ಅರವಿಂದ್ ಕೇಜ್ರಿವಾಲ್ ಕಾರಿನ ಮೇಲೆ ದಾಳಿ: ಆಪ್ ಆರೋಪ
ಕಾರು ಇಬ್ಬರಿಗೆ ಢಿಕ್ಕಿ ಹೊಡೆದಿದೆ: ಬಿಜೆಪಿ ಪ್ರತ್ಯಾರೋಪ

PC : PTI
ಹೊಸದಿಲ್ಲಿ: ಮುಂಬರುವ ದಿಲ್ಲಿ ವಿಧಾನಸಭೆ ಚುನಾವಣೆಗಾಗಿ ನಡೆಯುತ್ತಿರುವ ಮನೆಮನೆ ಪ್ರಚಾರದ ವೇಳೆ ಆಪ್ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ರ ಬೆಂಗಾವಲು ಪಡೆಯ ಮೇಲೆ ಹೊಸದಿಲ್ಲಿ ವಿಧಾನಸಭಾ ಕ್ಷೇತ್ರದಲ್ಲಿ ಹಲ್ಲೆ ನಡೆಸಲಾಗಿದೆ ಎಂದು ಶನಿವಾರ ಆಮ್ ಆದ್ಮಿ ಪಕ್ಷ ಆರೋಪಿಸಿದೆ.
ಪ್ರಚಾರದ ವೇಳೆ ಅರವಿಂದ್ ಕೇಜ್ರಿವಾಲ್ ಕಾರಿನತ್ತ ಕಲ್ಲು ತೂರುವ ಮೂಲಕ ಬಿಜೆಪಿಯು ಆಪ್ ಚುನಾವಣಾ ಪ್ರಚಾರಕ್ಕೆ ಅಡ್ಡಿಪಡಿಸಲು ಯತ್ನಿಸುತ್ತಿದೆ ಎಂದೂ ದೂರಿದೆ. ಇದಕ್ಕೆ ಪ್ರತಿಯಾಗಿ, ಚುನಾವಣಾ ಪ್ರಚಾರದ ವೇಳೆ ಅರವಿಂದ್ ಕೇಜ್ರಿವಾಲ್ ರ ಕಾರು ಇಬ್ಬರು ವ್ಯಕ್ತಿಗಳ ಮೇಲೆ ಹರಿದಿದೆ ಎಂದು ಬಿಜೆಪಿಯ ಸಂಸದ ಪರ್ವೇಶ್ ವರ್ಮ ಪ್ರತ್ಯಾರೋಪ ಮಾಡಿದ್ದಾರೆ.
ಆಪ್ ಘಟನೆಯ ವಿಡಿಯೊವನ್ನು ಬಿಡುಗಡೆ ಮಾಡಿದ್ದು, ಆ ವಿಡಿಯೊದಲ್ಲಿ ಅರವಿಂದ್ ಕೇಜ್ರಿವಾಲ್ ರ ಕಾರಿನ ಮೇಲೆ ಕಲ್ಲು ಬೀಳುತ್ತಿರುವುದನ್ನು ನೋಡಬಹುದಾಗಿದೆ.
ಈ ಕುರಿತು ಎಕ್ಸ್ ನಲ್ಲಿ ವಿಡಿಯೊವೊಂದನ್ನು ಪೋಸ್ಟ್ ಮಾಡಿರುವ ಆಪ್, “ಬಿಜೆಪಿ ಅಭ್ಯರ್ಥಿ ಪರ್ವೇಶ್ ವರ್ಮ ಕಡೆಯ ಗೂಂಡಾಗಳು ಪ್ರಚಾರದ ವೇಳೆ ಅರವಿಂದ್ ಕೇಜ್ರಿವಾಲ್ ಮೇಲೆ ಕಲ್ಲುಗಳಿಂದ ಹಲ್ಲೆ ನಡೆಸಿದ್ದು, ಅವರು ಪ್ರಚಾರ ಮಾಡದಂತೆ ತಡೆಯಲು ಅವರನ್ನು ಗಾಯಗೊಳಿಸಲು ಪ್ರಯತ್ನಿಸಿದ್ದಾರೆ. ಬಿಜೆಪಿ ಜನರೇ, ನಿಮ್ಮ ಹೇಡಿ ಕೃತ್ಯದಿಂದ ಕೇಜ್ರಿವಾಲ್ ಹೆದರಿಕೊಳ್ಳುವುದಿಲ್ಲ. ದಿಲ್ಲಿಯ ಜನರು ನಿಮಗೆ ತಕ್ಕ ಉತ್ತರ ನೀಡಲಿದ್ದಾರೆ” ಎಂದು ವಾಗ್ದಾಳಿ ನಡೆಸಿದೆ.
