ಒಂದೇ ವಿಮಾನದಲ್ಲಿ ದಿಲ್ಲಿಗೆ ಹೊರಟಿರುವ ತೇಜಸ್ವಿ ಯಾದವ್, ನಿತೀಶ್ ಕುಮಾರ್
Photo: NDTV
ಹೊಸದಿಲ್ಲಿ: ಮಂಗಳವಾರ ಪ್ರಕಟಗೊಂಡ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ತಾನಾಗಿಯೇ ಸ್ಪಷ್ಟ ಬಹುಮತ ಪಡೆಯದೇ ಇರುವುದು ಹಾಗೂ ಸರ್ಕಾರ ರಚಿಸಲು ಎನ್ಡಿಎ ಮಿತ್ರಪಕ್ಷಗಳಾದ ಟಿಡಿಪಿ ಮತ್ತು ಜೆಡಿ(ಯು) ಅನ್ನು ಅವಲಂಬಿಸಬೇಕಾದ ಅನಿವಾರ್ಯತೆ ಇರುವುದು ದೇಶದೆಲ್ಲೆಡೆ ಕುತೂಹಲಕ್ಕೆಡೆ ಮಾಡಿಕೊಟ್ಟಿರುವ ನಡುವೆ ಇಂದು ನಡೆಯಲಿರುವ ಎನ್ಡಿಎ ಮತ್ತು ಇಂಡಿಯಾ ಮೈತ್ರಿಕೂಟಗಳ ಮಹತ್ವದ ಸಭೆಗಳತ್ತ ಎಲ್ಲರ ಗಮನ ನೆಟ್ಟಿದೆ.
ಇಂದು ಬಿಹಾರದಿಂದ ದಿಲ್ಲಿಗೆ ಆರ್ಜೆಡಿ ನಾಯಕ ತೇಜಸ್ವಿ ಯಾದವ್ ಮತ್ತು ಜೆಡಿ(ಯು) ನಾಯಕ ನಿತೀಶ್ ಕುಮಾರ್ ಬೇರೆ ಬೇರೆ ಸಭೆಗಳಲ್ಲಿ ಭಾಗವಹಿಸಲು ತೆರಳುತ್ತಿದ್ದರೂ ಒಂದೇ ವಿಮಾನದಲ್ಲಿ ಪ್ರಯಾಣಿಸುತ್ತಿರುವುದು ಇನ್ನಷ್ಟು ಕುತೂಹಲಕ್ಕೆಡೆ ಮಾಡಿದೆ.
ಜೆಡಿ(ಯು) ಪಕ್ಷ ಎನ್ಡಿಎ ಜೊತೆಗೆ ಮುಂದುವರಿಯಲಿದೆ ಎಂದು ನಿತೀಶ್ ಕುಮಾರ್ ಅವರ ಸಮೀಪವರ್ತಿ ಕೆ ಸಿ ತ್ಯಾಗಿ ನಿನ್ನೆ ಹೇಳಿದ್ದರು. ಇನ್ನೊಂದೆಡೆ ಟಿಡಿಪಿ ನಾಯಕ ಚಂದ್ರಬಾಬು ನಾಯ್ಡು ಎನ್ಡಿಎ ಗೆಲುವಿಗೆ ಪ್ರಧಾನಿಗೆ ಅಭಿನಂದನೆ ಸಲ್ಲಿಸಿದರಲ್ಲದೆ, ರಾಜ್ಯದಲ್ಲಿ ತಮ್ಮ ಪಕ್ಷ ಅಧಿಕಾರಕ್ಕೆ ಬಂದಿರುವುದರಿಂದ ಟಿಡಿಪಿ ಮತ್ತು ಬಿಜೆಪಿ ಜೊತೆಯಾಗಿ ರಾಜ್ಯವನ್ನು ಪ್ರಗತಿಯ ಪಥದಲ್ಲಿ ಸಾಗಿಸಲಿವೆ ಎಂದಿದ್ದರು.
ಆದರೆ ನಾಯ್ಡು ಮತ್ತು ನಿತೀಶ್ ಕುಮಾರ್ ಹಿಂದೆ ಪ್ರಧಾನಿ ಮೋದಿ ಮತ್ತು ಬಿಜೆಪಿಯ ಕಟು ಟೀಕಾಕಾರರಾಗಿದ್ದರು.