮೃತದೇಹದ ಅಂತ್ಯಸಂಸ್ಕಾರ ನಡೆಸಬೇಕು ಎಂದು ಮಹಿಳೆ ಬಯಸಿದ್ದಾರೆ. ಆದರೆ ಆಗ್ರಾದಲ್ಲಿ ಪತಿಯ ಕ್ವಾರ್ಟಸ್ ನಲ್ಲಿ ಯಾವುದೇ ಆತ್ಮಹತ್ಯೆ ಟಿಪ್ಪಣಿ ಸಿಕ್ಕಿಲ್ಲ. ವಾಯುನೆಲೆ ಅಧಿಕಾರಿಗಳು ಮಾಹಿತಿ ನೀಡಿದ ಬಳಿಕ ಈ ವಿಷಯ ನಮ್ಮ ಗಮನಕ್ಕೆ ಬಂದಿದೆ ಎಂದು ಆಗ್ರಾ ಉಪ ಡಿಸಿಪಿ ಸೂರಜ್ ಕುಮಾರ್ ರಾಯ್ ಹೇಳಿದ್ದಾರೆ.
ಮೂಲತಃ ಬಿಹಾರದ ನಳಂದಾ ಜಿಲ್ಲೆಯವರಾದ ದೀಪ್ ತಮ್ಮ ಸಹೋದ್ಯೋಗಿಗಳ ಜತೆಗೆ ರಾತ್ರಿ ಊಟ ಮಾಡಿದ್ದು, ಅವರ ಜತೆಗೆ ಮಾತುಕತೆ ವೇಳೆ ಜೋಕ್ ಗಳನ್ನು ಹೇಳಿದ್ದರು ಎಂದು ಸಹೋದ್ಯೋಗಿಗಳು ತಿಳಿಸಿದ್ದಾರೆ. ಅವರು ಎಲ್ಲರಿಗೂ ಶುಭರಾತ್ರಿ ಹೇಳಿ ತಮ್ಮ ನಿವಾಸಕ್ಕೆ ತೆರಳಿದಾಗ ಯಾವುದೇ ಒತ್ತಡ ಅಥವಾ ಆತಂಕದ ಛಾಯೆ ಇರಲಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಮರುದಿನ ಬೆಳಿಗ್ಗೆ ಅವರು ಏಳದೇ ಇದ್ದಾಗ ಸಹೋದ್ಯೋಗಿಗಳು ಬಾಗಿಲು ಒಡೆದು ನೋಡಿದಾಗ ಮೃತ ಸ್ಥಿತಿಯಲ್ಲಿದ್ದರು.
ದೆಹಲಿಯಲ್ಲಿ ಆತ್ಮಹತ್ಯೆ ಮಾಡಿಕೊಂಡ ರೇಣು ತನ್ವರ್ ಅವರ ಸಾವಿನ ಬಗ್ಗೆ ಎಐಐಎಂಎಸ್ ನಲ್ಲಿದ್ದ ತಾಯಿ ಹಾಗೂ ಸಹೋದರ ಮಾಹಿತಿ ನೀಡಿದ್ದಾರೆ. ಅವರ ಪತಿ ಆತ್ಮಹತ್ಯೆ ಮಾಡಿಕೊಂಡ ವಿಚಾರ ಆ ಮೇಲೆ ತಿಳಿಯಿತು. ಇಬ್ಬರೂ ಪ್ರೇಮ ವಿವಾಹವಾಗಿದ್ದರು ಎಂದು ದೆಹಲಿ ಪೊಲೀಸರು ಹೇಳಿದ್ದಾರೆ.