ಅರವಿಂದ್ ಕೇಜ್ರಿವಾಲ್ ಗೆ ಜೂನ್ 1 ರವರೆಗೆ ಮಧ್ಯಂತರ ಜಾಮೀನು
ಹೊಸದಿಲ್ಲಿ: ದಿಲ್ಲಿ ಅಬಕಾರಿ ನೀತಿ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯದಿಂದ ಬಂಧಿತರಾಗಿರುವ ದಿಲ್ಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರಿಗೆ ಇಂದು ಸುಪ್ರೀಂ ಕೋರ್ಟ್ ಜೂನ್ 1ರ ತನಕ ಮಧ್ಯಂತರ ಜಾಮೀನು ಮಂಜೂರುಗೊಳಿಸಿದೆ.
ಅಂತಿಮ ಹಂತದ ಮತದಾನ ನಡೆಯುವ ತನಕ ಅವರಿಗೆ ಮಧ್ಯಂತರ ಜಾಮೀನು ದೊರಕಿದ್ದು ಜೂನ್ 2ರಂದು ಜೈಲಿಗೆ ವಾಪಸಾಗಬೇಕೆಂದು ಸುಪ್ರೀಂ ಕೋರ್ಟ್ ಸೂಚಿಸಿದೆ. ಮಾರ್ಚ್ 21ರಂದು ಜಾರಿ ನಿರ್ದೇಶನಾಲಯ ಕೇಜ್ರಿವಾಲ್ ಅವರನ್ನು ಬಂಧಿಸಿತ್ತು.
ತಮ್ಮ ಬಂಧನವನ್ನು ಪ್ರಶ್ನಿಸಿ ಹಾಗೂ ಲೋಕಸಭಾ ಚುನಾವಣೆಗೆ ಪ್ರಚಾರ ಮಾಡಲು ಅನುವು ಮಾಡಿಕೊಡಲು ಜಾಮೀನು ಒದಗಿಸಬೇಕೆಂಬ ಕೇಜ್ರಿವಾಲ್ ಅವರ ಅರ್ಜಿಗೆ ಜಾರಿ ನಿರ್ದೇಶನಾಲಯ ಆಕ್ಷೇಪಿಸಿತ್ತು.
ಜಸ್ಟಿಸ್ ಸಂಜೀವ್ ಖನ್ನಾ ಮತ್ತು ಜಸ್ಟಿಸ್ ದೀಪಾಂಕರ್ ದತ್ತಾ ಅವರ ಪೀಠ ಇಂದು ಕೇಜ್ರಿವಾಲ್ ಅವರಿಗೆ ಮಧ್ಯಂತರ ಜಾಮೀನು ನೀಡಲು ಒಪ್ಪಿದೆ. ಜೂನ್ 2ರಂದು ಶರಣಾಗಬೇಕೆಂದು ನ್ಯಾಯಾಲಯ ಸೂಚಿಸಿದೆ.
ಕೇಜ್ರಿವಾಲ್ ಅವರಿಗೆ ಜೂನ್ 5ರ ತನಕ ಮಧ್ಯಂತರ ಜಾಮೀನು ದೊರಕಬಹುದೇ ಎಂದು ಅವರ ಪರ ವಕೀಲ ಅಭಿಷೇಕ್ ಮನು ಸಿಂಘ್ವಿ ಕೇಳಿದಾಗ ಜಸ್ಟಿಸ್ ಖನ್ನಾ ನಕಾರಾತ್ಮಕವಾಗಿ ಸ್ಪಂದಿಸಿದರು.
ಈಡಿ ಪರ ಹಾಜರಿದ್ದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ, ಬಿಡುಗಡೆ ನಂತರ ಕೇಜ್ರಿವಾಲ್ ಪ್ರಕರಣದ ಬಗ್ಗೆ ಮಾತನಾಡಕೂಡದು ಎಂದು ಹೇಳಿದರು.