ನನ್ನ ಭದ್ರತೆಗೆ ಗುಜರಾತ್ ಪೊಲೀಸರನ್ನೇ ಯಾಕೆ ನಿಯೋಜಿಸಿದ್ದಾರೆ?: ಕೇಜ್ರಿವಾಲ್ ಪ್ರಶ್ನೆ

ಅರವಿಂದ್ ಕೇಜ್ರಿವಾಲ್ (Photo: PTI)
ಹೊಸದಿಲ್ಲಿ: ನನ್ನ ಭದ್ರತೆಗೆ ನಿಯೋಜಿಸಲಾಗಿದ್ದ ಪಂಜಾಬ್ ಪೊಲೀಸ್ ಸಿಬ್ಬಂದಿಯನ್ನು ವಾಪಾಸ್ಸು ಕರೆಸಿಕೊಂಡು ಗುಜರಾತ್ ಪೊಲೀಸರನ್ನು ಯಾಕೆ ನಿಯೋಜಿಸಲಾಗಿದೆ ಎಂದು ದಿಲ್ಲಿಯ ಮಾಜಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಪ್ರಶ್ನಿಸಿದ್ದಾರೆ.
ಪಂಜಾಬ್ ಪೊಲೀಸರಿಗೆ ಚುನಾವಣಾ ಆಯೋಗ ಮತ್ತು ದಿಲ್ಲಿ ಪೊಲೀಸರು ಗುರುವಾರ ಕೇಜ್ರಿವಾಲ್ ಭದ್ರತೆಗಾಗಿ ನಿಯೋಜಿಸಲಾಗಿದ್ದ ಸಿಬ್ಬಂದಿಯನ್ನು ವಾಪಾಸ್ಸು ಕರೆಸಿಕೊಳ್ಳುವಂತೆ ಸೂಚಿಸಿದ್ದಾರೆ. ಎರಡು ವಿಭಿನ್ನ ರಾಜ್ಯಗಳ ಪೊಲೀಸ್ ಸಿಬ್ಬಂದಿಯನ್ನು ಒಳಗೊಂಡ ಭದ್ರತಾ ವ್ಯವಸ್ಥೆಯು ಕಾನೂನಿಗೆ ವಿರುದ್ಧವಾಗಿದೆ ಎಂದು ದಿಲ್ಲಿ ಪೊಲೀಸರು ತಿಳಿಸಿದ್ದಾರೆ.
ಎಎಪಿ ರಾಷ್ಟ್ರೀಯ ಸಂಚಾಲಕ, ಮಾಜಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಈ ಕುರಿತು ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದು, ಗುಜರಾತ್ ಪೊಲೀಸರನ್ನು ಭದ್ರತೆಗಾಗಿ ನಿಯೋಜಿಸಿದ ಆದೇಶದ ಸ್ಕ್ರೀನ್ ಶಾಟ್ ಗಳನ್ನು ಹಂಚಿಕೊಂಡು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಚುನಾವಣಾ ಆಯೋಗವು ಪಂಜಾಬ್ ಪೊಲೀಸರನ್ನು ವಾಪಾಸ್ಸು ಕರೆಸಿಕೊಂಡು ಗುಜರಾತ್ ಪೊಲೀಸರನ್ನು ನಿಯೋಜಿಸಿದೆ. ದಿಲ್ಲಿಯಲ್ಲಿ ಏನು ನಡೆಯುತ್ತಿದೆ? ಇದರ ಹಿಂದಿನ ಉದ್ದೇಶವೇನು? ಎಂದು ಪ್ರಶ್ನಿಸಿದ್ದಾರೆ.
ಕೇಜ್ರಿವಾಲ್ ಪ್ರಶ್ನೆಗೆ ಪ್ರತಿಕ್ರಿಯಿಸಿದ ಗುಜರಾತ್ ಗೃಹ ಸಚಿವ ಹರ್ಷ ಸಾಂಘ್ವಿ, ವಿವಿಧ ರಾಜ್ಯಗಳಿಗೆ ಚುನಾವಣಾ ಆಯೋಗದ ಆದೇಶದಂತೆ ಸಿಬ್ಬಂದಿಯನ್ನು ಒದಗಿಸಲಾಗಿದೆ. ನಿಮಗೆ ಚುನಾವಣಾ ಆಯೋಗದ ನಿಯಮಗಳ ಬಗ್ಗೆ ತಿಳಿದಿಲ್ಲ ಎಂದು ನನಗೆ ಆಶ್ಚರ್ಯವಾಗಿದೆ. ಅವರು ಗುಜರಾತ್ ಮಾತ್ರವಲ್ಲದೆ ವಿವಿಧ ರಾಜ್ಯಗಳಿಂದ ಪಡೆಗಳನ್ನು ಕೋರಿದ್ದಾರೆ. ಅವರ ಕೋರಿಕೆಯಂತೆ, ಚುನಾವಣೆಗಾಗಿ ಗುಜರಾತ್ ನಿಂದ 8 ಎಸ್ ಆರ್ ಪಿ ತುಕಡಿಗಳನ್ನು ದಿಲ್ಲಿಗೆ ಕಳುಹಿಸಲಾಗಿದೆ. ಗುಜರಾತ್ ನ್ನೇ ಏಕೆ ಪ್ರತ್ಯೇಕವಾಗಿ ಉಲ್ಲೇಖಿಸಿದ್ದೀರಿ ಎಂದು ಕೇಜ್ರಿವಾಲ್ ಗೆ ಪ್ರಶ್ನಿಸಿದ್ದಾರೆ.