ಆ ವಿಡಿಯೊದಲ್ಲಿ ಕೇಜ್ರಿವಾಲ್ ರ ಬೆಂಗಾವಲು ವಾಹನದ ಬಳಿ ಕೆಲವು ವ್ಯಕ್ತಿಗಳು ಕಪ್ಪು ಬಾವುಟ ಪ್ರದರ್ಶನ ಮಾಡುತ್ತಿರುವುದನ್ನೂ ಕಾಣಬಹುದಾಗಿದೆ. ಈ ಕೃತ್ಯವು ಪ್ರಚಾರಕ್ಕೆ ಅಡ್ಡಿಪಡಿಸುವ ಉದ್ದೇಶಪೂರ್ವಕ ಪ್ರಯತ್ನದ ಭಾಗವಾಗಿದೆ ಎಂದು ಆಪ್ ಆರೋಪಿಸಿದೆ.
ಆಪ್ ಆರೋಪದ ಕೆಲವೇ ನಿಮಿಷಗಳ ಅಂತರದಲ್ಲಿ ವಿಡಿಯೊವೊಂದನ್ನು ಹಂಚಿಕೊಂಡಿರುವ ಬಿಜೆಪಿಯ ಪರ್ವೇಶ್ ವರ್ಮ, ಹೊಸ ದಿಲ್ಲಿ ವಿಧಾನಸಭಾ ಚುನಾವಣಾ ಪ್ರಚಾರದ ವೇಳೆ ಕೇಜ್ರಿವಾಲ್ ರ ಬೆಂಗಾವಲು ವಾಹನ ಇಬ್ಬರು ವ್ಯಕ್ತಿಗಳ ಮೇಲೆ ಹರಿದಿದೆ ಎಂದು ಪ್ರತ್ಯಾರೋಪ ಮಾಡಿದ್ದಾರೆ.
“ಜನರು ಪ್ರಶ್ನೆ ಕೇಳುವಾಗ, ಕೇಜ್ರಿವಾಲ್ ಇಬ್ಬರು ಯುವಕರಿಗೆ ತಮ್ಮ ಕಾರಿನಿಂದ ಗುದ್ದಿದ್ದಾರೆ. ಇಬ್ಬರನ್ನೂ ಲೇಡಿ ಹಾರ್ಡಿಂಗೆ ಆಸ್ಪತ್ರೆಗೆ ತೆಗೆದುಕೊಂಡು ಹೋಗಲಾಗಿದೆ. ಪರಾಭವಗೊಳ್ಳುವ ಭೀತಿಯಿಂದ, ಅವರು ಜನರ ಜೀವದ ಬೆಲೆಯನ್ನೇ ಮರೆತಿದ್ದಾರೆ. ನಾನು ಆಸ್ಪತ್ರೆಗೆ ತೆರಳುತ್ತಿದ್ದೇನೆ” ಎಂದು ಅವರು ಎಕ್ಸ್ ನಲ್ಲಿ ಆರೋಪಿಸಿದ್ದಾರೆ.
ಈ ನಡುವೆ, ಆಪ್ ಪಕ್ಷದ ಆರೋಪಗಳನ್ನು ಅಲ್ಲಗಳೆದಿರುವ ದಿಲ್ಲಿ ಪೊಲೀಸರು, ಯಾವುದೇ ದಾಳಿ ನಡೆದಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ. ಮೂಲಗಳ ಪ್ರಕಾರ, ಅರವಿಂದ್ ಕೇಜ್ರಿವಾಲ್ ಲಾಲ್ ಬಹದ್ದೂರ್ ಸದನ್ ನಲ್ಲಿ ಸಾರ್ವಜನಿಕ ಸಭೆಯನ್ನು ಹಮ್ಮಿಕೊಂಡಿದ್ದಾಗ ಕೆಲವು ಬಿಜೆಪಿ ಕಾರ್ಯಕರ್ತರು ಅಲ್ಲಿಗೆ ಆಗಮಿಸಿದ್ದು, ಕೆಲವು ಪ್ರಶ್ನೆ ಗಳನ್ನು ಕೇಳಲು ಬಯಸಿದರು. ಇದರಿಂದ ಎರಡು ಬದಿಯವರೂ ಘೋಷಣೆಗಳನ್ನು ಕೂಗಿದರು. ಆಗ ಮಧ್ಯಪ್ರವೇಶಿಸಿದ ಪೊಲೀಸರು, ಪರಿಸ್ಥಿತಿಯನ್ನು ನಿಯಂತ್ರಿಸಲು ಎರಡೂ ಗುಂಪುಗಳನ್ನು ಸ್ಥಳದಿಂದ ಚದುರಿಸಿದರು ಎನ್ನಲಾಗಿದೆ.
ಫೆ. 5ರಂದು ದಿಲ್ಲಿ ವಿಧಾನಸಭಾ ಚುನಾವಣೆ ನಿಗದಿಯಾಗಿದ್ದು, ಎಲ್ಲ ಪಕ್ಷಗಳಿಂದಲೂ ಚುನಾವಣಾ ಪ್ರಚಾರ ಕಾವೇರಿದೆ.